ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲ ದೇವಸ್ಥಾನಕ್ಕೆ ಕಾಯಕಲ್ಪ

Last Updated 24 ಸೆಪ್ಟೆಂಬರ್ 2014, 10:18 IST
ಅಕ್ಷರ ಗಾತ್ರ

ರಾಮನಾಥಪುರ: ದೇವರು–ಧರ್ಮ, ಭಕ್ತಿ ಸತ್ಸಂಗ ಮುಂತಾದ ವಿಚಾರಗಳಿಂದ ಯುವಕರು ಸಾಮಾನ್ಯವಾಗಿ ಮಾರು ದೂರವೇ ನಿಲ್ಲುತ್ತಾರೆ. ಇದಕ್ಕೆ ಅಪವಾದವೆಂಬಂತೆ  ಕೊಣನೂರಿನ ಯುವಕ ಬಳಗ ಸುಮಾರು 16ನೇ ಶತಮಾನದಲ್ಲಿ ಪಾಳೇಗಾರರು  ನಿರ್ಮಿಸಿದ್ದ ಕೊಳಲು ಗೋಪಾಲಕೃಷ್ಣಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವು ಶ್ಲಾಘನೀಯ.

ಹಲವು ದಶಕಗಳಿಂದ ಯಾವುದೇ ಅಭಿವೃದ್ಧಿ,  ಪೂಜಾ ಕೈಂಕರ್ಯಗಳನ್ನು ಕಾಣದೆ ದುಸ್ಥಿತಿಯಲ್ಲಿದ್ದ ಕೊಳಲು ಗೋಪಾಲನ ಮಂದಿರ, ಈಗ ಮತ್ತೆ ಸುಣ್ಣ ಬಣ್ಣ ಬಳಿದುಕೊಂಡು ಹಳೆಯ ವೈಭವಕ್ಕೆ ಮರಳುತ್ತಿದೆ. ಇದೇ ತಿಂಗಳ 25ರಿಂದ ಸುಮಾರು 10 ದಿನಗಳ ಕಾಲ  ಶರನ್ನವರಾತ್ರಿ ಪ್ರಯುಕ್ತ ಹಲವು ಬಗೆಯ ಪೂಜಾ ವಿಧಾನಗಳನ್ನು ಏರ್ಪಡಿಸಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲು ಇಲ್ಲಿನ ಯುವಕ ಬಳಕ ಸಜ್ಜಾಗಿದೆ.

30 ವರ್ಷಗಳ ಹಿಂದೆ ಈ ದೇವಸ್ಥಾನದ ಅವರಣದಲ್ಲಿ ಜಾತ್ರೆ ಹಾಗೂ ಮಹಾರಥೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು ಎಂದು ಗ್ರಾಮದ ಹಿರಿಯರಾದ ತಿಮ್ಮೇಗೌಡ ಸ್ಮರಿಸುತ್ತಾರೆ. ಕಾಲ ಕಳೆದಂತೆ ಆ ವೈಭವ ಮರೆಯಾಯಿತು. ರಥೋತ್ಸವದ ವಿಚಾರವಾಗಿ ಇಲ್ಲಿನ ಯುವಕರಾದ ಸಂತೋಷ, ಶ್ರೀನಿವಾಸ್, ನಾಗೇಂದ್ರ, ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘2015ರ ಮಾರ್ಚ್‌ ತಿಂಗಳಲ್ಲಿ ರಥೋತ್ಸವ ಹಾಗೂ ಜಾತ್ರೆಯನ್ನು ಏರ್ಪಡಿಸಲಾಗುವುದು’ ಎಂದರು.

ದೇವಸ್ಥಾನ ಹಾಗೂ ಗ್ರಾಮದ ಇತಿಹಾಸ: ಕೊಣನೂರು ದೇವಾಲಯಗಳ ಗ್ರಾಮ. ಈ ಗ್ರಾಮಕ್ಕೆ ಹಲವು ರಾಜಮನೆತನಗಳ ಕೊಡುಗೆ ಅಪಾರವಾಗಿದೆ. ಸಾವಿರಾರು ವರ್ಷದ ಹಿಂದೆ ದಕ್ಷಿಣ ಭಾರತಕ್ಕೆ ಸಾಮ್ರಾಜ್ಯ ವಿಸ್ತರಿಸುವಾಗ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ನದಿಗಳ ದಂಡೆಯಲ್ಲಿ ಈಶ್ವರನ ದೇವಸ್ಥಾನ ನಿರ್ಮಿಸುತ್ತಿದ್ದುದು ಇತಿಹಾಸ.  ಯುಗ ಉರುಳಿದಂತೆ ಹಲವು ಪಾಳೇಗಾರರ ಮನೆತನದವರು ರಾಜ್ಯಭಾರ ಮಾಡಿದವು.

12ನೇ ಮಸುಲಿಂಗರಸರ ಮನೆತನದ ಬಯಿರೆಯ ನಾಯ್ಕನ ಮಗ ಕಾಬೆಯನಾಯ್ಕನು ತನ್ನ ಮನೆತನ ಹಾಗೂ ಧರ್ಮಕ್ಕೆ ಅನುಗುಣವಾಗಿ ವಿಜಯ ಸಂವತ್ಸರದ ಜೇಷ್ಠ ಬಹುಳ ದಿನದಂದು  ದಕ್ಷಿಣ ವಾರಾಣಸಿ ಕಾವೇರಿ ಸನ್ನಿಧಿಯಲ್ಲಿ ದೇವಸ್ಥಾನದ ಕಂಬಗಳನ್ನು ಕೆತ್ತಿಸಿ ನಂತರ ಕೊಳಲು ಗೋಪಾಲಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ಕೈಗೊಂಡ ಎಂದು ಇತಿಹಾಸ ಹೇಳುತ್ತದೆ.

ಈ ಕೊಳಲು ಗೋಪಾಲಸ್ವಾಮಿ ದೇವಸ್ಥಾನ ಆದ ಮೇಲೆ ಈ ಗ್ರಾಮವನ್ನು ಕೊಳಲೂರು ಎನ್ನುತ್ತಿದ್ದರು, ಕ್ರಮೇಣ ಅದೇ ಕೊಣನೂರು ಆಗಿ ಮಾರ್ಪಾಡಾಯಿತು ಎನ್ನುತ್ತಾರೆ ಇಲ್ಲಿನ ಹಿರಿಯರು. ಇದೇ 25 ರಿಂದ ಹತ್ತು ದಿನಗಳ ಕಾಲ ಕೊಳಲು ಗೋಪಾಲಸ್ವಾಮಿಗೆ ಅರಿಸಿನ, ಕುಂಕುಮ, ಕಾಯಿಪೌಡರ್, ವಸ್ತ್ರ, ಹೂವು, ವೀಳ್ಯದೆಲೆ, ಚಂದನ, ಬೆಣ್ಣೆ ಮತ್ತು ಗಂಧದಿಂದ ಅಲಂಕಾರ ಮಾಡಲಾಗುವುದು ಎಂದು ಇಲ್ಲಿನ ಯುವಕರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT