ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧೀಜಿ ಕುರಿತ ಹೇಳಿಕೆ| ಪ್ರಧಾನಿಗೆ ಶೋಭೆ ತರದು: ಕಿಮ್ಮನೆ ರತ್ನಾಕರ

ಪ್ರಧಾನಿಗೆ ಗಾಂಧೀಜಿ ಕುರಿತು ಗೊತ್ತಿಲ್ಲದಿರುವುದು ದುರಂತ ಸಂಗತಿ: ಕಿಮ್ಮನೆ
Published 30 ಮೇ 2024, 15:53 IST
Last Updated 30 ಮೇ 2024, 15:53 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಮಹಾತ್ಮ ಗಾಂಧೀಜಿಗೆ ಸರಿಸಮಾನವಾದ ವ್ಯಕ್ತಿ ಯಾರಿದ್ದಾರೆ ಹೇಳಿ? ಅಂತಹ ಮಹಾನ್‌ ವ್ಯಕ್ತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಗಾಂಧಿ ಸಿನಿಮಾ ಹೊರಬರುವವರೆಗೆ ಜಗತ್ತಿಗೆ ಗಾಂಧೀಜಿ ಬಗ್ಗೆ ಗೊತ್ತಿರಲಿಲ್ಲ’ ಎಂದು ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. 

‘ಮೋದಿ ಅವರು ಗಾಂಧೀಜಿ ಕುರಿತು ಓದಿದಂತೆ ಕಾಣುತ್ತಿಲ್ಲ. ಇಂತಹ ಪ್ರಧಾನಿ ದೇಶ ಮುನ್ನಡೆಸುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಗಾಂಧೀಜಿ ಕುರಿತು ಮಾತನಾಡುವ ನೈತಿಕ ಹಕ್ಕು ಮೋದಿಗೆ ಇಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. 

‘ಗಾಂಧಿ  ಸತ್ತ ದಿನ ಇಡೀ ಪ್ರಪಂಚದಲ್ಲಿ ಅರ್ಧ ಬಾವುಟ ಹಾರಿಸಲಾಯಿತು.  83 ನೋಬೆಲ್  ಪ್ರಶಸ್ತಿ ವಿಜೇತ ವಿಜ್ಞಾನಿಗಳು ಗಾಂಧಿ ಆರ್ಥಿಕ ನೀತಿ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಮಾದರಿ ಆಗಿದ್ದಾರೆ. ಗಾಂಧಿ ಜೀವನ ಚರಿತ್ರೆ ಬಗ್ಗೆ 450 ಜನಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. 260 ದೇಶಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳು ಇವೆ. 143 ದೇಶಗಳಲ್ಲಿ ಅವರ ಪುತ್ಥಳಿ ಇವೆ. ಅಂತಹ ಮಹಾನ್‌ ವ್ಯಕ್ತಿ ಬಗ್ಗೆ ಪ್ರಧಾನಿಗೆ ಗೊತ್ತಿಲ್ಲ. ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕಾ’ ಎಂದು ಪ್ರಶ್ನಿಸಿದರು. 

‘ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಸರ್ಮಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಗೆ ಕಾರ್ಮಿಕ ವಿರೋಧಿ ನೀತಿ ಮತ್ತು ಹಳೆ ಪಿಂಚಣಿ ರದ್ದು ಮಾಡಿರುವುದು ಚುನಾವಣೆಯಲ್ಲಿ ಮುಳುವಾಗಲಿದೆ. ಕಾರ್ಮಿಕರ ದುಡಿಮೆಯನ್ನು 12 ತಾಸಿಗೆ ಹೆಚ್ಚಿಸಿದ್ದಾರೆ. ಇದು ನಾಚಿಗೇಡು ಸಂಗತಿಯಾಗಿದೆ’ ಎಂದರು. 

‘ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ ಅವರು ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆಲುವಿನ ನಗೆ ಬೀರಲಿದ್ದಾರೆ. ಆಯನೂರು ಅವರ ಹೋರಾಟವನ್ನು ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರೊಬ್ಬ ಜನಪರವಾದ ಜೀವಿಯಾಗಿದ್ದಾರೆ’ ಎಂದು ಹೇಳಿದರು. 

‘ನಾನು ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ.  ಪ್ರೌಢ ಶಾಲೆ ಶಿಕ್ಷಕಕರಿಗೆ ಮತ್ತು ಕಾಲೇಜು ಉಪನ್ಯಾಸಕರಿಗೆ ಇನ್‌ಕ್ರಿಮೆಂಟ್‌ ನೀಡಿದ್ದೇನೆ. ಪಿಯು ಉಪನ್ಯಾಸಕರ ನೇಮಕಾತಿಯನ್ನು ಶಿಕ್ಷಣ ಸಚಿವ ಕಾಗೇರಿ ಅವರು ಎನ್‌ಸಿಆರ್‌ಟಿ ನಿಯಮ ವಿರುದ್ಧವಾಗಿ ಮಾಡಿಕೊಂಡಿದ್ದರು. ನಾನು ಅವರಿಗೆ 10 ತಿಂಗಳ ಬಿ.ಇಡಿ ಮಾಡಲು ಅವಕಾಶ ನೀಡಿದ್ದೇನೆ. ವೇತನ ಸಮೇತ ಅವಕಾಶ ನೀಡಲಾಗಿದೆ. ಹೀಗಾಗಿಯೇ ನಮಗೆ ಬೆಂಬಲಿಸಲಿದ್ದಾರೆ’ ಎಂದರು. 

‘ಕಾಂಗ್ರೆಸ್‌ ಸರ್ಕಾರ ಹಳೆ ಪಿಂಚಣಿಯನ್ನು ಜಾರಿಗೊಳಿಸಲಿದೆ. ಇದಲ್ಲದೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಸಕಾರಾತ್ಮಕವಾದ ಕ್ರಮ ಕೈಗೊಳ್ಳುತ್ತಿದೆ. ನೌಕರರ ಪರವಾಗಿದೆ’ ಎಂದು ಹೇಳಿದರು. 

ರಮೇಶ ಹೆಗಡೆ, ವಿಜಯಕುಮಾರ್‌, ದೇವರಾಜ, ಕಲಿಂ ಪಾಷಾ, ಆದರ್ಶ, ಗಗನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT