ಬುಧವಾರ, ಜೂನ್ 23, 2021
23 °C
ಕೇಂದ್ರಕ್ಕೆ ಮನವಿ ಸಲ್ಲಿಸಿದ ರಾಜ್ಯ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಮಾಹಿತಿ

ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ಮತ್ತೆ ಮೂರು ಪಾಲಿಕೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದ ಬಳ್ಳಾರಿ, ಕಲಬುರ್ಗಿ, ಮೈಸೂರು ನಗರ ಪಾಲಿಕೆಗಳನ್ನು ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಿಲ್ಯಾಸ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಗರಗಳ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. ಪ್ರತಿ ಸ್ಮಾರ್ಟ್‌ಸಿಟಿಗೂ ₹ 500 ಕೋಟಿ ನೆರವು ಸಿಕ್ಕಿದೆ. ಕೋವಿಡ್‌, ಅಧಿಕ ಮಳೆಯ ಕಾರಣ ಕಾಮಗಾರಿಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು. ಎರಡು ತಿಂಗಳಿನಿಂದ ಮತ್ತೆ ವೇಗ ಪಡದಿವೆ. ಮುಂದಿನ ಏಪ್ರಿಲ್‌ ವೇಳೆಗೆ ಈಗ ಕೈಗೊಂಡಿರುವ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಹೈಟೆಕ್‌ ಆಗಿವೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆಯೊಡ್ಡಿವೆ. ಅತ್ಯುತ್ತಮ ಉದ್ಯಾನಗಳು ತಲೆ ಎತ್ತಿವೆ. ಮೂಲ ಸೌಕರ್ಯಗಳಿಗೆ ಮತ್ತಷ್ಟು ನೆರವು ನೀಡಲು ಸರ್ಕಾರ ಸಿದ್ಧವಿದೆ. ನಗರದ ಇತರೆ ಭಾಗಗಳಲ್ಲೂ ವ್ಯವಸ್ಥಿತ ಯುಜಿಡಿ, ನೀರಿನ ಸರಬರಾಜು ವ್ಯವಸ್ಥೆ ಪೂರ್ಣಗೊಳಿಸಲು ನಗರ ಪಾಲಿಕೆ ಹೊಸದಾಗಿ ₹ 300 ಕೋಟಿ ಪ್ರಸ್ತಾವ ಸಲ್ಲಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಬಜೆಟ್‌ನಲ್ಲಿ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ. ನಗರದ ಅಭಿವೃದ್ಧಿಗೆ ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಗಮನ ಹರಿಸಿದ್ದಾರೆ ಎಂದು ಶ್ಲಾಘಿಸಿದರು.

ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಗರದ ಕಲ್ಮಶ ನೀರು ನದಿಗೆ ಬಿಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ನಗರವನ್ನು ಸುಂದರವಾಗಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗಳಿಗೆ ಪರಿಕರ ವಿತರಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯ ನೆರವು ಪಡೆಯಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಎಸ್‌.ರುದ್ರೇಗೌಡ, ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಕಾಮಗಾರಿಗಳನ್ನ ವ್ಯವಸ್ಥಿತವಾಗಿ ಮುಗಿಸುತ್ತಿಲ್ಲ ಎಂದು ಸ್ಮಾರ್ಟ್‌ಸಿಟಿ ಕಾಮಗಾರಿಗಳ ಅಸಮರ್ಪಕ ಅನುಷ್ಠಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಯುಜಿಡಿ ಸಂಪರ್ಕ ಕಲ್ಪಿಸಿಕೊಳ್ಳದ ಮನೆಗಳ ವಿದ್ಯುತ್, ನೀರಿನ ಸಂಪರ್ಕ ಕಡಿತ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಸಿದರು.

ಸಚಿವರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ₹ 3.92 ಕೋಟಿ ವೆಚ್ಚದಲ್ಲಿ ಯೋಗ ಭವನ, ₹ 19.48 ಕೋಟಿ ವೆಚ್ಚದ ವಿವಿಧ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ₹ 12.61 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ನಗರ ಪಾಲಿಕೆಯ ₹ 19.53 ಕೋಟಿ ವೆಚ್ಚದ ಹಲವು ಯೋಜನೆಗಳ ಉದ್ಘಾಟನೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ₹ 105 ವೆಚ್ಚದ 137 ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು