ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಧಾರಣೆಯಲ್ಲಿ ದಿಢೀರ್ ಕುಸಿತ: ಕೇಂದ್ರದೊಂದಿಗೆ ಮಾತುಕತೆಗೆ ಬಿಎಸ್‌ವೈ ಭರವಸೆ

Published 28 ಫೆಬ್ರುವರಿ 2024, 15:15 IST
Last Updated 28 ಫೆಬ್ರುವರಿ 2024, 15:15 IST
ಅಕ್ಷರ ಗಾತ್ರ

ಸಾಗರ: ‘ಇಲ್ಲಿನ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ದಿಢೀರ್ ಕುಸಿತ ಕಾಣುತ್ತಿದೆ. ಅಡಿಕೆ ಕಳ್ಳ ಸಾಗಣೆ ತಡೆಗಟ್ಟುವ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶಿಕಾರಿಪುರದ ಬಿಎಸ್‌ವೈ ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದ ಇಲ್ಲಿನ ಅಡಿಕೆ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ಪ್ರಮುಖರ ನಿಯೋಗದ ಜೊತೆ ಮಾತುಕತೆ ನಡೆಸಿದ ನಂತರ ಅವರು ಈ ಭರವಸೆ ನೀಡಿದರು.

ಶೀಘ್ರದಲ್ಲೇ ದೆಹಲಿಗೆ ತೆರಳಿ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು. ತೆರಿಗೆ ತಪ್ಪಿಸಿ ಮಾರುಕಟ್ಟೆಗೆ ನುಸುಳುತ್ತಿರುವ ಅಡಿಕೆ ಕಳ್ಳ ಸಾಗಣೆ ವಹಿವಾಟು ನಡೆಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ತರಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಧಾರಣೆ ಈ ತಿಂಗಳಲ್ಲಿ ಏಕಾಏಕಿ ಕ್ವಿಂಟಲ್‌ಗೆ ₹ 5,000ದಿಂದ ₹ 6,000ದಷ್ಟು ಕುಸಿತ ಕಂಡಿದೆ. ಈ ಬೆಳವಣಿಗೆ ಅಡಿಕೆ ಬೆಳೆಗಾರರು ಹಾಗೂ ಈ ವಲಯದಲ್ಲಿ ಅಡಿಕೆ ವಹಿವಾಟು ಆಶ್ರಯಿಸಿರುವವರನ್ನು ಆತಂಕಕ್ಕೆ ತಳ್ಳಿದೆ’ ಎಂದು ನಿಯೋಗದಲ್ಲಿದ್ದವರು ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮಾಹಿತಿ ನೀಡಿದರು.

‘ಅಡಿಕೆ ಮಾರುಕಟ್ಟೆ ಕ್ಷೇತ್ರದ ತಜ್ಞರ ಪ್ರಕಾರ ಬರ್ಮಾ ದೇಶದಿಂದ ಅಡಿಕೆ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ಬರುತ್ತಿದೆ. ಯಾವುದೇ ತೆರಿಗೆಯನ್ನು ಪಾವತಿ ಮಾಡದೆ ಅಲ್ಲಿನ ಅಡಿಕೆ ಇಲ್ಲಿನ ಮಾರುಕಟ್ಟೆಗೆ ದಾಳಿ ಇಡುತ್ತಿರುವುದೇ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯವಿದೆ’ ಎಂದು ನಿಯೋಗದಲ್ಲಿದ್ದವರು ತಿಳಿಸಿದ್ದಾರೆ.

ಕ್ವಿಂಟಲ್‌ಗೆ ಸರಾಸರಿ ₹ 37,000 ಇದ್ದ ಚಾಲಿ ಅಡಿಕೆ ಬೆಲೆ ₹ 30,000 ಸಮೀಪಕ್ಕೆ ಕುಸಿದಿದೆ. ಕ್ವಿಂಟಲ್‌ಗೆ ₹ 49,000ದಿಂದ ₹ 50,000 ಇದ್ದ ಕೆಂಪಡಿಕೆ ಬೆಲೆ ₹ 42,000ಕ್ಕೆ ಕುಸಿದಿದೆ. ಈಗಿನ ವಿದ್ಯಮಾನ ನೋಡಿದರೆ ಬೆಲೆ ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳ ಸಾಂಪ್ರದಾಯಿಕ ಬೆಳೆಗಾರರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಏಕೆಂದರೆ ಇಲ್ಲಿನ ಬಹುತೇಕ ಅಡಿಕೆ ಬೆಳೆಗಾರರು ಸಣ್ಣ ಹಿಡುವಳಿದಾರರಾಗಿದ್ದಾರೆ ಎಂದು ನಿಯೋಗದಲ್ಲಿದ್ದವರು ತಿಳಿಸಿದ್ದಾರೆ.

ನಿಯೋಗದಲ್ಲಿ ಆಪ್ಸ್ ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಉಪಾಧ್ಯಕ್ಷ ಕೆ.ಎಸ್.ಸುಬ್ರಾವ್, ನಿರ್ದೇಶಕರಾದ ಕೆ.ಎಂ.ಸೂರ್ಯನಾರಾಯಣ, ಎಚ್.ಕೆ.ರಾಘವೇಂದ್ರ, ಎಚ್.ಎಂ.ಓಮಕೇಶ, ಎಚ್.ಬಿ.ಕಲ್ಯಾಣಪ್ಪ ಗೌಡ, ಕೆ.ಎಸ್.ಭಾಸ್ಕರ ಭಟ್, ವೈ.ಎನ್.ಸುರೇಶ್ ಇದ್ದರು.

ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ದಿಢೀರ್ ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ ಸಾಗರದ ಆಪ್ಸ್ ಕೋಸ್ ಸಂಸ್ಥೆಯ ಪ್ರಮುಖರು ಬುಧವಾರ ಶಿಕಾರಿಪುರದ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ನಿಯೋಗ ತೆರಳಿ ಸಮಾಲೋಚನೆ ನಡೆಸಿದರು.
ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ದಿಢೀರ್ ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ ಸಾಗರದ ಆಪ್ಸ್ ಕೋಸ್ ಸಂಸ್ಥೆಯ ಪ್ರಮುಖರು ಬುಧವಾರ ಶಿಕಾರಿಪುರದ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ನಿಯೋಗ ತೆರಳಿ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT