ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಜೀತದ ರೀತಿ ರಕ್ತ ಬಸಿಯುವ ಕೂಲಿ ಕಾರ್ಮಿಕರು

Published 19 ಜನವರಿ 2024, 7:18 IST
Last Updated 19 ಜನವರಿ 2024, 7:18 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೆಲಸ ಅರಸಿ ಬರುವ ಕೂಲಿಯಾಳುಗಳ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ವಂಚಿಸುವ ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಕಡಿಮೆ ಕೂಲಿಗೆ ಕಾರ್ಮಿಕರನ್ನು ದುಡಿಸಿಕೊಳ್ಳುವ ದಂಧೆ ಮಲೆನಾಡಿನಲ್ಲಿ ತನ್ನ ಜಾಲ ವಿಸ್ತರಿಸಿದೆ. 

ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಮನೆ, ಜಮೀನು, ಹೋಟೆಲ್‌ ಹಾಗೂ ಇತರೆ ಉದ್ಯಮಗಳಲ್ಲಿ ಬೇಕಾಬಿಟ್ಟಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಜಮೀನ್ದಾರರ ಮನೆಗಳಲ್ಲಿ ಬೆವರು ಹರಿಸುವ ಬಡವರಿಗೆ ಶ್ರಮಕ್ಕೆ ತಕ್ಕುದಾದ ಕೂಲಿ ಸಿಗುತ್ತಿಲ್ಲ.  

ಜೀತ ಪದ್ಧತಿ ಮಾದರಿಯಲ್ಲೇ, ಮಾನವ ವಿರೋಧಿ ಚಟುವಟಿಕೆಯ ಮತ್ತೊಂದು ಮುಖ ಗೋಚರವಾಗುತ್ತಿದೆ. ಬಸ್‌, ರೈಲು ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು ಯಾಮಾರಿಸಲಾಗುತ್ತಿದೆ. ಅಸಹಾಯಕ ವ್ಯಕ್ತಿಗಳನ್ನು ಸ್ಥಳೀಯ ಮೇಸ್ತ್ರಿ ಬಳಿ ವ್ಯವಹಾರ ಕುದುರಿಸಿ, ಬಿಟ್ಟು ಹೋಗಲಾಗುತ್ತದೆ. ಇದು ಒಂದು ರೀತಿಯಲ್ಲಿ ಮಾನವ ಕಳ್ಳ ವ್ಯಾಪಾರ ದಂಧೆಯ ರೂಪದಲ್ಲಿಯೇ ನೆಲೆ ವಿಸ್ತರಿಸಿಕೊಂಡಿದೆ. ಈಚೆಗೆ ಗುತ್ತಿಎಡೇಹಳ್ಳಿ ಗ್ರಾಮದಲ್ಲಿ 19 ಕೂಲಿ ಕಾರ್ಮಿಕರನ್ನು ಬಂಧಮುಕ್ತಗೊಳಿಸಿದ ಪ್ರಕರಣ ಇದಕ್ಕೆ ತಾಜಾ ನಿದರ್ಶನ.

‘ಹೊಟ್ಟೆ ತುಂಬ ಊಟ, ಹೆಂಡ ನೀಡಿ ಕಾರ್ಮಿಕರನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಗುತ್ತಿಎಡೇಹಳ್ಳಿ ಗ್ರಾಮದಲ್ಲಿದ್ದ 19 ಕೂಲಿ ಕಾರ್ಮಿಕರೂ 40 ವರ್ಷ ಮೇಲ್ಪಟ್ಟ ಪುರುಷರಾಗಿದ್ದು, ಅವರೆಲ್ಲರೂ ಮದ್ಯವ್ಯಸನಿಗಳು. ದಾವಣಗೆರೆ, ಚಿಕ್ಕಮಗಳೂರು, ಶಿಕಾರಿಪುರ, ಹಾವೇರಿ, ಭದ್ರಾವತಿ, ಹೊನ್ನಾಳಿಯ ಕಾರ್ಮಿಕರ ಜೊತೆಗೆ, ಬಿಹಾರ, ಛತ್ತೀಸಗಢ, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದವರೂ ಇದ್ದಾರೆ. ಹಿಂದಿ ಹೊರತಾಗಿ ಬೇರೆ ಭಾಷೆ ತಿಳಿಯದ ಹೊರ ರಾಜ್ಯದವರು ತಮ್ಮ ಕುಟುಂಬ ವರ್ಗದವರನ್ನು ಸಂಪರ್ಕಿಸದಂತೆ ಮೊಬೈಲ್‌ ಫೋನ್‌ ಕೂಡ ಕಿತ್ತುಕೊಳ್ಳಲಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಒಪ್ಪದ ಮುಖಂಡರೊಬ್ಬರು ಆರೋಪಿಸಿದರು.

ಮಾನವೀಯತೆ ಮರೆತ ಉದ್ಯಮಿಗಳು: 

‘ತೀರ್ಥಹಳ್ಳಿ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಜಮೀನುಗಳಲ್ಲಿ ದುಡಿಯುವ ಹೊರ ಜಿಲ್ಲೆ, ರಾಜ್ಯಗಳ ದೊಡ್ಡ ಶ್ರಮಿಕ ವರ್ಗವೇ ಇದೆ. ಮನೆ ಕೆಲಸದಿಂದ ಹಿಡಿದು ಅನೇಕ ಉದ್ಯಮಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ತೋಟದ ಬೇಸಾಯ, ಗದ್ದೆನಾಟಿ, ಕೊಯ್ಲು, ಗಾರೆ ಕೆಲಸ, ಹೋಟೆಲ್‌, ಲಾಡ್ಜ್‌, ಲೈಟಿಂಗ್‌, ಸೌಂಡ್ಸ್‌, ಜಾನುವಾರು ಸಾಕಾಣಿಕೆ, ತೋಟದ ನಿರ್ವಹಣೆ, ಬೇಕರಿ, ಇಂಡಸ್ಟ್ರೀ, ಕಬ್ಬಿಣ, ಸಿಮೆಂಟ್‌ ಅಂಗಡಿಗಳಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಿದ್ದಾರೆ. ಕಡಿಮೆ ಕೂಲಿಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಕಾರ್ಮಿಕರ ಹಿನ್ನೆಲೆ, ದಾಖಲೆಗಳನ್ನು ಕೂಡಾ ಪರಿಶೀಲನೆ ಮಾಡುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ. 

ವಲಸೆ ಕಾರ್ಮಿಕರಿಗಿಲ್ಲ ನೋಂದಣಿ: 

ಗ್ರಾಮೀಣ ಹಾಗೂ ಪಟ್ಟಣದಲ್ಲಿ ದಿನಗೂಲಿಗೆ ಬರುವ ಅನ್ಯ ರಾಜ್ಯ, ಜಿಲ್ಲೆಗಳ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುವುದಿಲ್ಲ. ಅನೇಕ ಕಡೆಗಳಲ್ಲಿ ಕಾರ್ಮಿಕರ ಮೂಲವನ್ನು ಬಚ್ಚಿಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕೂಲಿಯಾಳುಗಳಿಗೆ ಹೆಂಡದ ಆಮಿಷ ತೋರಿಸಿ ಹೆಚ್ಚೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಅನ್ಯ ದೇಶದ ಅಕ್ರಮ ವಲಸಿಗರು ಕೂಡಾ ಕಾರ್ಮಿಕರಾಗಿ ಜೀವ ಸವೆಸುತ್ತಿದ್ದಾರೆ’ ಎಂದೂ ಆರೋಪಿಸುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನ ಶಿವರಾಜಪುರ ಬಳಿ ಕೂಲಿಗಾಗಿ ಬಂದಿರುವ ಕಾರ್ಮಿಕರು ವಾಸಿಸುವ ಡೇರೆ
ತೀರ್ಥಹಳ್ಳಿ ತಾಲ್ಲೂಕಿನ ಶಿವರಾಜಪುರ ಬಳಿ ಕೂಲಿಗಾಗಿ ಬಂದಿರುವ ಕಾರ್ಮಿಕರು ವಾಸಿಸುವ ಡೇರೆ
ವೇತನ ವಂಚಿಸುವ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ಆಮಿಷ ಒಡ್ಡಿ ಕೆಲಸ ಮಾಡಿಸಿಕೊಂಡರೆ ಪ್ರಕರಣ ದಾಖಲಿಸಲಾಗುತ್ತದೆ. ನೇರವಾಗಿ ಬರುವ ಕಾರ್ಮಿಕರಿಗೆ ಗುರುತಿನ ಚೀಟಿ ಕೊಡಲು ಆಗುವುದಿಲ್ಲ
–ಸುಕಿತ ಕೆ.ಸಿ ಕಾರ್ಮಿಕ ನಿರೀಕ್ಷಕಿ
ವಲಸೆ ಕಾರ್ಮಿಕರ ಶಿಬಿರಗಳನ್ನು ಖುದ್ದಾಗಿ ಪರೀಕ್ಷಿಸುತ್ತೇನೆ. ಧ್ವನಿ ಇಲ್ಲದವರ ನೆರವಿಗೆ ಪೊಲೀಸ್‌ ಇಲಾಖೆ ಇದೆ. ವೇತನ ವಂಚಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ
–ಗಜಾನನ ವಾಮನ ಸುತಾರ ಡಿವೈಎಸ್ಪಿ
ಬಂಧಮುಕ್ತ ಕಾರ್ಮಿಕರು
ಗುತ್ತಿಎಡೇಹಳ್ಳಿಯಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ನೀಡದೇ ದುಡಿಸಿಕೊಳ್ಳುತ್ತಿದ್ದ ಪ್ರಕರಣ ಈಚೆಗೆ ಪತ್ತೆಯಾಗಿತ್ತು. ಕಾರ್ಮಿಕರ ವಾಸ್ತವ್ಯಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂಬ ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಮೇಸ್ತ್ರಿ ಕರಿಯಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.  ಉಪವಿಭಾಗಾಧಿಕಾರಿ ತಹಶೀಲ್ದಾರ್ ಉಪ ತಹಶೀಲ್ದಾರ್ ಕಾರ್ಮಿಕ ಇಲಾಖೆ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಗುತ್ತಿ ಎಡೇಹಳ್ಳಿ ಗ್ರಾಮ ಹಾಗೂ ಮಾಳೂರು ಠಾಣೆಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಮಾಹಿತಿ ಪಡೆದಿದ್ದರು. 19 ಕಾರ್ಮಿಕರನ್ನು ಬಂಧ ಮುಕ್ತಗೊಳಿಸಲಾಗಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT