ಶಿವಮೊಗ್ಗ: ರಂಗ ಕಲಾವಿದರ ಅಗತ್ಯತೆ ಸ್ವಾತಂತ್ರ್ಯ ದಿನಾಚರಣೆ, ಗಣಪತಿ ಹಬ್ಬ, ದಸರಾ ಮೆರವಣಿಗೆಯಲ್ಲಿ ಮಾತ್ರ ಬೇಕು. ಅದನ್ನು ಹೊರತು ಪಡಿಸಿ ಕಲಾವಿದರನ್ನು ಬದಿಗೆ ಸರಿಸಲಾಗಿದೆ ಎಂದು ರಂಗಸಮಾಜ ಸದಸ್ಯ, ಬೆಂಗಳೂರಿನ ಡಾ. ಟಿ.ಆರ್.ಗುರುಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸೋಮವಾರ 'ವಿಶ್ವರಂಗಭೂಮಿ ರಂಗೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಂಗ ಕಲಾವಿದರು ಮಕ್ಕಳಿಗೆ ನಾಟಕ ಕಲಿಸಲು ಶಾಲೆಗೆ ತೆರಳಿದರೆ, ಅಲ್ಲಿಯ ಅಧ್ಯಾಪಕರ ನಡುವೆಯೇ ಭಿನ್ನಮತ ಉದ್ಭವಿಸುತ್ತದೆ ಎಂದರು.
ಯುಗ ಉರುಳಿದಂತೆ, ಜೀವನ ಶೈಲಿ ಕೂಡ ಬದಲಾಗಿದೆ. ಕಿರುತೆರೆ ಹಾಗೂ ಮೊಬೈಲ್ ಪೋನ್ ಗಳು ಎಲ್ಲರ ಮನಸ್ಸನ್ನು ಹಿಡಿದಿಟ್ಟುಕೊಂಡಿವೆ. ಈ ವಾತಾವರಣ ಸೃಷ್ಟಿ ಆಗಿರುವುದರಿಂದ ನಾಟಕ ಮಾಡುವುದು ಹಾಗೂ ಅವರನ್ನು ನಾಟಕದ ಕಡೆ ಸೆಳೆಯುವುದು ಕಷ್ಟವಾಗಿದೆ ಎಂದರು.
ಕಲಾವಿದರಿಗೂ ಹಲವು ಸವಾಲುಗಳಿವೆ. ಪಟ್ಟಣಕ್ಕೆ ಮಾತ್ರ ಸೀಮಿತವಾಗಿರುವ ರಂಗ ಭೂಮಿಯನ್ನು ಹಳ್ಳಿಗಳಿಗೆ ತಲುಪಿಸುವ ಅನಿವಾರ್ಯತೆ ಇದೆ. ಪಟ್ಟಣದಲ್ಲಿ ಮಾಡುವ ನಾಟಕದ ತಾಲೀಮು ಹಳ್ಳಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದು ಮುಂದಿನ ದಿನದಲ್ಲಾದರೂ ಬದಲಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕೋಣ ಎಂದರು.
‘ನಮ್ಮ ಮನಸ್ಸಿನ ಮಧ್ಯ ಇರುವ ಗೋಡೆ ಕೆಡವುದೇ ಕಷ್ಟವಾಗಿದೆ. ಜಾತಿ, ಧರ್ಮ ಮೀರಿ ರಂಗಭೂಮಿ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತಲೇ ಇದೆ. ಕ್ರಿಯಾಶೀಲತೆ ಮೈಗೂಡಿಸಿಕೊಂಡು ಬೆಳೆಯುತ್ತಲೇ ಇದೆ. ಆದರೂ ಕೂಡ ವಿಶ್ವಮಾನವರಾಗಿದ್ದೇವ ಎಂದು ಹಿಂದೆ ತಿರುಗಿ ನೋಡಿದರೆ, ಕೆಲವು ಬಂಧಗಳಿಂದ ಇನ್ನೂ ಮುಕ್ತರಾಗಿಲ್ಲ‘ ಎಂದರು.
ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಮಾತನಾಡಿ, ಪ್ರತಿ ವರ್ಷ ಶಿವಮೊಗ್ಗ ರಂಗಾಯಣ ಉತ್ತಮವಾದ ನಾಟಕ ಪ್ರದರ್ಶನ ನಿಡುತ್ತಲೇ ಬಂದಿದ್ದು, ಕೋವಿಡ್ ನಿಂದ ಸ್ವಲ್ಪ ಪ್ರಮಾಣದಲ್ಲಿ ಸಮಸ್ಸೆ ಎದುರಿಸಿದ್ದರೂ ಕೂಡ ಎಲ್ಲೂ ವಿವಾದಕ್ಕೆ ಸಿಲುಕದೆ ನಾಟಕ ಪ್ರದರ್ಶನ ನೀಡಿದೆ ಎಂದರು.
ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಸುಳ್ಳನ್ನು ನಾಟಕ ಮಾಡುತ್ತೇವೆ ಎಂದು ಮುಂದಾಗಬಾರದು. ಅದು ಯಾವ ಸಂದರ್ಭದಲ್ಲಿಯೂ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ 'ಗೋಡೆ' ನಾಟಕ ಪ್ರದರ್ಶನ ಹಾಗೂ ರಂಗ ಸಂಗೀತ ಕಾರ್ಯಕ್ರಮ ಜರುಗಿದವು. ರಂಗಾಯಣದ ಆವರಣಲ್ಲಿ 'ಔಷಧಿ ವನ'ಕ್ಕೆ ಚಾಲನೆ ನೀಡಲಾಯಿತು.
ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ, ಪತ್ರಕರ್ತ ಹಾಲಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.