ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ಚಂದ್ರಶೇಖರನ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡುಬಂದಿಲ್ಲ. ಅವರು ತಪ್ಪಿತಸ್ಥರು ಎಂದು ಆರೋಪಪಟ್ಟಿಯಲ್ಲೂ ಉಲ್ಲೇಖಿಸಿಲ್ಲ’ ಎಂದು ಸಿಐಡಿ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.
ತನಿಖಾ ತಂಡ 300 ಪುಟಗಳ ಆರೋಪಪಟ್ಟಿಯನ್ನು ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದೆ.
‘ಸತ್ತವರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಸುವುದು ಅಸಾಧ್ಯ. ಈ ಹಗರಣದಲ್ಲಿ ಎಂಟು ಪ್ರಕರಣ ದಾಖಲಾಗಿವೆ. ಆರೋಪ ಪಟ್ಟಿಯಲ್ಲಿ ಎಲ್ಲಿಯೂ ಅವರು ತಪ್ಪಿತಸ್ಥರು ಎಂದು ಉಲ್ಲೇಖಿಸಿಲ್ಲ’ ಎಂಬುದಾಗಿ ಪ್ರಕರಣದ ತನಿಖಾಧಿಕಾರಿ ರಫೀಕ್ ತಿಳಿಸಿದ್ದಾರೆ.
‘ಪ್ರಕರಣದಲ್ಲಿ ಸಿಐಡಿ ತಂಡ ಸರಿಯಾಗಿ ತನಿಖೆ ನಡೆಸಿರದಿದ್ದರೆ, ಪತಿ ಹಣ ತಿಂದಿರಬಹುದು ಎಂದು ತನಿಖಾ ತಂಡ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರೆ ಹೈಕೋರ್ಟ್ ಮೊರೆ ಹೋಗುವೆ’ ಎಂದು ಚಂದ್ರಶೇಖರನ್ ಪತ್ನಿ ಕವಿತಾ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ರಫೀಕ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.