ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಇದ್ದೂ ಇಲ್ಲದಂತಾದ ವೇಬ್ರಿಡ್ಜ್‌, ಗೋದಾಮು

ರೈತರ ಬಳಕೆಗೆ ಸಿಗದ ಎಪಿಎಂಸಿ ಸೌಲಭ್ಯಗಳು
Last Updated 1 ಜನವರಿ 2022, 7:14 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿಯ ಎಪಿಎಂಸಿಯಲ್ಲಿ ವೇಬ್ರಿಡ್ಜ್ ತೂಕ ಹಾಗೂ 3 ಗೋದಾಮುಗಳು ಇದ್ದರೂ ಬಳಕೆಗೆ ಮಾತ್ರ ಸಿಗುತ್ತಿಲ್ಲ. ಭತ್ತ, ಜೋಳ ಸೇರಿದಂತೆ ಬೆಳೆದ ಫಸಲನ್ನು ಸಂಗ್ರಹಿಸಿಟ್ಟುಕೊಳ್ಳಲು ಜಾಗವಿಲ್ಲದೇ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸುತ್ತ 45 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೂ ಶೀತಲೀಕರಣ ಘಟಕವೂ ಇಲ್ಲದೇ ಇರುವುದರಿಂದ ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

ಭತ್ತ, ಜೋಳ, ಅಡಿಕೆ ಸೇರಿದಂತೆ ರೈತರ ಬೆಳೆಗಳನ್ನು ಖರೀದಿ ಮಾಡುವ ಮಧ್ಯವರ್ತಿಗಳು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ಮೋಸ ತಡೆಯಲು ಎಪಿಎಂಸಿಯಲ್ಲಿ ಒಂದು ವರ್ಷದ ಹಿಂದೆ ಸಿದ್ಧವಾಗಿರುವ ವೇಬ್ರಿಡ್ಜ್ ತೂಕವನ್ನು ರೈತರ ಬಳಕೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ವೇಬ್ರಿಡ್ಜ್ ತೂಕ ನಿರ್ಮಾಣವಾಗಿ ವರ್ಷ ಕಳೆದಿದೆ. ರೈತರ ಅನುಕೂಲಕ್ಕೆ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಅದು ತುಕ್ಕು ಹಿಡಿದು ಹಾಳಾಗುತ್ತದೆ. ಈಗ ಅಡಿಕೆ, ಶುಂಠಿ, ಜೋಳ, ಭತ್ತದ ಕೊಯ್ಲ ನಡೆಯುತ್ತಿದ್ದು. ಸಂಬಂಧಪಟ್ಟವರು ಕೊಡಲೇ ವೇಬ್ರಿಡ್ಜ್ ತೂಕದ ಸೇವೆಯನ್ನು ರೈತರಿಗೆ ನೀಡಲು ಮುಂದಾಗಬೇಕು’ ಎಂದುಕಾಂಗ್ರೆಸ್ ಪಕ್ಷದ ಆನವಟ್ಟಿ ಬ್ಲಾಕ್ ಅಧ್ಯಕ್ಷಆರ್.ಸಿ. ಪಾಟೀಲ್ ಒತ್ತಾಯಿಸಿದ್ದಾರೆ.

‘ಎಪಿಎಂಸಿಯಲ್ಲಿ 1 ದೊಡ್ಡ ಗೋದಾಮು, 2 ಮಧ್ಯಮ ಗಾತ್ರದ ಗೋದಾಮುಗಳು 3 ವರ್ಷಗಳಿಂದ ರೈತರ ಬಳಕೆಗೆ ಸಿಗುತ್ತಿಲ್ಲ. ರೈತರು ಬೆಳೆದ ಬೆಳೆ ಇಡಲು ಜಾಗ ಇಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ಈ ಗೋದಾಮುಗಳಲ್ಲಿ ಭತ್ತ, ಜೋಳ ಇಡಲು ಅವಕಾಶ ನೀಡಬೇಕು. ವೇಬ್ರಿಡ್ಜ್ ತೂಕವನ್ನೂ ಆದಷ್ಟು ಬೇಗ ಆರಂಭಿಸಬೇಕು. ರೈತರು ಇಲ್ಲೇ ತಾವು ಬೆಳೆದ ಭತ್ತ, ಜೋಳ ವ್ಯಾಪಾರ ಮಾಡಲು ಅನುಕೂಲ ಆಗುತ್ತದೆ. ತೂಕದಲ್ಲಿ ಮೋಸ ಆಗುವುದಿಲ್ಲ’ ಎಂದು ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಮಂಜಪ್ಪ ಎಂ. ಜಾಡರ್ ಅಭಿಪ್ರಾಯಪಟ್ಟಿದ್ದಾರೆ.

‘ಆಹಾರ ಇಲಾಖೆಯು ಮಿಲ್‌ಗಳ ಮೂಲಕ ಭತ್ತ ಖರೀದಿ ಮಾಡುವ ಬದಲು, ಮೊದಲಿನಂತೆ ಎಪಿಎಂಸಿಗಳ ಮೂಲಕ ಖರೀದಿ ಮಾಡಬೇಕು. ಈ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸರ್ಕಾರದ ಬೆಂಬಲ ಬೆಲೆಯನ್ನು ರೈತರಿಗೆ ಒದಗಿಸಬೇಕು. ರೈತರ ಅನುಕೂಲಕ್ಕಾಗಿ, ಆನವಟ್ಟಿಯಲ್ಲೂ ಭತ್ತದ ಬೆಂಬಲ ಬೆಲೆ ಖರೀದಿ ನೋಂದಣಿ ಆರಂಭಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ಶೀತಲೀಕರಣ ಘಟಕ ಅಗತ್ಯ: ‘ಆನವಟ್ಟಿಯ ಎಪಿಎಂಸಿ 10 ಎಕರೆ ವಿಸ್ತೀರ್ಣದ ಜಾಗ ಹೊಂದಿದ್ದು. ರೈತರು ಬೆಳೆದ ಬೆಳೆ ಹಾಳಾಗದಂತೆ ಮತ್ತು ಉತ್ತಮ ಬೆಲೆ ಇದ್ದಾಗ ಮಾರಾಟ ಮಾಡಲು ಅನುಕೂಲವಾಗುವಂತೆ ಶೀತಲೀಕರಣ ಘಟಕ ನಿರ್ಮಾಣವಾಗಬೇಕು. ಇದರಿಂದ ಹೆಚ್ಚಿನ ರೈತರು ನಷ್ಟ ಅನುಭವಿಸುವುದು ತಪ್ಪುತ್ತದೆ’ ಎನ್ನುತ್ತಾರೆ ಪ್ರಗತಿಪರ ರೈತ ಸುರೇಶ ಎಸ್. ಕುಬಟೂರು

‘ಇಲಾಖೆಯ ನಿಯಮದ ಪ್ರಕಾರ ವೇಬ್ರಿಡ್ಜ್‌ ನಿರ್ವಹಣೆಯನ್ನು ನೀಡಬೇಕು. ತಿಂಗಳಿಗೆ ₹ 20 ಸಾವಿರ ನಿಗದಿ ಮಾಡಿದೆ. ಆನವಟ್ಟಿ ಗ್ರಾಮೀಣ ಪ್ರದೇಶವಾಗಿದ್ದು. ನಿಗದಿಪಡಿಸಿದ ಹಣ ಸಂಗ್ರಹವಾಗುವುದು ಕಷ್ಟ. ಹಾಗಾಗಿ ಯಾರೂ ಟೆಂಡರ್ ಹಿಡಿಯಲು ಮುಂದೆ ಬಂದಿಲ್ಲ. ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಅನುಗುಣವಾಗಿ ದರ ನಿಗದಿ ಮಾಡಬೇಕು. ಕೃಷಿಕರಿಗೆ ಸೇವೆ ನೀಡುವ ಮನೋಭಾವದಿಂದ ಕಡಿಮೆ ಹಣಕ್ಕೆ ಟೆಂಡರ್ ನೀಡುವುದು ಸೂಕ್ತ’ ಎಂದು ಎಲ್ಲ ಸದಸ್ಯರು ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಎ.ಪಿ. ದಯಾನಂದ ಗೌಡ.

‘ಗೋದಾಮುಗಳನ್ನು ಸ್ಥಳೀಯ ಸಹಕಾರ ಸಂಘಗಳಿಗೆಬಳಕೆಗೆ ನೀಡಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದೂ ಅವರುತಿಳಿಸಿದರು.

ಟೆಂಡರ್‌ ಅರ್ಜಿ ವಜಾ
‘ಇಲಾಖೆಯ ನಿಯಮಮಗಳ ಪ್ರಕಾರ ವೇಬ್ರಿಡ್ಜ್ ಟೆಂಡರ್ ತಿಂಗಳಿಗೆ ₹ 20,028 ನಿಗದಿ ಇದೆ. ಈಗಾಗಲೇ ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಯಾರೂ ಆಸಕ್ತಿ ತೋರುತ್ತಿಲ್ಲ. ಒಬ್ಬರು ಮಾತ್ರ ₹ 4 ಸಾವಿರಕ್ಕೆ ಅರ್ಜಿ ಹಾಕಿದ್ದರು. ಅದನ್ನು ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ಡೆವು. ಕಡಿಮೆ ಹಣಕ್ಕೆ ಟೆಂಡರ್ ನೀಡಲು ಸಾಧ್ಯವಿಲ್ಲ ಎಂದು ಟೆಂಡರ್‌ ಅರ್ಜಿ ವಜಾ ಮಾಡಲಾಗಿದೆ. ಮತ್ತೆ ಈಗ ಟೆಂಡರ್ ಕರೆದಿದ್ದು ಕನಿಷ್ಠ ₹ 7,500ರ ಮೇಲೆ ಟೆಂಡರ್ ಹಿಡಿಯಲು ಅವಕಾಶ ನೀಡಲಾಗಿದೆ. ಆಸಕ್ತರು ಟೆಂಡರ್ ಅರ್ಜಿ ಹಾಕಬೇಕು’.
–ಎಚ್. ಆಶಾ,ತಾಲ್ಲೂಕು ಎಪಿಎಂಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT