ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣಂದೂರು: ಸಮಗ್ರ ಕೃಷಿಯಲ್ಲಿ ನಾನಾ ಪ್ರಯೋಗ

ಅಡಿಕೆ, ಭತ್ತ, ಕಬ್ಬು ಬೆಳೆ ಬೆಳೆದು ಉತ್ತಮ ಆದಾಯ ಕಂಡುಕೊಂಡ ಎಂ.ಶಿವಪ್ಪ
Last Updated 1 ಡಿಸೆಂಬರ್ 2021, 5:06 IST
ಅಕ್ಷರ ಗಾತ್ರ

ಕೋಣಂದೂರು: 6 ಎಕರೆ ಜಮೀನಿನಲ್ಲಿ ಹಲವು ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಕಂಡುಕೊಂಡಿದ್ದಾರೆ ಮೀನುಮನೆಕೊಪ್ಪದ ಕೃಷಿಕ ಎಂ.ಶಿವಪ್ಪ.

ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ‘ಉತ್ತಮ ರೈತ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಮೀಪದ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಮನೆಕೊಪ್ಪದಲ್ಲಿ ತಮ್ಮ 6 ಎಕರೆ ಜಮೀನಿನಲ್ಲಿ ಭತ್ತ, ಅಡಿಕೆ, ಶುಂಠಿ, ಬಾಳೆ, ಕಬ್ಬು ಮುಂತಾದ ಪ್ರಮುಖ ಬೆಳೆಗಳ ಜೊತೆಗೆ ಉಪ ಬೆಳೆಗಳಾಗಿ ಏಲಕ್ಕಿ, ಕಾಳು ಮೆಣಸು, ನುಗ್ಗೆ ಹಾಗೂ ತರಕಾರಿ ಬೆಳೆದಿದ್ದಾರೆ. ಶಿವಪ್ಪ ಅವರು 2ಎಕರೆ 28 ಗುಂಟೆಯಲ್ಲಿ ಅಡಿಕೆ ಹಾಗೂ 2 ಎಕರೆ ಗದ್ದೆಯಲ್ಲಿ ಭತ್ತವನ್ನು ಬೆಳೆದಿದ್ದಾರೆ.

ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಒಂದು ಎಚ್.ಎಫ್ ಹಸು, ಎರಡು ಜರ್ಸಿ ಹಸುಗಳು ಹಾಗೂ ಒಂದು ಎಮ್ಮೆ , 2 ಕರುಗಳನ್ನು ಸಾಕಣೆ ಮಾಡುತ್ತಿದ್ದಾರೆ. ದಿನಕ್ಕೆ 7ರಿಂದ 8 ಲೀಟರ್ ಹಾಲನ್ನು ಡೇರಿಗಳಿಗೆ ಹಾಕುತ್ತಿದ್ದಾರೆ.

ಹೈನುಗಾರಿಕೆ ಜೊತೆ ಡಾಬರ್‌ಮನ್‌ ತಳಿಯ ನಾಯಿಯನ್ನು ಸಾಕಣೆ ಮಾಡಿ ಅದರಿಂದ ಬರುವ ಮರಿಗಳನ್ನು ತಲಾ ಒಂದಕ್ಕೆ ₹ 5ಸಾವಿರದಿಂದ ₹6 ಸಾವಿರಗಳಿಗೆ ಮಾರಾಟ ಮಾಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಚೆಂಡು ಹೂವುಗಳನ್ನು ಅಲ್ಪಾವಧಿ ಬೆಳೆಯಾಗಿ ಬೆಳೆಯುವ ಮೂಲಕ ಕೆ.ಜಿ. ಒಂದಕ್ಕೆ ₹ 80ರಿಂದ ₹100ಕ್ಕೆ ಮಾರಾಟ ಮಾಡಿ ಸಾಕಷ್ಟು ಆದಾಯ ವೃದ್ಧಿಸಿಕೊಂಡಿದ್ದಾರೆ.

ಸಮಗ್ರ ಕೃಷಿಗಾಗಿ ಒಂದು ಕೊಳವೆಬಾವಿ ಇದ್ದು, ಇದು ಸಂಪೂರ್ಣ ಸೋಲಾರ್‌ನಿಂದ ನೀರೆತ್ತುತ್ತದೆ. ಇದರಿಂದ ವಿದ್ಯುಚ್ಛಕ್ತಿಯ ಅವಲಂಬನೆ ಇಲ್ಲ. ಉತ್ತಮ ನೀರು ಲಭ್ಯ ಇರುವುದರಿಂದ ಜಮೀನಿನಲ್ಲಿ ವಿವಿಧ ಬಗೆಯ ಪ್ರಯೋಗಗಳ ಪ್ರಯೋಗ ಶಾಲೆಯಾಗಿದೆ. ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರ ವಿನಯ್ ಹಾಗೂ ಪುತ್ರಿ ಸಹನಾ ಅವರು ತಂದೆಯ ಕೃಷಿಗೆ ನೆರವಾಗಿದ್ದಾರೆ. ಬೇಸಿಗೆ ಕಾಲದಲ್ಲೂ ಭತ್ತ ಬೆಳೆಯುತ್ತಿರುವ ಇವರು, ಈ ಬಾರಿಯ ಅನಿಶ್ಚಿತತೆಯ ಮಳೆಗೆ ಹೆದರುತ್ತಿದ್ದಾರೆ. ಬೇಸಿಗೆಯಲ್ಲಿ ಕುಂಬಳ ಕಾಯಿ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

‘ಹಾಲಿನಿಂದ ಬರುವ ಆದಾಯದಿಂದ ಮನೆಯ ದಿನನಿತ್ಯದ ಖರ್ಚು ವೆಚ್ಚಗಳು ನೀಗುತ್ತಿವೆ’ ಎನ್ನುತ್ತಾರೆ ಎಂ. ಶಿವಪ್ಪ.

‘ಬದಲಾದ ಹವಾಮಾನ ವೈಪರೀತ್ಯದಿಂದಾಗಿ ಕೈಗೆ ಬಂದ ತುತ್ತುಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಕೊನೆಗಳು ಹಣ್ಣಾಗಿ ಉದುರುತ್ತಿದ್ದು, ಭತ್ತ ಕಮಟಿ ಹೋಗುವಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ಮಲೆನಾಡಿನಲ್ಲಿ ಭತ್ತದ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ಜೊತೆಗೆ ಕೃಷಿಅವಲಂಬಿತ ಹೈನುಗಾರಿಕೆಗೆಬೇಕಾದ ಮೇವುಸಿಗದಂತ ಸ್ಥಿತಿ ನಿರ್ಮಾಣವಾಗುವಸಾಧ್ಯತೆ ಹೆಚ್ಚಿದೆ’ ಎನ್ನುತ್ತಾರೆ ಶಿವಪ್ಪ.

ಬಹು ಬೆಳೆಗಳ ಮೂಲಕ ಸಮಗ್ರ ಕೃಷಿಯಿಂದ ಕಾಲ ಕಾಲಕ್ಕೆ ಒಂದಿಷ್ಟುಆದಾಯ ಸಿಗುವುದಲ್ಲದೆ ಕೃಷಿಯಲ್ಲಿಖುಷಿ ಕಾಣುವ ಕಾಯಕ ಯೋಗಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT