ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗಾರರ ಬವಣೆಗೆ ಕೊನೆಯೆಂಬುದಿಲ್ಲ: ಅಸಂಘಟಿತ ಅಡಿಕೆ ಕಾರ್ಮಿಕರ ಅಭದ್ರತೆ

ಅಸಂಘಟಿತ ಅಡಿಕೆ ಕಾರ್ಮಿಕರ ಅಭದ್ರತೆ; ಬೇಕಿದೆ ವಿಮೆ ಸೌಲಭ್ಯ
Last Updated 30 ಜೂನ್ 2022, 4:31 IST
ಅಕ್ಷರ ಗಾತ್ರ

ಹೊಸನಗರ: ಅಸಂಘಟಿತ ಕಾರ್ಮಿಕರಾದ ಅಡಿಕೆ ಕೊನೆಗಾರರ (ಗೊನೆ ಕೀಳುವ ಕುಶಲಕರ್ಮಿ) ಬದುಕು ಅಭದ್ರತೆಯಿಂದ ಕೂಡಿದೆ. ಅಪಾಯದಿಂದಲೇ ಕೂಡಿರುವ ಅವರ ವೃತ್ತಿಯಂದಾಗಿ ಸೂಕ್ತ ಭದ್ರತೆ ಇಲ್ಲವಾಗಿದೆ.

ಕೊನೆಗಾರನಿಲ್ಲದ ಅಡಿಕೆ ತೋಟವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಡಿಕೆ ಫಸಲು ಕೊನೆಗಾರನ ಸಹಕಾರದಿಂದ ಮಾತ್ರ ಬೆಳೆಗಾರನ ಕೈಸೇರಲು ಸಾಧ್ಯ. ಆದರೆ, 50–60 ಅಡಿ ಎತ್ತರದ ಅಡಿಕೆ ಮರವೇರಿ ಔಷಧ ಸಿಂಪಡಿಸುವ, ಕೊನೆ ಕೊಯ್ಯುವ ಅತ್ಯಂತ ಕಷ್ಟದ ಕೆಲಸವನ್ನು ವೃತ್ತಿಯಾಗಿಸಿಕೊಂಡ ಕೊನೆಗಾರರು ಆತಂಕ ವನ್ನೇ ಎದುರು ನೋಡುವಂತಾಗಿದೆ. ಅಭದ್ರತೆ ಯಲ್ಲೇ ದಿನದೂಡಬೇಕಾದ ಪರಿಸ್ಥಿತಿ ಇದೆ.

ಜೀವಭಯ ತೊರೆದು ಮರವೇರಿ ತಾಸುಗಟ್ಟಲೇ ತುದಿಯಲ್ಲಿ ಕುಳಿತು ಕೆಲಸ ಮಾಡುವ ಕಾರ್ಮಿಕನಿಗೆ ಅಪಾಯ ಸಂಭವಿಸಿದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಸಾಧನವಿಲ್ಲ. ಸಹಾಯಕ್ಕೆ ಕೈ ಚಾಚಿದರೆ ಯಾರೂ ಏನೂ ಮಾಡದ ಸ್ಥಿತಿ. ಏರಿದ ಮರ ಮುರಿದರೆ, ಕಾಲು ಜಾರಿದರೆ, ಆಯ ತಪ್ಪಿದರೆ ನೇರ ಸಾವಿನ ದವಡೆಗೇ ಸಿಲುಕುವ ಸ್ಥಿತಿ. ಮರದಿಂದ ಬಿದ್ದು ಸಾಯುವುದು, ಮುರಿದ ಬೆನ್ನು ಮೂಳೆ ನೋವಿನಿಂದ ಜೀವನ ಪೂರ್ತಿ ಮಲಗಿ ಕಾಲ ಸವೆಸುವುದು ಕೊನೆಗಾರರ ಕಸುಬಿನಲ್ಲಿ ಸಾಮಾನ್ಯ.

ಇಂದು ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಕೃಷಿಯಲ್ಲಿ ತಾಂತ್ರಿಕತೆ, ಯಂತ್ರ ಆವಿಷ್ಕಾರ ನಡೆದಿದೆ. ಆದರೆ, ಕೊನೆಗಾರರಿಗೆ ಪರ್ಯಾಯ ಆವಿಷ್ಕಾರ ಇದುವರೆಗೆ ಆಗಿಲ್ಲ. ಇಲ್ಲಿ ಕಾರ್ಮಿಕರ ಶ್ರಮ ಅಗತ್ಯವಾಗಿ ಬೇಕೇ ಬೇಕು ಎಂಬಂತಿದೆ.

ಜಾರುವ ಮರ: ವಾರ ಕಾಲ ಮಳೆ ಸುರಿದರೆ ಮಲೆನಾಡ ಅಡಿಕೆ ತೋಟಕ್ಕೆ ಕೊಳೆ ರೋಗ ಬಾಧಿಸುತ್ತದೆ. ಮಳೆಯನ್ನು ಲೆಕ್ಕಿಸದೆ ಬೋರ್ಡೋ ದ್ರಾವಣ ಸಿಂಪಡಿಸುವುದು ಅನಿವಾರ್ಯ. ಜಾರುವ ಮರ ಹತ್ತುವುದು ಬಲು ತ್ರಾಸದಾಯಕ. ಕಂಬಳಿ ಬಳಸಿ ಮರ ಹತ್ತುವುದು ರೂಢಿ. ಕಾಲಿಗೊಂದು ಉದಿ, ಕುಳಿತುಕೊಳ್ಳಲು ಕೊಟ್ಟೆಮಣೆ ಬಿಟ್ಟರೆ ಮತ್ಯಾವ ಸಾಧನವೂ ಅವರಿಗಿಲ್ಲ. ಕೊಂಚ ಎಚ್ಚರ ತಪ್ಪಿದರೂ ಅವಘಡ ತಪ್ಪಿದ್ದಲ್ಲ.

ಅಸಂಘಟಿತ ಕಾರ್ಮಿಕರು: ಅಪಾಯದ ಕೆಲಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿರುವ ಕೊನೆಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ವೃತ್ತಿ ಭದ್ರತೆ ಇಲ್ಲ. ಕ್ಷೇಮಾಭಿವೃದ್ಧಿ ಸಂಘಗಳು ಅಸ್ಥಿತ್ವದಲ್ಲಿಲ್ಲ. ಪ್ರಾಣಾಪಾಯ ಸಂಭವಿಸಿದಲ್ಲಿ ತೋಟದ ಮಾಲೀಕರು ಆಸ್ಪತ್ರೆ ವೆಚ್ಚ ಭರಿಸಿದರೂ ಜೀವನದುದ್ದಕ್ಕೂ ಹಣಕಾಸು ತೊಂದರೆ ನಿಭಾಯಿಸುವ ಹೊರೆ ಕಾರ್ಮಿಕನದ್ದೇ. ಸಮರ್ಪಕ ವಿಮಾ ಯೋಜನೆಯೂ ಲಭ್ಯವಿಲ್ಲ. ಸರ್ಕಾರದ ಪರಿಹಾರವೂ ಸುಲಭದಲ್ಲಿ ಸಿಗುವುದಿಲ್ಲ.

ಕೆಲಸದ ವೇಳೆ ಕೊನೆಗಾರ ಮೃತಪಟ್ಟರೆ ಸರ್ಕಾರ ₹ 1 ಲಕ್ಷ ಪರಿಹಾರ ನೀಡುತ್ತದೆ. ಅದೂ ಅಗತ್ಯ ದಾಖಲೆ ಪತ್ರ ಇದ್ದರಷ್ಟೇ. ಎಲ್ಲರಿಗೂ ಪರಿಹಾರ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಕೊನೆಗಾರ ಬಿದ್ದು ಮೃತಪಟ್ಟ ಜಮೀನಿಗೆ ಕಂದಾಯ ಇಲಾಖೆಯಲ್ಲಿ
ಅಗತ್ಯ ಖಾತೆ ಹೊಂದಿದ್ದರಷ್ಟೇ ಪರಿಹಾರ ನೀಡಲು ಸಾಧ್ಯ ಎನ್ನುತ್ತಾರೆ ಕಂದಾಯ ಅಧಿಕಾರಿಗಳು.

ವಿಮಾ ಯೋಜನೆಗಳು ಬೇಕು: ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅವರ ಜೀವನ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೆ ತಂದಿದೆ. ಆದರೆ ಸರ್ಕಾರದ ಯೋಜನೆಗಳು ಅಸಂಘಟಿತ ಕೂಲಿ ಕಾರ್ಮಿಕರಿಗೆ ಇನ್ನೂ ತಲುಪಿಲ್ಲ. ‘ನಮ್ಮ ನೋವಿಗೆ ಸ್ಪಂದಿಸುವ ವಿಮಾ ಯೋಜನೆಗಳು ಅವಶ್ಯವಾಗಿದೆ. ಜಮೀನ್ದಾರರು ಕೆಲಸಗಾರರ ಹಿತಕ್ಕಾಗಿ ಆರೋಗ್ಯ ವಿಮಾ ಪಾಲಿಸಿ ಮಾಡಿಸಬೇಕು’ ಎನ್ನುವ ಒತ್ತಾಯ ಕೊನೆಗಾರರದ್ದು.

ಬೀದಿಗೆ ಬೀಳುತ್ತಿದೆ ಕೊನೆಗಾರರ ಬದುಕು

ನಾಲ್ಕು ವರ್ಷಗಳ ಹಿಂದೆ ಕಾರ್ಗಡಿಯಲ್ಲಿ ಕೊನೆಗಾರ ಗ್ರಗೋರಿ ಮಿನೆಜಸ್ ಎಂಬುವರು ಮರದಿಂದ ಬಿದ್ದು ಸಾವು ಮೃತಪಟ್ಟರು. ಅವರ ಸಹೋದರ ಜೋಸೆಫ್ ಮಿನೆಜಸ್ ಕೂಡ ಕೊನೆ ಕೆಲಸದಲ್ಲಿ ಬಿದ್ದು ಹಾಸಿಗೆ ಹಿಡಿದಿದ್ದಾರೆ. 10 ವರ್ಷಗಳ ಹಿಂದೆ ಮರದಿಂದ ಬಿದ್ದ ಜೋಸೆಫ್ ಮಿನೆಜಸ್ ಇನ್ನೂ ಎದ್ದಿಲ್ಲ.

‘ಇಷ್ಟು ವರ್ಷಗಳು ಕಳೆದರೂ ರೋಗ್ಯ ಸುಧಾರಿಸಿಲ್ಲ. ಸುಧಾರಿಸುವ ಭರವಸೆಯೂ ಇಲ್ಲ. ಅವರ ಔಷಧಿ ಖರ್ಚಿಗೂ ಪರದಾಡುವ ಪರಿಸ್ಥಿತಿ ಇದೆ’ ಎಂದು ಅಳಲು ತೋಡಿಕೊಳ್ಳುವರು ಜೋಸೆಫ್ ಮಿನೆಜಸ್ ಅವರ ಸಂಬಂಧಿ.

ಕುಂಬ್ರಿಬೈಲಿನ ಕೊನೆಗಾರ ಈಶ್ವರ ಎಂಬುವವರದ್ದು ಇದೇ ಕಥೆ. ಅಡಿಕೆ ಮರದಿಂದ ಬಿದ್ದು ದೇಹದ ಸ್ವಾಧೀನ ಕಳೆದುಕೊಂಡು 4 ವರ್ಷ ಒದ್ದಾಡಿದರು. ಲಕ್ಷಾಂತರ ಹಣ ಖರ್ಚು ಮಾಡಿದರೂ ಆರೋಗ್ಯ ಸರಿ ಹೋಗಲಿಲ್ಲ. ಈಚೆಗೆ ಕಿಡ್ನಿ ಸಮಸ್ಯೆಗೆ ಒಳಗಾಗಿ ಮೃತಪಟ್ಟರು.

ಇವು ಒಂದೆರಡು ಉದಾಹರಣೆ ಅಷ್ಟೇ. ಮರದಿಂದ ಬಿದ್ದು ಅದೆಷ್ಟೋ ಕೊನೆ ಕಾರ್ಮಿಕರು ಸಾವು ಕಂಡಿದ್ದಾರೆ. ಹಾಸಿಗೆ ಹಿಡಿದು ನರಳಾಡುತ್ತಿದ್ದಾರೆ.

* ಮ್ಯಾಮ್ಕೋಸ್ ಸಂಸ್ಥೆ ತನ್ನ ಸದಸ್ಯರಿಗೆ ಗುಂಪು ವಿಮಾ ಅಭಿರಕ್ಷೆ ಯೋಜನೆಯನ್ನು ಜಾರಿಗೆ ತಂದಿದೆ. ಗರಿಷ್ಠ ₹ 5 ಲಕ್ಷದವರೆಗೆ ಪರಿಹಾರ ಲಭ್ಯವಾಗುವ ಈ ಯೋಜನೆಗಳು ರೈತರಿಗೆ ಸಹಕಾರಿ ಆಗಿವೆ.

–ಕೆ.ವಿ.ಕೃಷ್ಣಮೂರ್ತಿ, ಮಾಮ್ಕೋಸ್ (ಮಲೆನಾಡು ಅಡಿಕೆ ಮಾರುಕಟ್ಟೆ ಸಹಕಾರಿ ಸಂಘ) ನಿರ್ದೇಶಕ

* ಬದುಕು ಕಸಿದುಕೊಳ್ಳುವ ಕೊನೆ ಕಸುಬು ಯಾವತ್ತಿಗೂ ಅಪಾಯವೇ. ಸರ್ಕಾರ ನಮ್ಮ ವೃತ್ತಿಯನ್ನು ಗೌರವಿಸಿ ಅವಶ್ಯ ವಿಮಾ ಯೋಜನೆ ತರಬೇಕು. ಸಾವು ಸಂಭವಿಸಿದಲ್ಲಿ ಕುಟುಂಬಕ್ಕೆ ಆಸರೆ ಆಗಬೇಕು.

–ನಾರಾಯಣ ಎನ್‌, ಕೊನೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT