ಮಂಗಳವಾರ, ಮಾರ್ಚ್ 28, 2023
23 °C
ಇಲ್ಲಿನ ಕಾರ್ಮಿಕರ ಪಾಲಿಗೆ ಸಿಹಿ,ಕಹಿ ದೀಪಾವಳಿ

ಭದ್ರಾವತಿ: ಎಂಪಿಎಂ ಕಾರ್ಮಿಕರನ್ನು ಉಳಿಸಲು ಇನ್ನಿಲ್ಲದ ಕಸರತ್ತು

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಕಬ್ಬಿಣ ನಗರಿಯ ಉಕ್ಕು ಕಾರ್ಖಾನೆ ಉತ್ಪಾದನೆ ಏರಿಕೆಯಿಂದ ಗುತ್ತಿಗೆ ಕಾರ್ಮಿಕರ ಪಾಲಿಗೆ ಒಂದಿಷ್ಟು ಕೆಲಸದ ಹೆಚ್ಚಳದ ಆಸೆಯನ್ನು ಚಿಗುರಿಸಿದ್ದರೆ, ಮತ್ತೊಂದೆಡೆ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್) ಮುಚ್ಚುವ ಘೋಷಣೆ ಹೊರಬಿದ್ದ ಕಾರಣ 209 ಮಂದಿ ಕಾರ್ಮಿಕರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೌದು! ಈ ಬಾರಿಯ ದೀಪಾವಳಿ ಕಾರ್ಮಿಕರ ಪಾಲಿಗೆ ಒಂದಿಷ್ಟು ಸಿಹಿ, ಕಹಿ ಸಂಕಷ್ಟ ತಂದೊಡ್ಡಿದ್ದರೆ ನಗರದ ಅರ್ಥವ್ಯವಸ್ಥೆಯ ಮೇಲೂ ಇದರ ಕಪ್ಪುಛಾಯೆ ಆವರಿಸಿದೆ.

ಎಂಪಿಎಂ ಕಾರ್ಖಾನೆ ಮುಚ್ಚುವ ಆದೇಶ ಅ.7ರಂದು ಹೊರಬಿದ್ದ ದಿನದಿಂದ ಅಲ್ಲಿನ ಕಾರ್ಮಿಕರನ್ನು ಉಳಿಸಲು ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನ ಫಲವಾಗಿ ಬಿ.ಎಸ್. ಯಡಿಯೂರಪ್ಪ ಒಂದೆಡೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಕಾರ್ಖಾನೆಯ 209 ಮಂದಿ ನೌಕರರಲ್ಲಿ 129 ಮಂದಿ ವಿವಿಧ ನಿಗಮ ಮಂಡಳಿಯ 19 ಕಡೆಯಲ್ಲಿ ಎರವಲು ಸೇವೆ ಮೇಲೆ ಕೆಲಸ ಮಾಡುತ್ತಿದ್ದು, 7 ಮಂದಿ ಎಂಪಿಎಂ ಫಾರೆಸ್ಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 21 ಮಂದಿ ಕಾರ್ಮಿಕರು ಸರ್ಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರಿ ಸಂದರ್ಶನದಲ್ಲಿ ಭಾಗವಹಿಸಿ ತೇರ್ಗಡೆ ಹೊಂದಿದ್ದಾರೆ, ಉಳಿದ 52 ಮಂದಿ ಸದ್ಯ ಎಂಪಿಎಂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಕ್ಕನ್ನು ರಕ್ಷಿಸಿ: ‘ಕ್ಲೋಸರ್ ಆದೇಶ ನೀಡುವ ಮುನ್ನ ನಮ್ಮ ಹಕ್ಕನ್ನು ರಕ್ಷಿಸುವ ಕೆಲಸ ಸರ್ಕಾರದ ಕಡೆಯಿಂದ ನಡೆಯಬೇಕಿತ್ತು. ಆದರೂ ಅದು ಆಗಲಿಲ್ಲ. ಈಗ ನಮ್ಮನ್ನು ಉಳಿಸುವ ಪ್ರಯತ್ನ ಒಂದೆಡೆ ನಡೆದಿದೆ. ಇದಕ್ಕೆ ಬದಲಾಗಿ ನಾವು ಕಾನೂನು ಹೋರಾಟ ಮಾಡಲು ಸಿದ್ಧತೆ ನಡೆಸಿದ್ದೇವೆ’ ಎನ್ನುತ್ತಾರೆ ಹೆಸರು ಹೇಳಲಿಚ್ಚಸದ ಕಾರ್ಮಿಕ ಮುಖಂಡರು.

‘ನಮ್ಮ ಮನವಿಗೆ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸ್ಪಂದಿಸಿದ ಪರಿಣಾಮ ಎರವಲು ಸೇವೆಯಲ್ಲಿದ್ದ ನೌಕರರಿಗೆ ಸಿದ್ಧಪಡಿಸಿದ್ದ ವಿಮುಕ್ತಿ ಪತ್ರವನ್ನು ತಾತ್ಕಾಲಿಕವಾಗಿ ತಡೆ ಮಾಡಿದ್ದು ಮುಖ್ಯಮಂತ್ರಿಗಳ ನೇತೃತ್ವದ ಸಭೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಹೇಳಿದರು.

ಒಟ್ಟಿನಲ್ಲಿ ವಿಐಎಸ್ಎಲ್ ಕಾರ್ಖಾನೆ ಉತ್ಪಾದನೆ ಭರಾಟೆಯಲ್ಲಿ ಮುನ್ನೆಡದಿದ್ದರೆ, ಎಂಪಿಎಂ ಕ್ಲೋಸರ್ ನಂತರ ಕಾರ್ಮಿಕರ ಭವಿಷ್ಯ ಅತಂತ್ರ ಮಾಡಿದೆ ಇದರ ನಿಮಿತ್ತ ನಡೆದಿರುವ ಪ್ರಯತ್ನ ಯಶಸ್ವಿಯಾದಲ್ಲಿ 209 ಮಂದಿ ಕಾರ್ಮಿಕರ ಬದುಕು ಹಸನಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.