ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಹೊನ್ನೂರು | ಅಡಿಕೆಗೆ ಕಳ್ಳರ ಕಾಟ: ಗೇಣಿದಾರರಿಗೆ ಸಂಕಷ್ಟ

Published 13 ಅಕ್ಟೋಬರ್ 2023, 6:35 IST
Last Updated 13 ಅಕ್ಟೋಬರ್ 2023, 6:35 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ‌ಅಡಿಕೆ ಬೇಯಿಸಿ, ಒಣಗಿಸಿ ಮಾರಾಟ ಮಾಡುವ ಗೇಣಿದಾರರು ಇದನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಒ‌ಮ್ಮೊಮ್ಮೆ ಅಡಿಕೆಯ ದರ ಕುಸಿದು ನಷ್ಟವಾಗುವ ಸಾಧ್ಯತೆಯ ಜತೆಗೆ ಈ ಬಾರಿ ಕಳ್ಳರ ಕಾಟ ಹೆಚ್ಚಾಗಿದ್ದು, ಅಡಿಕೆ ದಾಸ್ತಾನಿಗೆ ಕನ್ನ ಹಾಕಲಾಗುತ್ತಿದೆ.

ತೋಟದಲ್ಲಿ ರಾತ್ರೋರಾತ್ರಿ ಅಡಿಕೆ ಗೊನೆಗಳನ್ನು ಕದಿಯುವ ಕಳ್ಳರು, ಗೇಣಿದಾರರು ಬೇಯಿಸಿಟ್ಟಿದ್ದ ಅಡಿಕೆಯನ್ನೂ ಬಿಡುತ್ತಿಲ್ಲ. ಹೀಗೆ ಬೇಯಿಸಿಟ್ಟ ಒಂದು ಕ್ವಿಂಟಲ್ ಅಡಿಕೆ ಕಳ್ಳತನವಾದರೆ ಸುಮಾರು ₹45,000ದಿಂದ ₹50,000 ನಷ್ಟವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ದಾಸ್ತಾನು ಮಾಡಿದ್ದ ಅಡಿಕೆಯನ್ನೇ ಕದಿಯುವುದರಿಂದ ಹೆಚ್ಚು ನಷ್ಟವಾಗುತ್ತಿದೆ ಎಂದು ಗೇಣಿದಾರರು ಹೇಳಿದ್ದಾರೆ. 

₹4 ರಿಂದ ₹5 ಲಕ್ಷ ಬಂಡವಾಳ ಹಾಕಿ ಒಂದು ಎಕರೆ ಗೇಣಿ ಪಡೆದರೆ, ಸುಮಾರು 60 ರಿಂದ 80 ಚೀಲ ಇಳುವರಿ ನಿರೀಕ್ಷಿಸಲಾಗುತ್ತದೆ. ಅದರೆ ಈ ಬಾರಿ ಎಕರೆಗೆ 35 ರಿಂದ 45 ಚೀಲದಷ್ಟು ಅಡಿಕೆ ಲಭ್ಯವಾಗುತ್ತಿದೆ. ಅಡಿಕೆ ಸುಲಿದು, ಬೇಯಿಸಿ ಸಾಕಷ್ಟು ಶ್ರಮ ಹಾಕುವ ಗೇಣಿದಾರರು ರಾತ್ರಿಯೆಲ್ಲಾ ಅಡಿಕೆಯನ್ನು ಕಾಯುವ ಪರಿಸ್ಥಿತಿ ಬಂದಿದೆ. ಎಲೆಚುಕ್ಕಿ ರೋಗದಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಗೇಣಿದಾರರು ಕಳ್ಳರ ಕಾಟದಿಂದಾಗಿ ಇನ್ನಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲ್ಲಾಪುರದಲ್ಲಿ ಮೂರು ಕ್ವಿಂಟಲ್, ಮೈದೊಳಲುವಿನಲ್ಲಿ ಎರಡು ಕ್ವಿಂಟಲ್, ಅರಬಿಳಚಿ ಗ್ರಾಮದಲ್ಲಿ ನಾಲ್ಕು ಕ್ವಿಂಟಲ್ ಬೇಯಿಸಿದ ಅಡಿಕೆ ಇತ್ತೀಚೆಗೆ ಕಳ್ಳತನವಾಗಿದೆ. ಕಳೆದ 15 ದಿನಗಳಿಂದ ಪಟ್ಟಣದ ಸುತ್ತಮುತ್ತಲಿನ ಒಂದಲ್ಲ ಒಂದು ಗ್ರಾಮದ ಅಡಿಕೆ ತೋಟಗಳಲ್ಲಿ 5 ರಿಂದ 10 ಕ್ವಿಂಟರ್‌ವರೆಗೂ ಹಸಿ ಅಡಿಕೆ ಕಳ್ಳತನವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಡಿಕೆ ಬೆಳೆಗಾರರಲ್ಲಿ ಅತಂಕ ಸೃಷ್ಠಿಸಿರುವ ಕಳ್ಳರ ಭಯದಿಂದ ಕೆಲವರು ಅಡಿಕೆ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಆದರೆ ಅವುಳಗ ಕಣ್ಣಿಗೆ ಮಣ್ಣೆರಚಿ ಕಳ್ಳತನ ಮಾಡುವುದನ್ನು ಕಳ್ಳರು ಕರಗತ ಮಾಡಿಕೊಂಡಿದ್ದಾರೆ ಎಂದು ರೈತರು ಹೇಳಿದ್ದಾರೆ. ಈ ಭಾಗದಲ್ಲಿ ಪ್ರತಿ ವರ್ಷ ಅಡಿಕೆ ಕಟಾವಿಗೆ ಬಂದಾಗ ಅಡಿಕೆ ಕಳ್ಳತನ ಸಾಮಾನ್ಯವಾಗಿದೆ. ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಆದರೆ ಪತ್ತೆಯಾಗಿದ್ದು ಬೆರಳೆಣಿಕೆಯಷ್ಟು ಎನ್ನುವುದು ರೈತರ ಆರೋಪ.

8 ರಿಂದ 10 ವರ್ಷಗಳಿಂದ ಬೆಳೆಸಿರುವ ತೋಟದ ಅಡಿಕೆಯು ಕಳ್ಳಕಾಕರ ಪಾಲಾದರೆ ಜೀವನ ನಡೆಸುವುದು ಹೇಗೆ. ಅಡಿಕೆ ಬೆಳೆಗಾರರ ಕಷ್ಟಕ್ಕೆ ಪೊಲೀಸರು ಸ್ಪಂದಿಸಬೇಕು
ಎಂ.ಜೆ. ಜಗದೀಶ ಗೌಡ, ರೈತ, ಮಲ್ಲಾಪುರ
ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಮನೆಯ ಇರಿಸಿರುವ ದಾಸ್ತಾನು ಕಾಯಬಹುದು. ಆದರೆ ಬೇರೆ ಗ್ರಾಮದಲ್ಲಿ ಗೇಣಿ ಮಾಡಿರುವ ತೋಟದಲ್ಲಿ ಅಡಿಕೆಯನ್ನು ಕಾಯಲು ಸಾಧ್ಯವಿಲ್ಲ
ನರಸಿಂಹ ಎನ್., ಗೇಣಿದಾರ ಅಗಸನಹಳ್ಳಿ
ಸಿಬ್ಬಂದಿ ಕೊರತೆ ಇರುವುದರಿಂದ ರೈತರು ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಾವಲಿಗೆ ನಾಯಿಗಳನ್ನು ಸಾಕಬೇಕು. ರಾತ್ರಿ ಪಾಳಿಯಲ್ಲಿ ಗಸ್ತು ತಿರುಗಿದರೆ ಕಳ್ಳತನ ನಿಯಂತ್ರಿಸಬಹುದು. ಕೆಲವೊಂದು ಪ್ರಕರಣವನ್ನು ಪತ್ತೆಹಚ್ಚಲಾಗಿದೆ
ಲಕ್ಷ್ಮೀಪತಿ, ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT