ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಅಂಚಿನಲ್ಲಿರುವ ಶಾಲೆಗೆ ಕೊಠಡಿಗಳ ಕೊರತೆ

ಉನ್ನತೀಕರಿಸಿದ ನೇರಲಗಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ದುಃಸ್ಥಿತಿ
Last Updated 10 ಜುಲೈ 2021, 4:11 IST
ಅಕ್ಷರ ಗಾತ್ರ

ಆನವಟ್ಟಿ: ಶತಮಾನದ ಅಂಚಿನಲ್ಲಿರುವ ಸ್ವತಂತ್ರ ಪೂರ್ವದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲೆಯಲ್ಲೇ ಉತ್ತಮ ಶಾಲೆ ಎಂಬ ಹೆಗ್ಗಳಿಕೆ ಇದೆ. ಆದರೆ, ಕೊಠಡಿಗಳ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ.

ಶಾಲೆಯಲ್ಲಿ ಒಟ್ಟು 7 ಕೊಠಡಿಗಳು ಇದ್ದು, ನಾಲ್ಕು ಕೊಠಡಿಗಳು ಉತ್ತಮವಾಗಿವೆ. ಇನ್ನೂ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿ ಹಾಳಾಗಿದೆ. ಮಂಗಗಳ ಹಾವಳಿಗೆ ಹಂಚುಗಳು ಒಡೆದು ಕೊಠಡಿಗಳು ಸೋರುತ್ತಿವೆ.

1942ರಲ್ಲಿ ಪ್ರಾರಂಭವಾದ ಶಾಲೆಗೆ 25 ವರ್ಷಗಳ ನಂತರ ಅಂದರೆ 1977ರಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಎಂಬ ಮಾನ್ಯತೆ ದೊರೆಯಿತು. ಆಗ 2 ಕೊಠಡಿಗಳು ನಿರ್ಮಾಣವಾದವು. ನಂತರದ ವರ್ಷಗಳಲ್ಲಿ 4 ಕೊಠಡಿಗಳು ನಿರ್ಮಾಣವಾದವು. 2018– 2019ರಲ್ಲಿ ಒಂದು ಆರ್‌ಸಿಸಿ ಕಟ್ಟಡ ನಿರ್ಮಾಣವಾಯಿತು.

ಶಾಲೆಯ ವಿಶೇಷತೆ: ಶಾಲೆಯಲ್ಲಿ ಉತ್ತಮವಾಗಿ ಬೋಧನೆ ಮಾಡುವ ಆರು ಶಿಕ್ಷಕರು ಇದ್ದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಲೆ ಮುಂತಾದ ಪಠ್ಯೇತರ ಚುಟುವಟಿಕೆ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ನಲಿಕಲಿ ಕೊಠಡಿಯನ್ನು ಚಿತ್ತಾಕರ್ಷಕವಾಗಿ ಸಿದ್ಧ ಮಾಡಲಾಗಿದೆ. ಶಿಕ್ಷಕರು ಹಾಗೂ ಮಕ್ಕಳು ಸೇರಿ ನಿರ್ಮಾಣ ಮಾಡಿರುವ ಕೈತೋಟ ಶಾಲೆಯ ಅಂದವನ್ನು ಹೆಚ್ಚಿಸಿದೆ.

ಶಾಲೆಗೆ ಬೇಕಿರುವ ಸೌಲಭ್ಯ: ಖಾಸಗಿ ಶಾಲೆಯೊಂದಿಗೆ ಸ್ಪರ್ಧೆ ಮಾಡುವ ಸರ್ಕಾರಿ ಶಾಲೆಗೆ ನಾಲ್ಕು ಸುಸರ್ಜಿತ ಕೊಠಡಿಗಳು, ಸ್ಮಾರ್ಟ್ ಕ್ಲಾಸ್, 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ, ಎಲ್‍ಕೆಜಿ– ಯುಕೆಜಿ ತರಗತಿಗಳು, ಆಟದ ಮೈದಾನ, ಶೌಚಾಲಯ ಸೇರಿ ಕೆಲವು ಮೂಲ ಸೌಲಭ್ಯಗಳು ಶಾಲೆಗೆ ಅಗತ್ಯವಾಗಿ ಬೇಕಾಗಿದೆ.

‘ದಾನಿಗಳು, ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು, ಗ್ರಾಮಸ್ಥರು, ಇದೇ ಶಾಲೆಯಲ್ಲಿ ಕಲಿತು ನೌಕರಿಯಲ್ಲಿರುವ ಹಳೆ ವಿದ್ಯಾರ್ಥಿಗಳ ಸಹಕಾರ ಪಡೆದು ಗ್ರಾಮದ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವುದನ್ನು ತಪ್ಪಿಸಲು ನಮ್ಮ ಶಾಲೆಯಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲೆಯನ್ನು ಪರಿಶೀಲಿಸಿ ಹೋಗಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆದಷ್ಟು ಬೇಗ ಮಕ್ಕಳಿಗೆ ಅನುಕೂಲ ವಾಗುವಂತೆ ನೂತನ ಕೊಠಡಿಗಳನ್ನು ಮಂಜೂರು ಮಾಡಬೇಕು’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಶ್ ಕುಮ್ಮೂರು.

‘ಉತ್ತಮ ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರ ಇರುವುದರಿಂದ 89 ಇದ್ದ ವಿದ್ಯಾರ್ಥಿಗಳ ಸಂಖ್ಯೆ 102ಕ್ಕೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮೀಣ ಶಾಲೆಗಳಿಗೆ, ಆದಷ್ಟು ಬೇಗ ಅಗತ್ಯವಿರುವ ಮೂಲ ಸೌಲಭ್ಯ ಹಾಗೂ ಕೊಠಡಿಗಳನ್ನು ಒದಗಿಸಿದರೆ ಪೋಷಕರ ಮನಸ್ಸಿನಲ್ಲೂ ಸರ್ಕಾರಿ ಶಾಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ. ಖಾಸಗಿ ಶಾಲೆಯ ವ್ಯಾಮೋಹ ದೂರವಾಗುತ್ತದೆ’ ಎನ್ನುತ್ತಾರೆ ಎಸ್‍ಡಿಎಂಸಿ ಸದಸ್ಯರು.

***

ಶಾಲೆ ದತ್ತು ಪಡೆಯುವ ಭರವಸೆ

ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಶಾಸಕ ಕುಮಾರ್‌ ಬಂಗಾರಪ್ಪ ಅವರ ಗಮನಕ್ಕೆ ಇಲಾಖಾ ಅಧಿಕಾರಿಗಳು ತಂದಿದ್ದಾರೆ. ಕೊಠಡಿಗಳನ್ನು ಮಂಜೂರು ಮಾಡಿಕೊಡುವ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಶಾಲೆಗೆ ಭೇಟಿ ನೀಡಿ, ಶಾಲೆಯನ್ನು ದತ್ತು ಪಡೆದು ಕನಿಷ್ಠ ಒಂದು ಕೊಠಡಿ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ ಎನ್ನುವರು ಮುಖ್ಯಶಿಕ್ಷಕಿ ಗೀತಾದೇವಿ ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT