ಗುರುವಾರ , ಮಾರ್ಚ್ 30, 2023
32 °C
‘ಅಪ್ಪು ನುಡಿನಮನ’ ಕಾರ್ಯಕ್ರಮದಲ್ಲಿ ಸಿದ್ದಲಿಂಗೇಶ್ವರ ಸ್ವಾಮೀಜಿ

ಪುನೀತ್‌ ಸಮಾಜ ಸೇವೆಯ ‘ಅರಸು’: ಸಿದ್ದಲಿಂಗೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಟನೆಯಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ನಟ ಪುನೀತ್‌ ರಾಜ್‌ಕುಮಾರ್‌ ಸಮಾಜ ಸೇವೆಯ ಅರಸು ಎಂದು ಗೋಣಿಬೀಡಿನ ಸಿದ್ದಲಿಂಗೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸದ್ಭಾವನಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಪ್ಪು ನುಡಿನಮನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆ, ಸಿನಿಮಾ ನಿರ್ಮಾಣದ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ, ಈ ಕುರಿತು ಅವರು ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರ ಬಯಸುತ್ತಿರಲಿಲ್ಲ. ಪುನೀತ್ ಅವರ ಬದುಕು 46ನೇ ವಯಸ್ಸಿಗೆ ಅಂತ್ಯಗೊಂಡಿದ್ದು ಬೇಸರದ ಸಂಗತಿ. ಯಾವ ಸಂತನೂ ಮಾಡದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ ಎಂದು
ಹೇಳಿದರು.

ಬದುಕು ಅನಿಶ್ಚಿತ. ಒಂದು ಕಾಲದಲ್ಲಿ ಸಾವಿಗೆ ಕಾರಣವಿತ್ತು. ಆದರೆ, ಇಂದು ಸಾವಿಗೆ ಕಾರಣ ಸಿಗುತ್ತಿಲ್ಲ. ನಿಜ ಜೀವನದಲ್ಲಿ ಪುನೀತ್ ರಾಜ್‌ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆದಿದ್ದರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಎನ್‌. ರಮೇಶ್, ನಾಗರಾಜ್ ಕೊಣನೂರು, ವಿಜಯಕುಮಾರ್, ಜನಾರ್ದನ ಪೈ ಭಾಗವಹಿಸಿದ್ದರು. ಸದ್ಭಾವನಾ ಟ್ರಸ್ಟ್‌ ಅಧ್ಯಕ್ಷ ಎಂ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು.

ಗಾಯಕ ರಾಜೇಶ್‌ ಕೃಷ್ಣನ್‌ ನೇತೃತ್ವದಲ್ಲಿ ಗಾಯಕರಾದ ಸುರೇಖಾ ಹೆಗಡೆ, ಋತ್ವಿಕ್‌ ಮುರಳೀಧರ್, ಚಾರ್ವಿ, ಎಸ್‌.ಪಿ. ವಿಶಾಖ್ ಅವರು ಪುನೀತ್ ಅವರ ಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಿದರು.

ಚಿತ್ರಮಂದಿರದಲ್ಲಿ ನುಡಿ ನಮನ

ನಟ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲೂ ಭಾನುವಾರ ಏಕಕಾಲಕ್ಕೆ ನಮನ ಸಲ್ಲಿಸಲಾಯಿತು. ಶಿವಮೊಗ್ಗದ ಚಿತ್ರಮಂದಿರಗಳಲ್ಲೂ ಅವರ ಭಾವಚಿತ್ರವನ್ನು ಇರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ಎಚ್.ಪಿ.ಸಿ ಚಿತ್ರಮಂದಿರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಕ್ಯಾಂಡಲ್ ಬೆಳಗಿ ಮೌನಾಚರಣೆ ಮಾಡಲಾಯಿತು.

ಶಿವಮೊಗ್ಗದ ಕರಾಟೆ ಪಟುಗಳು ಕರಾಟೆ ಯೂನಿಫಾರ್ಮ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ನಮಿಸಿದರು. ಶಿವಮೊಗ್ಗದ ಆರು ಚಿತ್ರಮಂದಿರ, ಭಾರತ್ ಸಿನಿಮಾಸ್‌ನಲ್ಲೂ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು