ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜಿನ ರಾಜಕಾರಣ ಅಗತ್ಯವಿಲ್ಲ: ಆರಗ ಜ್ಞಾನೇಂದ್ರ

‘ಇ.ಡಿ. ಶೋಧ ಕಾರ್ಯಾಚರಣೆಗೂ ಬಿಜೆಪಿಗೂ ಸಂಬಂಧ ಇಲ್ಲ’
Published 7 ಅಕ್ಟೋಬರ್ 2023, 12:34 IST
Last Updated 7 ಅಕ್ಟೋಬರ್ 2023, 12:34 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ವೈಯಕ್ತಿಕ ತೇಜೋವಧೆ, ವಾಮಮಾರ್ಗದ ರಾಜಕಾರಣದ ಮಾಡುವ ಅಗತ್ಯ ಬಿಜೆಪಿಗಿಲ್ಲ. ಜಾರಿ ನಿರ್ದೇಶನಾಲಯದ (ಇ.ಡಿ.) ಶೋಧ ಕಾರ್ಯಾಚರಣೆಯಿಂದ ಅತ್ಯಂತ ಸಂತೋಷಪಡುವ ವ್ಯಕ್ತಿ ಮಾಜಿ ಸಚಿವ ಕಿಮ್ಮನೆ ರತ್ನಾಕರ’ ಎಂದು ಶಾಸಕ ಆರಗ ಜ್ಞಾನೇಂದ್ರ ಕುಟುಕಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮನಸು ಮಾಡಿದ್ದರೆ ನಾನು ಮತ್ತು ಜಿಲ್ಲೆಯ ಸಂಸದರು ಏನು ಬೇಕಾದರೂ ಮಾಡಬಹುದಿತ್ತು. ಕೆಲವು ಮಿತ್ರರು ಇ.ಡಿ. ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಗಾಂಧಿವಾದಿಗಳು ಕಳ್ಳ, ಸುಳ್ಳ ಎಂದು ಬಾಯಿಗೆ ಬಂದಂತೆ ಮಂಜುನಾಥ ಗೌಡ ವಿರುದ್ಧ ವಿಷಕಾರಿದ್ದರು. ಸದ್ಯದ ಪರಿಸ್ಥಿತಿಯ ಸಹಾನುಭೂತಿಯಿಂದ ಮಂಜುನಾಥ ಗೌಡ ವಿಚಾರದಲ್ಲಿ ಕಿಮ್ಮನೆ ಗೊಂದಲಕ್ಕೆ ಸಿಲುಕಿದ್ದಾರೆ. ಪಾದಯಾತ್ರೆಯಲ್ಲಿ ಮುಂದೆ ಸಾಗಲು ಭಯ. ಇನ್ನೊಂದು ಕಡೆಯಲ್ಲಿ ಮಂಜುನಾಥ ಗೌಡ ಬೆಂಬಲಿಗರು ಏನನ್ನುತ್ತಾರೋ ಎಂಬ ಅಳುಕಿನಿಂದ ತೊಳಲಾಟಕ್ಕೆ ಸಿಲುಕಿದ್ದಾರೆ’ ಎಂದು ಕಿಮ್ಮನೆ ಶಾಸನಸಭೆಯಲ್ಲಿ ಮಾತನಾಡಿದ ಹಳೆಯ ವಿಡಿಯೊಗಳನ್ನು ಉಲ್ಲೇಖಿಸಿ ತಿವಿದರು.

‘ಅಗತ್ಯ ಬಿದ್ದಾಗ ಹೊಗಳಿ ಉಳಿದ ಸಂದರ್ಭದಲ್ಲಿ ತೆಗಳುವ ಅವಶ್ಯಕತೆ ನನಗಿಲ್ಲ. ರಾಜಕೀಯ ಅಲೆಮಾರಿ, ಕಬ್ಬಿಣ ಕಳ್ಳ ಎಂದು ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್‌ ಹಿತದೃಷ್ಟಿಯಿಂದ ಸೈದ್ಧಾಂತಿಕ ಹೋರಾಟ ಮಾಡಿದ್ದೇನೆ. ರೈತರ ಬ್ಯಾಂಕ್‌ ಪಾವಿತ್ರ್ಯತೆ ಉಳಿಯಲಿ. ಚಿನ್ನಾಭರಣ ಸಾಲ ಹಗರಣದ ₹62 ಕೋಟಿ ಹಣ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು’ ಎಂದು ಆರಗ ಆಗ್ರಹಿಸಿದರು.

‘ಕಾಯಂ ವರದಕ್ಷಿಣೆ ಕೊಡುವ ನೆಂಟರು ಕಿಮ್ಮನೆಗೆ ಸಿಕ್ಕಂತೆ ನನಗೆ ಸಿಕ್ಕಿಲ್ಲ. ಹಿಂದೆ ಮಂಜುನಾಥ ಗೌಡ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರಲಿಲ್ಲ. ಪಕ್ಷ ಸೇರ್ಪಡೆ ನಂತರ ಒಂದೇ ಹಾರಕ್ಕೆ ಇಬ್ಬರೂ ಕೊರಳೊಡ್ಡಿದ್ದಾರೆ. ಭಾಷಣಗಳಲ್ಲಿ ಗಾಂಧಿ ವಿಚಾರಗಳನ್ನು ಹೇಳುವ ಬದಲು ವೈಚಾರಿಕವಾಗಿ ಗಾಂಧಿ ನಿಲುವನ್ನು ಪ್ರತಿಪಾದಿಸಲಿ’ ಎಂದು ಹೇಳಿದರು. 

ಬಿಜೆಪಿ ಮುಖಂಡರಾದ ನಾಗರಾಜ ಶೆಟ್ಟಿ, ಸಂದೇಶ್‌ ಜವಳಿ, ಚಂದುವಳ್ಳಿ ಸೋಮಶೇಖರ್‌, ಪೂರ್ಣೇಶ್‌ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT