ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಮಲೆನಾಡು ಸೀಮೆಯ ಮಾದರಿ ಶಾಲೆ

Last Updated 23 ನವೆಂಬರ್ 2016, 7:42 IST
ಅಕ್ಷರ ಗಾತ್ರ

ಸೊರಬ:  ಅರೆ ಮಲೆನಾಡು ಹಾಗೂ ಬಯಲು ಸೀಮೆಯ ವಾತಾವರಣದ, ತಾಲ್ಲೂಕಿನ ಆನವಟ್ಟಿ ಸರ್ಕಾರಿ ಪ್ರೌಢಶಾಲೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಶಿಕ್ಷಕರ ಕಾಳಜಿಯಿಂದ ಮಾದರಿ ಶಾಲೆಯಾಗಿ ರೂಪುಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

1951ರಲ್ಲಿ ಸ್ಥಾಪನೆಗೊಂಡ ಶಾಲೆಯಲ್ಲಿ 1979–80ರ ಕಾಲಘಟ್ಟದಲ್ಲಿಯೇ 300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ 7 ವರ್ಷಗಳಿಂದ ಈಚೆಗೆ 1000ಕ್ಕೂ ಅಧಿಕ ಮಕ್ಕಳ ಸಂಖ್ಯೆಯಿದ್ದು, ಪ್ರಸ್ತುತ 8ನೇ ತರಗತಿಯಲ್ಲಿ 417, 9ನೇ ತರಗತಿಯಲ್ಲಿ 499 ಹಾಗೂ 10ನೇ ತರಗತಿಯಲ್ಲಿ  370 ಮಕ್ಕಳು ಸೇರಿದಂತೆ ಸುಮಾರು 1257 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಶಿಕ್ಷಕರಿಗೆ ಪಾಠ–ಪ್ರವಚನದ ಜೊತೆಗೆ ಯಾವ ವಿದ್ಯಾರ್ಥಿಗಳಿಗೂ ಕಲಿಕೆಯಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಿಸಿದೆ.

ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುವ ಕಾಲದಲ್ಲಿ ಜಿಲ್ಲೆಯಲ್ಲಿ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಶಾಲೆ ಇದಾಗಿದೆ. ಇಲ್ಲಿನ ಗುಣಮಟ್ಟಕ್ಕೆ ಶಿಕ್ಷಕರ ಬದ್ಧತೆಯೂ ಮುಖ್ಯ ಕಾರಣ. ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ. ದೂರವಿರುವ, ಆರ್ಥಿಕ ಹಾಗೂ ಸಾಮಾಜಿಕವಾಗಿ ತಾಲ್ಲೂಕಿನ ಅತಿ ಹಿಂದುಳಿದ ಹೋಬಳಿ ಎಂದು ಗುರುತಿಸಿಕೊಂಡಿರುವ ಆನವಟ್ಟಿಯ ಸರ್ಕಾರಿ ಪ್ರೌಢಶಾಲೆಯು ಕಳೆದ 6 ವರ್ಷಗಳಿಂದ ಶೇ 93ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದೆ.

ವ್ಯೆಯಕ್ತಿಕ ವಿಭಾಗದಲ್ಲಿ ಅರ್ಪಿತಾ.ಟಿ. ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದು, ಜೊತೆಗೆ 625ಕ್ಕೆ 615ಅಂಕ ಪಡೆದಿದ್ದಾಳೆ. ತೇಜಸ್ವಿನಿ 625ಕ್ಕೆ 613, ಶರತ್ 625ಕ್ಕೆ 612 ಅಂಕ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ವಿಜ್ಞಾನ ವಿಷಯದಲ್ಲಿ ಸುಮಯಾ ಭಾನು 100ಕ್ಕೆ 100, ಅಕ್ಷಯಕುಮಾರ್ 100ಕ್ಕೆ 100, ಚಿನ್ಮಯಿ ಬಿಚ್ಚುಗತ್ತಿ 100ಕ್ಕೆ 100,  ಸಮಾಜ ವಿಜ್ಞಾನ ವಿಷಯದಲ್ಲಿ ವಿನಾಯಕ ಬಿ. 100ಕ್ಕೆ 100, ಹಿಂದಿಯಲ್ಲಿ ಪೂರ್ಣಿಮಾ ಕೊಡ್ಲಿಕೊಪ್ಪ 100ಕ್ಕೆ 100, ಕಾವೇರಿ ಡಿ. 100ಕ್ಕೆ 100 ಹಾಗೂ ಕನ್ನಡದಲ್ಲಿ ಶರತ್ ಮತ್ತು ತೇಜಸ್ವಿನಿ 125ಕ್ಕೆ 124 ಅಂಕ ಪಡೆದಿದ್ದಾರೆ. ಸತತ 2 ವರ್ಷಗಳಿಂದ  ವ್ಯೆಯಕ್ತಿಕವಾಗಿ ತಲಾ 3 ವಿದ್ಯಾರ್ಥಿಗಳು ಶೇ 98.05ರಷ್ಟು ಫಲಿತಾಂಶ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ನಡೆಸುವ ಯಾವುದೇ ಪರೀಕ್ಷೆ ಇರಲಿ, ಇಲ್ಲಿನ ವಿದ್ಯಾರ್ಥಿಗಳು ಮೊದಲು ಆಯ್ಕೆಯಾಗುವ ಮೂಲಕ ಶಾಲೆಯ ಗಮನ ಸೆಳೆದಿದ್ದಾರೆ. ಇಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ತಮ್ಮ ಮಕ್ಕಳನ್ನು ಇದೇ ಶಾಲೆಯಲ್ಲಿ ಓದಿಸುತ್ತಿರುವುದು ವಿಶೇಷ. ಪೋಷಕರ ಸಂತಸಕ್ಕೆ ಇದೂ ಕಾರಣವಾಗಿದೆ.

ಶೈಕ್ಷಣಿಕ ಪ್ರಯತ್ನ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ವಾರಕ್ಕೊಮ್ಮೆ ಪೋಷಕರ ಸಭೆ ನಡೆಸಲಾಗುತ್ತಿದೆ. ಇಂಗ್ಲಿಷ್‌ನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಸುಲಭವಾಗಿ ಆ ವಿಷಯ ಕಲಿಸಲು ತರಬೇತಿ ನೀಡಲಾಗುತ್ತಿದೆ. ಗುಂಪು ಅಭ್ಯಾಸ ಮಾಡಿಸಿ, ಅತ್ಯುತ್ತಮ ಫಲಿತಾಂಶಕ್ಕೆ ಪ್ರಯತ್ನಿಸಲಾಗುತ್ತಿದೆ. ಪರೀಕ್ಷೆ ಸಮಯದಲ್ಲಿ ಪೂರ್ವಸಿದ್ಧತೆ ನಡೆಸಲು ಆರು  ಜನರ ಗುಂಪು ರಚಿಸಿ, ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಯಲು ಸಜ್ಜುಗೊಳಿಸಲಾಗುತ್ತದೆ.

ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲಿಯೇ ಪ್ರಥಮ: ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಒಂದೇ ಕಟ್ಟಡದಲ್ಲಿ ಒಟ್ಟು 2,450ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುವುದರಿಂದ ಪಿಯು ವಿಭಾಗವನ್ನು ಬೆಳಿಗ್ಗೆ 8ರಿಂದ 11.20ರವರೆಗೆ, 11.30 ನಂತರ ಪ್ರೌಢಶಾಲೆ ತರಗತಿಗಳನ್ನು ನಡೆಸಲಾಗುತ್ತಿದೆ. ಭಾನುವಾರವೂ ವಿಶೇಷ ತರಗತಿ ತೆಗೆದುಕೊಂಡು, ವಿದ್ಯಾರ್ಥಿಗಳನ್ನು ಪಳಗಿಸುತ್ತಿದ್ದಾರೆ. ಬೆಳಿಗ್ಗೆ 9ರಿಂದ 11ಗಂಟೆವರೆಗೆ ಎಸ್‌ಎಸ್ಎಲ್‌ಸಿ ಮಕ್ಕಳಿಗೆ ಇಂಗ್ಲಿಷ್ ವಿಷಯದಲ್ಲಿ ಹೆಚ್ಚುವರಿ ಬೋಧನೆ ನೀಡಲಾಗುತ್ತದೆ.

ಸಿಬ್ಬಂದಿ ಕೊರತೆ:  ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಇದೆ. ಒಟ್ಟು ಮಂಜೂರಾದ ಹುದ್ದೆಯಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಹುದ್ದೆ ಖಾಲಿಯಿದ್ದು, ಹೆಚ್ಚುವರಿಯಾಗಿ ವಿಜ್ಞಾನ ಹಾಗೂ ಕನ್ನಡಕ್ಕೆ ತಲಾ 4 ಶಿಕ್ಷಕರ ಅಗತ್ಯವಿದೆ. ಕಚೇರಿ ಕೆಲಸಕ್ಕೆ ಪ್ರಥಮ ದರ್ಜೆ ಸಹಾಯಕರು ಒಬ್ಬರೇ ಇದ್ದು, 1,257 ಮಕ್ಕಳ ದಾಖಲಾತಿ ಸೇರಿದಂತೆ ಇಲಾಖೆಯ ಪ್ರತಿಯೊಂದು ಮಾಹಿತಿ ಬಗ್ಗೆ ಕಡತ ಸಿದ್ಧಪಡಿಸಬೇಕಾಗಿದೆ.

ಶೌಚಾಲಯ ಸಮಸ್ಯೆ:  ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಸಮಸ್ಯೆ ಇದೆ. ಹೆಚ್ಚುವರಿಯಾಗಿ ಇನ್ನೂ 10 ಶೌಚಾಲಯಗಳ ಅವಶ್ಯಕತೆ ಇದೆ. ಸಾವಿರಾರು ಸಂಖ್ಯೆಯ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಶೌಚ ಮುಗಿಸುವಷ್ಟರಲ್ಲಿ 45 ನಿಮಿಷದ ತರಗತಿಯ ಅವಧಿ ಮುಗಿಯುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿ ಸೌಮ್ಯಾ.
ಕೊರತೆಗಳ ನಡುವೆಯೂ ಸಾಧನೆಯ ಮೂಲಕ ಛಾಪು ಮೂಡಿಸಿರುವ ಆನವಟ್ಟಿ ಶಾಲೆಯ ಭವಿಷ್ಯ ಇನ್ನಷ್ಟು ಹಸನಾಗುವ ಲಕ್ಷಣಗಳಂತೂ ಇವೆ. ಅದಕ್ಕಾಗಿ ಕೊರತೆಗಳನ್ನು ನೀಗುವ ಕೈಗಳು ಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT