ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ ನಗರ’ದ ಸಮಸ್ಯೆಗಳು ಇನ್ನೂ ಜೀವಂತ

ಮತ್ತೆ ಬಂತು ಭದ್ರಾವತಿ ನಗರಸಭೆ ಚುನಾವಣೆ; ಕೇಳುತ್ತಿದೆ ಅಭಿವೃದ್ಧಿ ಭರವಸೆ
Last Updated 11 ಏಪ್ರಿಲ್ 2021, 5:24 IST
ಅಕ್ಷರ ಗಾತ್ರ

ಭದ್ರಾವತಿ: ಕೇಂದ್ರದ ‘ಅಮೃತ ನಗರ’ ಯೋಜನೆಗೆ ಆಯ್ಕೆಯಾಗಿರುವ ಇಲ್ಲಿನ ನಗರಸಭೆಗೆ ಇಲ್ಲಿಯವರೆಗೆ
₹ 162 ಕೋಟಿ ಅನುದಾನ ಬಂದಿದ್ದರೂ ಮೂಲಸೌಕರ್ಯಗಳಲ್ಲಿ ಇಂದಿಗೂ ಅಭಿವೃದ್ಧಿ ಕಂಡಿಲ್ಲ.

ರಸ್ತೆ, ಒಳಚರಂಡಿ, ನೀರಿನ ಸೌಕರ್ಯದ ಭರವಸೆಯೊಂದಿಗೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ರೂಪಿಸಬೇಕಾದ ಈ ಯೋಜನೆಯಲ್ಲಿ ಕೆಲವು ಬೇರೆ ರೀತಿಯ ಕಾಮಗಾರಿಗಳು ನಡೆದಿರುವುದು ಯೋಜನೆಯ ಯಶಸ್ಸಿಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

15 ವರ್ಷಗಳಿಂದ ನನೆಗುದಿದೆ ಬಿದ್ದಿರುವ ಯುಜಿಡಿ ಕಾಮಗಾರಿ ಕೆಲಸ ಐದಾರು ಟೆಂಡರ್ ನಂತರವೂ ಸಮರ್ಪಕವಾಗಿ ಮುಗಿದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ರಸ್ತೆಗಳ ನಿರ್ಮಾಣ ನಂತರ ಅದರ ವಿಸ್ತರಣೆ ನೆಪದಲ್ಲಿ ವರ್ಷದಲ್ಲಿ ಎರಡು ಮೂರು ಬಾರಿ ಗುಂಡಿ ಅಗೆದಿರುವುದೇ ಇದರ ಹೆಗ್ಗಳಿಕೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಚರ್ಚೆಯೇ ಇಲ್ಲ: ಅಮೃತ ನಗರ ಯೋಜನೆ ಜಾರಿಯಾದರೂ ಅದರ ಕುರಿತಾದ ಸ್ಪಷ್ಟ ಚಿತ್ರಣದ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸ ಆಗಿಲ್ಲ. ಯೋಜನೆಯ ಅಗತ್ಯತೆ ಕುರಿತಾಗಿ ಇಲ್ಲಿಯವರೆಗೆ ಸಾರ್ವಜನಿಕರ ಸಲಹೆ, ಸೂಚನೆ ತೆಗೆದುಕೊಳ್ಳುವ ಕೆಲಸವೇ ನಡೆದಿಲ್ಲ ಎಂದು ದೂರುತ್ತಾರೆ ಯಶವಂತಪ್ಪ.

ಎರಡು ವರ್ಷಗಳಿಂದ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕೆಎಲ್ಆರ್‌ಡಿ ಯೋಜನೆಯಲ್ಲಿ ನಡೆದಿ
ರುವ ಲಕ್ಷಾಂತರ ರೂಪಾಯಿ ರಸ್ತೆ ಕಾಮಗಾರಿ ಅವ್ಯವಸ್ಥೆಯ ಅಗರವಾಗಿದೆ ಎನ್ನುತ್ತಾರೆ ಸಿದ್ಧಾರೂಢನಗರ ನಿವಾಸಿಗಳು.

ವೃತ್ತಗಳ ವಿಸ್ತರಣೆ, ಅವುಗಳ ನಿರ್ವಹಣೆಗೆ ಅಗತ್ಯ ಇರುವ ಖಾಸಗಿ ಸಹಭಾಗಿತ್ವದ ಕನಸಿನ ಯೋಜನೆಗಳು ಐದು ವರ್ಷಗಳಿಂದ ನನೆಗುದಿಯಲ್ಲೇ ಉಳಿದಿದೆ ಎನ್ನುತ್ತಾರೆ ವಿಶ್ವನಾಥ್.

ರಸ್ತೆ ವಿಸ್ತರಣೆ ನೆಪದಲ್ಲಿ ಮರಗಳ ಮಾರಣಹೋಮ ನಡೆದಿದ್ದು ಬಿಟ್ಟರೆ ಅದನ್ನು ತೆಗೆದ ಜಾಗದ ಉಪಯೋಗ ಪಡೆದು ವಿಸ್ತರಣೆ ಕಾರ್ಯ ಮಾತ್ರ ನಡೆದಿಲ್ಲ ಎನ್ನುವ ಸುಧೀಂದ್ರ ಅವರು ಕೋರ್ಟ್ ರಸ್ತೆಯಲ್ಲಿನ ಕಾಮಗಾರಿ ಸ್ಥಗಿತದ ವಿಚಾರ ಪ್ರಸ್ತಾಪಿಸುತ್ತಾರೆ.

ಕಂದಾಯವೇ ಇಲ್ಲ: ನಗರಸಭೆ ಆದಾಯ ಮೂಲವಾದ ತೆರಿಗೆ ಸಂಗ್ರಹಣೆಯಲ್ಲಿ ವಿಐಎಸ್ಎಲ್, ಎಂಪಿಎಂ ಭಾಗದ ಕೊಡುಗೆ ಶೂನ್ಯ ಎಂಬ ಮಾತುಗಳು ಸಹಜವಾಗಿ ಸಾಮಾನ್ಯ ಸಭೆಯಲ್ಲಿ ದೊಡ್ಡ ಚರ್ಚೆಯ ವಿಷಯ.

ಈಗಲೂ ಇದೇ ಪರಿಸ್ಥಿತಿ ಇದ್ದು, ಕಾರ್ಖಾನೆ ವ್ಯಾಪ್ತಿ 1994ರ ನಂತರ ನಗರಸಭೆಗೆ ಸೇರಿದ್ದು, ಅಲ್ಲಿಂದ ಇಲ್ಲಿಯವರೆಗೆ ಯಾವುದೇ ರೀತಿಯ ತೆರಿಗೆ ಸಂಗ್ರಹವಾಗಿಲ್ಲ. ಬದಲಾಗಿ ಇದಕ್ಕೆ ಹೊರತಾಗಿ ಸೇರಿದ ಗ್ರಾಮೀಣ ಭಾಗದ ನಿವೇಶನ, ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ತೆರಿಗೆ ಒಂದಿಷ್ಟು ಮಟ್ಟಿನ ಆದಾಯ ತಂದುಕೊಡುತ್ತಿದೆ.

‘ಇಲ್ಲಿನ ಪ್ರದೇಶದ ನಿರ್ವಹಣೆ ಕಾರ್ಖಾನೆ ನಗರಾಡಳಿತ ವಿಭಾಗಕ್ಕೆ ಸೇರಿರುವ ಕಾರಣ ಇದಕ್ಕೆ ನಾವು ತೆರಿಗೆ ಕಟ್ಟಲು ಬಾಧ್ಯಸ್ಥರಲ್ಲ’ ಎಂಬುದು ಆಡಳಿತ ಮಂಡಳಿಯ ವಾದ. ಇದೇ ತೆರಿಗೆ ಬಾಕಿ ವಿಚಾರ ನ್ಯಾಯಾಲಯದ ಮುಂದಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಸ್ವಚ್ಛತೆಗೆ ಪ್ಲಾಸ್ಟಿಕ್ ಮುಕ್ತದ ಪ್ರಯತ್ನಕ್ಕೆ ನಾಗರಿಕರ ಸಹಕಾರ ಇಲ್ಲ ಎಂಬ ಕೂಗು ಅಧಿಕಾರಿ ವಲಯದ್ದು. ಚುನಾಯಿತ ಪ್ರತಿನಿಧಿಗಳ ಸಹಕಾರದ ಕೊರತೆ ಇತ್ತು ಎಂಬ ಮಾತೂ ಕೇಳಿಬಂದಿದೆ.

ಎಸ್ಎಫ್‌ಸಿ, ಕೇಂದ್ರ ಹಣಕಾಸು ಯೋಜನೆ ನೆರವು, ತೆರಿಗೆ ಸಂಗ್ರಹಣೆ ಹಾಗೂ ಇನ್ನಿತರೆ ಮೂಲಗಳ ಆದಾಯ ಇದ್ದರೂ ಈ ಯೋಜನೆಗಳಿಂದ ನಿರ್ಮಿಸಿರುವ ಕಟ್ಟಡ ಹಾಗೂ ಇನ್ನಿತರೆ ಮಾರುಕಟ್ಟೆ ಪ್ರಾಂಗಣದಿಂದ ಮಾತ್ರ ಯಾವುದೇ ಆದಾಯ ಬಾರದಿರುವುದು ಯೋಜನೆಯ ಹಿನ್ನಡೆಗೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ಮಾತು.

ಅಂಬೇಡ್ಕರ್ ಭವನ, ಖಾಸಗಿ ಬಸ್ ನಿಲ್ದಾಣ, ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ವಿಫಲ, ನೀರು ತ್ಯಾಜ್ಯ ನಿರ್ವಹಣಾ ಘಟಕದ ಆರಂಭದಲ್ಲಿನ ಹಿನ್ನಡೆ.. ಹೀಗೆ ಹತ್ತು ಹಲವು ಯೋಜನೆಗಳ ಸವಾಲು ಎದುರಿಸುತ್ತಿರುವ ನಗರಸಭೆಗೆ ಐದನೇ ಬಾರಿಯ ಚುನಾವಣೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT