ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗೆ ಸಾಗರ: ನೀರಿಗೆ ಬರ- ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆ

ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆ ; ಆತಂಕದಲ್ಲಿ ಅನ್ನದಾತರು
Published 22 ಮೇ 2023, 6:22 IST
Last Updated 22 ಮೇ 2023, 6:22 IST
ಅಕ್ಷರ ಗಾತ್ರ

ಸಾಗರ: ಕೆಲವೇ ತಿಂಗಳ ಹಿಂದೆ ಸಾಗರ ನಗರ ಪ್ರವೇಶಿಸುತ್ತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿನ ಪಾರಂಪರಿಕ ವೃಕ್ಷಗಳು ನಿಮ್ಮನ್ನು ಸ್ವಾಗತಿಸುತ್ತಿದ್ದವು. ಹೆದ್ದಾರಿ ವಿಸ್ತರಣೆಗಾಗಿ ರಸ್ತೆಯ ಇಕ್ಕೆಲಗಳಲ್ಲಿನ 488 ಮರಗಳನ್ನು ಕಡಿದ ಪರಿಣಾಮ ಸಾಗರದ ಚಹರೆ ಈಗ ಬದಲಾಗಿದೆ. 

ಈ ಬದಲಾವಣೆಯ ಮಲೆನಾಡು ಸಾಗರವನ್ನು ಬಯಲುಸೀಮೆಯನ್ನಾಗಿಸಿದೆ. ಇದರಿಂದ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಹಿಂದಿನ ಯಾವ ವರ್ಷಗಳಲ್ಲೂ ಕಾಣದಷ್ಟು ಬೇಸಿಗೆಯ ಧಗೆ ಜನರನ್ನು ಹೈರಾಣಾಗಿಸಿದೆ. ಮಲೆನಾಡಿದ ಹೃದಯ ಭಾಗದ ‘ಹಚ್ಚ ಹಸಿರಿನ ಕೇಂದ್ರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ತಾಲ್ಲೂಕು ತನ್ನ ಗುರುತನ್ನು ಕಳೆದುಕೊಳ್ಳುತ್ತಿದೆ.

ತಾಲ್ಲೂಕಿನಲ್ಲಿ ಹಿಂದೆಂದಿಗಿಂತ ಇರ‌ದ ನೀರಿನ ಸಮಸ್ಯೆ ಹೆಚ್ಚಿದೆ. ನಗರ ಪ್ರದೇಶದ ಜನರಿಗೆ ಈ ಹಿಂದೆ ವರದಾ ನದಿಯಿಂದ ಬಸವನಹೊಳೆ ಡ್ಯಾಂನಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಊರು ಬೆಳೆದಂತೆ ಈ ಯೋಜನೆಯಿಂದ ಪೂರೈಕೆಯಾಗುವ ನೀರು ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶರಾವತಿ ಹಿನ್ನೀರಿನಿಂದ ನಗರಕ್ಕೆ ನೀರು ತರುವ ಯೋಜನೆ ರೂಪಿಸಲಾಯಿತು. ಈ ಯೋಜನೆಯ ಪ್ರಕಾರ ವರ್ಷದ 365 ದಿನಗಳ ಕಾಲ ದಿನದ 24 ತಾಸು ನೀರು ಪೂರೈಸುವ ಭರವಸೆ ದೊರಕಿತ್ತು.

ಆದರೆ ಯೋಜನೆ ಅನುಷ್ಠಾನವಾದ ದಿನದಿಂದಲೂ ತಾಂತ್ರಿಕ ದೋಷಗಳಿಂದಾಗಿ ನಗರದ ಜನರಿಗೆ ನೀರು ಸಿಗುವ ಮಾತು ಮರೀಚಿಕೆಯಾಗಿದೆ.

ಶರಾವತಿ ಹಿನ್ನೀರಿನಿಂದ ನಗರಕ್ಕೆ ನೀರು ಪೂರೈಸಲು ಕಾರ್ಗಲ್ ಸಮೀಪದ ಅಂಬುಗಳಲೆಯಲ್ಲಿ ಜಾಕ್‌ವೆಲ್ ನಿರ್ಮಿಸಲಾಗಿದೆ. ಅಲ್ಲಿ ಪದೇ ಪದೇ ಯಂತ್ರಗಳು ಕೈಕೊಟ್ಟು ನೀರು ಪೂರೈಕೆಗೆ ತೊಂದರೆಯಾಗುವುದು ಸಾಮಾನ್ಯ ಎನ್ನುವಂತಾಗಿದೆ. ನಗರಸಭೆಗೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗಿಲ್ಲ.

15 ದಿನಗಳ ಹಿಂದೆ ಗುಡುಗು, ಸಿಡಿಲು ಸಮೇತ ಮಳೆಯಾದಾಗ ಅಂಬುಗಳಲೆಯ ಜಾಕ್‌ವೆಲ್‌ನಲ್ಲಿನ ಯಂತ್ರ ಕೈಕೊಟ್ಟಿದೆ. ವಿದ್ಯುತ್ ವೋಲ್ಟೇಜ್‌ನಲ್ಲಿ ವ್ಯತ್ಯಯ ಕಂಡುಬಂದರೆ ಅದನ್ನು ತಾಳಿಕೊಳ್ಳುವ ಸಾಮರ್ಥ್ಯ ಇಲ್ಲಿನ ಯಂತ್ರಗಳಿಗೆ ಇಲ್ಲವಾಗಿದೆ. ಈ ಕಾರಣಕ್ಕೆ ಆಗಾಗ ತಾಂತ್ರಿಕ ತೊಡಕಿನ ನೆಪ ಹೇಳಿ ನೀರು ಪೂರೈಕೆ ಬಂದ್ ಆಗುತ್ತಲೆ ಇದೆ ಎಂಬುದು ನಿವಾಸಿಗಳ ದೂರು.

ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ, ಅಣಲೆಕೊಪ್ಪ, ಕಂಬಳಿಕೊಪ್ಪ, ಸೂರನಗದ್ದೆ, ಶಿರವಾಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿನ ಕೆರೆಗಳಲ್ಲಿ ನೀರು ಸಮೃದ್ಧವಾಗಿದ್ದಾಗ ನಗರವ್ಯಾಪ್ತಿಯ ತೆರೆದ ಬಾವಿಗಳಲ್ಲಿ ಬೇಸಿಗೆಗಳಲ್ಲೂ ನೀರು ಇರುತ್ತಿತ್ತು. ಆದರೆ ಈ ಕೆರೆಗಳನ್ನು ಜೀವಂತವಾಗಿ ಇಟ್ಟುಕೊಳ್ಳುವಲ್ಲಿ ಆಡಳಿತ ತೋರಿರುವ ನಿರ್ಲಕ್ಷ್ಯದಿಂದಾಗಿ ತೆರೆದ ಬಾವಿಗಳೂ ಬತ್ತಿ ಹೋಗುತ್ತಿವೆ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ.

ಹಿನ್ನೀರಿನಿಂದ ನಗರಕ್ಕೆ ನೀರು ಪೂರೈಸುವ ಮಾರ್ಗ ಮಧ್ಯದಲ್ಲಿನ ಗ್ರಾಮಗಳಿಗೂ ಈ ಯೋಜನೆಯ ಲಾಭ ದೊರಕಬೇಕು ಎಂಬ ಪ್ರಸ್ತಾಪ ಕೇವಲ ದಾಖಲೆಗಳಲ್ಲೇ ಉಳಿದಿದೆ. ಹೀಗಾಗಿ ಈ ಮಾರ್ಗ ಮಧ್ಯದ ಗ್ರಾಮಗಳಲ್ಲದೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ನೀರಿಗೆ ಅಭಾವ ಎನ್ನುವ ಕಾರಣಕ್ಕೆ ಹೆಚ್ಚಿನ ಭತ್ತದ ಬೆಳೆಗಾರರು ಬೇಸಿಗೆಯಲ್ಲಿ ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಈ ಅವಧಿಯಲ್ಲಿ ಭತ್ತ ಬೆಳೆಯುವ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ ಎಂದು ಕೃಷಿಕ ಕೆ.ಎಚ್. ರಮೇಶ್ ಹೇಳಿದರು.

ಅಡಿಕೆ, ತೆಂಗು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರ ಪರಿಸ್ಥಿತಿಯೂ ಹೈರಾಣಾಗಿದೆ. ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಬಲರಾಗಿರುವವರು ಬೆಳೆ ಉಳಿಸಿಕೊಳ್ಳುವ ಸಲುವಾಗಿ ಕೊಳವೆಬಾವಿ ನಿರ್ಮಿಸಿದ್ದರೂ ಈ ವರ್ಷದ ಬೇಸಿಗೆಯಲ್ಲಿ ಅವೂ ಕೈಕೊಡುತ್ತಿವೆ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ಬೆಳೆಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ ಎಂದು ಅವರು ಅಳಲು ತೋಡಿಕೊಂಡರು.

‘ನೀರು ಇಡೀ ಸಮುದಾಯದ ಸ್ವತ್ತು. ಹಿನ್ನೀರಿನಿಂದ ನೀರು ಬರುತ್ತದೆ ಎಂದು ನೀರು ಲಭ್ಯವಿದ್ದಾಗ ಮನೆಯ ಕಾಂಪೌಂಡ್, ಎದುರಿನ ರಸ್ತೆ ತೊಳೆಯುವವರೂ ನಮ್ಮಲ್ಲಿದ್ದಾರೆ. ಕೊಳವೆಬಾವಿ ಎನ್ನುವುದು ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುವ ಆಪತ್‌ಧನದ ರೀತಿಯಲ್ಲಿ ಬಳಸಬೇಕು. ಆದರೆ ನೀರು ಲಭ್ಯವಿದ್ದಾಗ ಯಥೇಚ್ಛವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಜಲ ಸಾಕ್ಷರತೆ ಇಲ್ಲದಿರುವುದೇ ಜಲಕ್ಷಾಮಕ್ಕೆ ಕಾರಣ’ ಎನ್ನುತ್ತಾರೆ ಅಖಿಲೇಶ್ ಚಿಪ್ಪಳಿ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹತ್ತು ಹಲವು ವಿಷಯಗಳ ಕುರಿತು ವಿವಿಧ ಪಕ್ಷಗಳ ನಡುವೆ ಬಿರುಸಿನ ಚರ್ಚೆ, ವಾದ, ವಿವಾದ , ಆರೋಪ, ಪ್ರತ್ಯಾರೋಪ ಕೇಳಿಬಂದಿತ್ತು. ಆದರೆ ನಮ್ಮ ಬದುಕಿನ ಅಸ್ತಿತ್ವದ ಪ್ರಶ್ನೆಯಾದ ನೀರಿನ ಮೂಲವನ್ನು ಉಳಿಸಿ ಬೆಳೆಸುವ ವಿಷಯ ಯಾವ ರಾಜಕಾರಣಿಗಳಿಗೂ ಮುಖ್ಯವಾಗಿಲ್ಲ ಎಂದು ಬೇಸರಿಸುತ್ತಾರೆ ರಮೇಶ್‌.

ಸಾಗರ ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಕಾರ್ಗಲ್ ಸಮೀಪದ ಅಂಬುಗಳಲೆಯಲ್ಲಿನ ಜಾಕ್‌ವೆಲ್
ಸಾಗರ ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಕಾರ್ಗಲ್ ಸಮೀಪದ ಅಂಬುಗಳಲೆಯಲ್ಲಿನ ಜಾಕ್‌ವೆಲ್
ಬೇಸಿಗೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಕೊಳವೆಬಾವಿಗಳೂ ಕೈಕೊಡುತ್ತಿರುವುದರಿಂದ ತೋಟದಲ್ಲಿನ ಅಡಿಕೆ ಮರಗಳು ಒಣಗುತ್ತಿವೆ.
ಕೆ.ಎಚ್. ರಮೇಶ್, ಕೃಷಿಕ- ಮರಸ ಗ್ರಾಮ
ಸ್ಥಳೀಯವಾಗಿರುವ ಜಲ ಸಂಪನ್ಮೂಲಗಳ ಮೂಲಕ ನೀರನ್ನು ಹಿಡಿದಿಡುವ ನಮ್ಮ ಹಿರಿಯರ ಕಾಯಕವನ್ನು ನಾವು ಮರೆತಿದ್ದೇವೆ. ಕೆರೆಕಟ್ಟೆಗಳನ್ನು ಜೀವಂತವಾಗಿಟ್ಟರೆ ಮಾತ್ರ ಜಲಮೂಲಗಳು ಬತ್ತುವುದಿಲ್ಲ. ಪ್ರಕೃತಿಗೆ ಪ್ರತಿಯಾಗಿ ಏನನ್ನೂ ನೀಡದ ಮನೋಭಾವದಿಂದ ಜಲಕ್ಷಾಮ ಸೃಷ್ಟಿಯಾಗಿದೆ.
ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ
ಅಂಬುಗಳಲೆಯಲ್ಲಿನ ಜಾಕ್‌ವೆಲ್‌ನಲ್ಲಿನ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದರಿಂದ ನಗರವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ತೊಂದರೆಯಾಗಿದೆ. ಕೂಡಲೇ ಅದನ್ನು ಸರಿಪಡಿಸಲಾಗುವುದು. ಅಗತ್ಯವಿದ್ದಲ್ಲಿ ಟ್ಯಾಂಕರ್ ನೀರು ಪೂರೈಸಲಾಗುವುದು.
ಚಂದ್ರಪ್ಪ, ಪೌರಾಯುಕ್ತ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT