ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರಗೆ ‘ಹೆಸರು’ ತಂದುಕೊಟ್ಟ ವರುಣ!

Published 11 ನವೆಂಬರ್ 2023, 6:10 IST
Last Updated 11 ನವೆಂಬರ್ 2023, 6:10 IST
ಅಕ್ಷರ ಗಾತ್ರ

ಮೈಸೂರು: ಬಿ.ವೈ.ವಿಜಯೇಂದ್ರ ಅವರು 2018ರ ಚುನಾವಣೆಯಲ್ಲಿ ಇಲ್ಲಿನ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಆದರೆ, ಅವರಿಗೆ ರಾಜ್ಯಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟಿದ್ದು ಇದೇ ಕ್ಷೇತ್ರ. ಆಗ ಸ್ಪರ್ಧಿಸುವ ಉದ್ದೇಶದಿಂದ ಸಂಚರಿಸಿದಾಗ, ಕಾರ್ಯಕರ್ತರಿಂದ ಸಿಕ್ಕ ಬೆಂಬಲವು ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗಾದಿಯವರೆಗೆ ತಂದು ನಿಲ್ಲಿಸಿದೆ.

ಅವರು ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಪುತ್ರ ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಅದಕ್ಕಾಗಿ ಸಂಘಟನೆಯಲ್ಲೂ ತೊಡಗಿದ್ದರು. ಪ್ರವಾಸವನ್ನೂ ಕೈಗೊಂಡಿದ್ದರು. ಕಾರ್ಯಕರ್ತರನ್ನೂ ಭೇಟಿಯಾಗಿದ್ದರು. ಆಗ, ತಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸಿಕ್ಕ ಅಭೂತಪೂರ್ವ ಬೆಂಬಲ ಅವರಿಗೆ ಹುಮ್ಮಸ್ಸು ತುಂಬಿತ್ತು. ಕ್ಷೇತ್ರದಲ್ಲಿ ಹೊಸ ಅಲೆಯೊಂದು ಎದ್ದಿತ್ತು. ಸಂಚಲನವೂ ಉಂಟಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಆ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ. ಆದರೆ, ಅವರು ವರುಣದ ಜನರ ಒಡನಾಟ–ಸಂಪರ್ಕದಲ್ಲೇ ಇದ್ದರು. ಇದು ಅವರ ರಾಜಕೀಯ ಜೀವನದ ಏಳಿಗೆಗೆ ಚಿಮ್ಮುಹಲಗೆಯಾಯಿತು.

ಹೆಸರು ಕೇಳಿಬಂದಿತ್ತು: 2023ರ ಚುನಾವಣೆಯಲ್ಲಿ, ಅವರು ವರುಣದಿಂದ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ದೊಡ್ಡದಾಗಿ ಹಬ್ಬಿತ್ತು. ಅವರು ಇಲ್ಲಿಗೆ ಬಂದು ಬೆಂಬಲಿಗರು ಹಾಗೂ ಮುಖಂಡರ ಸಭೆಯನ್ನೂ ನಡೆಸಿದ್ದರು. ಚುನಾವಣೆಗೆ ವೇದಿಕೆ ಸಜ್ಜುಗೊಳಿಸುತ್ತಿದ್ದರು. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದರಿಂದ ಅಲ್ಲಿಗೆ ಹೋದರು; ಗೆದ್ದರು.

ಅವರ ಈ ರಾಜಕಾರಣದ ಯಾತ್ರೆಯಲ್ಲಿನ ಯಶಸ್ಸಿಗೆ ಬಹಳಷ್ಟು ಸಹಕಾರಿಯಾದುದು ವರುಣ ಕ್ಷೇತ್ರದಲ್ಲಿ ದೊರೆತ ಬೆಂಬಲ. ಅದನ್ನು ಅವರು ಹಲವು ಬಾರಿ ಬಹಿರಂಗ ಕಾರ್ಯಕ್ರಮಗಳಲ್ಲೇ ಹೇಳಿಕೊಂಡಿರುವುದೂ ಉಂಟು. ಈಗ, ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವುದು ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಅಭಿಮಾನಿಗಳಲ್ಲಿ ಸಂತಸ ತಂದಿದೆ.

‘ನಾನು ರಾಜಕಾರಣಕ್ಕೆ ಬರಬೇಕು ಎಂದುಕೊಂಡಿರಲಿಲ್ಲ. 2018ರ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಆಗಲಿಲ್ಲ. ಆದರೆ, ಆಗ ನಡೆದ ಬೆಳವಣಿಗೆಗಳಿಂದಾಗಿ ಇಡೀ ರಾಜ್ಯಕ್ಕೆ ನನ್ನ ಪರಿಚಯವಾಯಿತು. ಹಳೇ ಮೈಸೂರು ಜನರು ಹಾಗೂ ವರುಣದ ಕಾರ್ಯಕರ್ತರನ್ನು ಮರೆಯಲಾಗದು. ಯಾವ ಸ್ಥಾನಮಾನ ಇಲ್ಲದಿದ್ದರೂ ಕೂಡ ಜನರು ಪ್ರೀತಿ–ಗೌರವ ನೀಡಿದರು’ ಎಂದು ಆಗಾಗ ಸ್ಮರಿಸುತ್ತಾರೆ.

2022ರ ಡಿ.11ರಂದು ನಗರದ ಸುತ್ತೂರು ಶಾಖಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಬಸವ ಬಳಗಗಳ ಒಕ್ಕೂಟದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಬೆಳ್ಳಿ ಬೆಳಗು’ ಕಾರ್ಯಕ್ರಮದ ಅಂಗವಾಗಿ ನಡೆದ  ‘ಯುವಸಂಕಲ್ಪ’ ಸಮಾರಂಭದಲ್ಲೂ ಈ ಮಾತುಗಳನ್ನು ಅವರು ಹೇಳಿದ್ದರು.

ಮೈಸೂರು ಭಾಗದಲ್ಲೂ ಸಂಚಲನ

ಅವರ ನೇಮಕಾತಿಯು ಮೈಸೂರು ಭಾಗದ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ. ಸಂಘಟನೆಗೆ ಶಕ್ತಿ ತುಂಬಲಿದೆ ಎನ್ನುವುದು ಆ ಪಕ್ಷದವರ ಲೆಕ್ಕಾಚಾರ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ಹಾಗೂ ದೊರೆತಿರುವ ಅಧ್ಯಕ್ಷ ಪಟ್ಟವು ಲೋಕಸಭಾ ಚುನಾವಣೆಯಲ್ಲಿ ಜಾತಿ ಸಮೀಕರಣದ ಮೂಲಕ ಲಾಭ ಮಾಡಿಕೊಡಬಹುದೆಂಬ ನಿರೀಕ್ಷೆಯೂ ಇದೆ. ‘ತಮಗೆ ರಾಜಕೀಯವಾಗಿ ಬಲ ಬರಬಹುದು’ ಎಂಬುದು ಯಡಿಯೂರಪ್ಪ ಬೆಂಬಲಿಗರ ಆಶಾವಾದ.

‘ಜಿಲ್ಲೆಯ ಸಂಘಟನೆಯಲ್ಲೂ ಬಹಳಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

‘ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರು ಒಂದು ಸಮುದಾಯವನ್ನಷ್ಟೆ ಪ್ರತಿನಿಧಿಸುತ್ತಿಲ್ಲ. ಲಿಂಗಾಯತ ಸಮಾಜ ದೊಡ್ಡ ಪ್ರಮಾಣದಲ್ಲಿ ಅವರ ಹಿಂದೆ ನಿಲ್ಲುತ್ತಾ ಬಂದಿದೆ. ಇತರ ಸಮಾಜದವರೂ ಬೆಂಬಲಿಸುತ್ತಲೇ ಬಂದಿದ್ದಾರೆ. ಅವರು ವರುಣ ಸೇರಿದಂತೆ ಈ ಭಾಗದಲ್ಲಿನ ಸಂಪರ್ಕವನ್ನು ಬಿಟ್ಟಿರಲಿಲ್ಲ. ಅದು ಅವರ ಕೈಹಿಡಿದಿದೆ. ವಿಜಯೇಂದ್ರ ನೇಮಕವು, ಸಮಾಜಕ್ಕೆ ನಾಯಕತ್ವದ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ನಾಲ್ವಡಿ ಕರ್ನಾಟಕದಲ್ಲಿ (ಹಳೆ ಮೈಸೂರು) ಹೊಸ ಅಲೆ ಸೃಷ್ಟಿ ಯಾಗಲಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸದ ಬಲ ಹೆಚ್ಚಿಸಿ, ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ’ ಎನ್ನುತ್ತಾರೆ ಬಿಜೆಪಿ ಮುಖಂಡ ರಘು ಆರ್‌. ಕೌಟಿಲ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT