ಗುರುವಾರ , ಆಗಸ್ಟ್ 18, 2022
25 °C
ವಿಶ್ವ ಯೋಗ ದಿನಾಚರಣೆಯಲ್ಲಿ ಗೌರಿಗದ್ದೆಯ ವಿನಯ್ ಗುರೂಜಿ ಅಭಿಮತ

ಎಲ್ಲರನ್ನು ಜೋಡಿಸುವ ಭಾವವೇ ಯೋಗ: ವಿನಯ್ ಗುರೂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಯೋಗ ಎಂದರೆ ಎಲ್ಲರನ್ನೂ ಜೋಡಿಸುವಂತಹುದ್ದು. ದೇಹಕ್ಕೆ ಬಲ ಇದ್ದರೆ ಸಾಲದು, ಮನಸ್ಸಿಗೂ ಬಲ ಬೇಕು. ಯೋಗದಿಂದ ಮನಸ್ಸಿಗೆ ಬಲ ಸಿಗುತ್ತದೆ’ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಯೋಗ ಶಿಕ್ಷಣ ಸಮಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಭಾರತಿ, ಕ್ರೀಡಾ ಭಾರತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಯೋಗವನ್ನು ವಿಶ್ವವ್ಯಾಪಿ ಮಾಡುವ ಚಿಂತನೆಯಿಂದ ಯೋಗ ದಿನ ಆಚರಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶದ ಜನರನ್ನು ಒಗ್ಗೂಡಿಸುವ ಪ್ರಯತ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿ ದೇಶಕ್ಕೆ ವಿಶ್ವ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ’ ಎಂದರು.

‘ದೇಹದಲ್ಲಿ ಎಲ್ಲರನ್ನೂ ಮೀರಿ ನಿಲ್ಲುವುದು ಆರೋಗ್ಯ. ಕಫ, ವಾತ, ಪಿತ್ತ ದೇಹದ ಪ್ರಮುಖ ಲಕ್ಷಣಗಳಾಗಿದ್ದು, ಮೂರನ್ನೂ ಸರಿಯಾದ ದಾರಿಗೆ ತರಲು ಯೋಗ ಸಹಕಾರಿ. ದೇಹದಲ್ಲಿರುವ ಅಶುದ್ಧತೆ ಯೋಗವು ಹೊರಕ್ಕೆ ಹಾಕಿ ಶುದ್ಧ ಗಾಳಿ ಮೆದುಳಿಗೆ ಒದಗಿಸುತ್ತದೆ. ಯೋಗಾಗ್ನಿಯು ದೇಹದ ಕಲ್ಮಶ ನಾಶ ಮಾಡುತ್ತದೆ. ಆಲೋಚನೆಗಳು ಸರಿ ಇಲ್ಲದಾಗ ಕಾಯಿಲೆ ಬರುತ್ತದೆ. ದೇಹದ ಅಡುಗೆ ಮನೆ ಹೊಟ್ಟೆಯಾದರೆ, ಮಿದುಳು ಆಲೋಚನಾ ಭಾಗವಾಗಿದೆ. ಅದನ್ನು ಸುಸ್ಥಿತಿಯಲ್ಲಿಡಲು ಪ್ರಾಣಾಯಾಮ ಅಗತ್ಯ’ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ, ‘ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ. ಜಾತಿ, ಧರ್ಮ ಮೀರಿದ್ದು. ಪ್ರಪಂಚವನ್ನು ಒಗ್ಗೂಡಿಸಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ರಾಷ್ಟ್ರಗಳು ಕೂಡ ಯೋಗದಿಂದ ಆಗುವ ಲಾಭ ತಿಳಿದುಕೊಂಡು ತಮ್ಮ ದೇಶದಲ್ಲಿ ಯೋಗ ಕಡ್ಡಾಯ ಮಾಡಿದ್ದಾರೆ’ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ವಿಶ್ವ ಯೋಗ ದಿನ ಆಚರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುತ್ತೇನೆ. ಪ್ರಾಚೀನ ಇತಿಹಾಸವನ್ನು ವಿಶ್ವಕ್ಕೆ ಜೋಡಿಸಿದ ಕೀರ್ತಿ ಮೋದಿ ಅವರದ್ದು. ದಕ್ಷಿಣ ಭಾರತದಲ್ಲೇ ಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಕೇಂದ್ರ ಸರ್ಕಾರ ಘೋಷಿಸುವ ಮೂಲಕ ಇಲ್ಲಿನ ಸಸ್ಯ ಪ್ರಭೇದ ಮತ್ತು ಅಮೂಲ್ಯ ಜೀವರಾಶಿಗಳ ಉಳಿವಿಗೆ ಕಾರಣವಾಗಿದೆ’ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಭ.ಮ. ಶ್ರೀಕಂಠ, ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಯೋಗಗುರು ಭಾ.ಸು. ಅರವಿಂದ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಸಂಜಯ್ ಕುಮಾರ್ ಎಸ್.ವೈ., ಕ್ರೀಡಾಧಿಕಾರಿ ಮಂಜುನಾಥ್, ರಂಗನಾಥ್, ಕೆ.ಇ. ಕಾಂತೇಶ್, ಜಯಲಕ್ಷ್ಮಿ ಈಶ್ವರಪ್ಪ, ಮೇಯರ್ ಸುನಿತಾ ಅಣ್ಣಪ್ಪ, ಎಸ್. ದತ್ತಾತ್ರಿ, ಡಾ.ಎನ್.ಎಲ್. ನಾಯಕ್, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವಾಸ್, ವಿಶ್ವನಾಥ್, ಸಂತೋಷ್ ಬಳ್ಳೆಕೆರೆ ಹಾಜರಿದ್ದರು.

‘ವಿಶ್ವವೇ ಇಂದು ಯೋಗ ಮಾಡುತ್ತಿದೆ’

ಶಿವಮೊಗ್ಗ: ಜಾತಿ, ವರ್ಗ, ಧರ್ಮ, ದೇಶಗಳಾಚೆ ಬೆಳೆದಿರುವ ನಮ್ಮ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಇಡೀ ವಿಶ್ವವನ್ನೇ ಒಂದು ಮಾಡುತ್ತಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಜಿಲ್ಲಾಡಳಿತದಿಂದ ಮಂಗಳವಾರ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.

‘ಯೋಗಾಭ್ಯಾಸದಿಂದ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನು ಒಂದುಗೂಡಿಸುತ್ತಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಯೋಗ ನಮ್ಮ ದೇಶದ ಅತ್ಯಂತ ಪ್ರಾಚೀನ ಶಾಸ್ತ್ರ. ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುವ ಮಹಾನ್ ವಿದ್ಯೆ. ಇಂತಹ ಯೋಗ ದಿನಾಚರಣೆಯನ್ನು ಸರ್ಕಾರದಿಂದ ಆಯೋಜಿಸುತ್ತಿರುವುದು ವಿಶೇಷ. ಆಯುರ್ವೇದ ಕೂಡ ವಿಶ್ವದ ಮೊಟ್ಟ ಮೊದಲ ವೈದ್ಯಕೀಯ ಕ್ಷೇತ್ರ ಎಂದರು.

 ಈಶ್ವರೀಯ ಸಂಸ್ಥೆಯ ಮುಖ್ಯಸ್ಥೆ ಅನುಸೂಯಕ್ಕನವರು ಧ್ಯಾನದ ಮಹತ್ವ ತಿಳಿಸಿ, ಧ್ಯಾನ ಮಾಡಿಸಿದರು.
ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿ.ಪಂ ಮಾಜಿ ಸದಸ್ಯ ಕೆ.ಇ ಕಾಂತೇಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್.ದೊಡ್ಮನಿ ಹಾಜರಿದ್ದರು.

ಪಾರಂಪರಿಕ ತಾಣಗಳಲ್ಲಿ ಯೋಗ ದಿನ

ಶಿವಮೊಗ್ಗ: ಜಿಲ್ಲೆಯ ಮೂರು ಪಾರಂಪರಿತ ತಾಣಗಳಾದ ಸಾಗರ ತಾಲ್ಲೂಕಿನ ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ ಆವರಣ, ಭದ್ರಾವತಿಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣ ಮತ್ತು ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಯಿತು.

ಇಕ್ಕೇರಿಯ ಯೋಗ ದಿನಾಚರಣೆಯನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ‘ಯೋಗಾಭ್ಯಾಸದ ಪ್ರಾಮುಖ್ಯತೆಯನ್ನು ಎಲ್ಲರೂ ತಿಳಿದುಕೊಂಡು ಪ್ರತಿ ಮನೆ ಮನೆಗಳಲ್ಲಿ ಯೋಗಾಭ್ಯಾಸ ಮಾಡಬೇಕು’ ಎಂದರು.

ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿನ ಯೋಗ ದಿನಾಚರಣೆಯನ್ನು ಪ್ರಭಾರ ತಹಶೀಲ್ದಾರ್ ಮಂಜುಳ ಭಜಂತ್ರಿ ಉದ್ಘಾಟಿಸಿ, ‘ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಅವಶ್ಯಕ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು