ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗ: ತನಿಖೆಗೆ ಸೂಚನೆ

Last Updated 17 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಜಲಾನಯನ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಕಾಮಗಾರಿಗಳು ಕಳಪೆ ಆಗಿವೆಯಲ್ಲದೇ, ಹಣ ದುರುಪಯೋಗವಾಗಿರುವ ಬಗ್ಗೆ ಸದಸ್ಯರು ಗಂಭೀರ ಆರೋಪ ಮಾಡಿದಾಗ ಸಂಬಂಧಪಟ್ಟ ಸ್ಥಾಯಿ ಸಮಿತಿ ಅಧ್ಯಕ್ಷರು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕಷ್ಣಮೂರ್ತಿ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಂದುವರಿದ  ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಲಾನಯನ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಕಾಮಗಾರಿಗಳು ಕಳಪೆ ಆಗಿವೆಯಲ್ಲದೆ, ಹಣ ದುರುಪಯೋಗವಾಗಿರುವ ಬಗ್ಗೆ ಹಾಗೆಯೇ, ಸಾವಯವ ಕೃಷಿ ಯೋಜನೆಗೆ ಬಿಡುಗಡೆಯಾಗುವ ಹಣ ಸಂಪೂರ್ಣವಾಗಿ ದುರುಪಯೋಗ ಆಗುತ್ತಿದೆ ಎಂಬ ಬಗ್ಗೆ ಸದಸ್ಯರು ಗಂಭೀರವಾಗಿ ಆರೋಪ ಮಾಡಿ ಸದನ ಸಮಿತಿ ರಚನೆ ಮಾಡಿ ತನಿಖೆ ನಡೆಸಿ ವರದಿ ತರಿಸಬೇಕೆಂದು ಸದಸ್ಯರು ಆಗ್ರಹಿಸಿದಾಗ, ಇದಕ್ಕೆ ಸಮ್ಮತಿಸದ ಅಧ್ಯಕ್ಷರು ಸಂಬಂಧಪಟ್ಟ ಸ್ಥಾಯಿ ಸಮಿತಿ ಅಧ್ಯಕ್ಷರು ತನಿಖೆ ನಡೆಸಿ ವರದಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

ಕಳಪೆ ದಿನಸಿ ಪೂರೈಕೆ
ಜಿಲ್ಲೆಯ ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ದಿನಸಿಗಳ ಪೂರೈಕೆ ಜತೆಗೆ ತೂಕದಲ್ಲಿಯು ವಂಚನೆಯಾಗುತ್ತಿರುವ ಬಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯರು ಖುದ್ದು ಹಾಸ್ಟೆಲ್‌ಗೆ ಭೇಟಿ ನೀಡಿ ಲೋಪದೋಷಗಳ ಬಗ್ಗೆ ವರದಿ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.

 ಸದಸ್ಯ ಈಸೂರು ಬಸವರಾಜ್ ಅವರು ವಿಷಯ ಪ್ರಸ್ತಾಪಿಸಿ, ಕಳಪೆ ಗುಣಮಟ್ಟದ ಆಹಾರಧಾನ್ಯಗಳನ್ನು ಪರಿಶೀಲಿಸದೆ, ಸ್ವೀಕರಿಸಿರುವ ಹಾಸ್ಟೆಲ್ ವಾರ್ಡನ್ ಅವರನ್ನು ಕೂಡಲೆ ಅಮಾನತು ಮಾಡಬೇಕು. ಇಷ್ಟೊಂದು ಅವ್ಯವಹಾರ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕಳಪೆ ಆಹಾರ ಧಾನ್ಯ ಪೂರೈಸುತ್ತಿರುವ ಸರಬರಾಜುದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದಾಗ ಬಹುತೇಕ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಈ ಸಂಬಂಧವಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕ್‌ನಾಯ್ಕ  ಮಾತನಾಡಿ, ಈ ಬಗ್ಗೆ ಈಗಾಗಲೇ ತನಿಖೆ  ನಡೆಸಿ ವಾರ್ಡ್‌ನ್‌ಗೆ  ಷೋಕಾಸ್ ನೋಟಿಸ್ ನೀಡಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ  ವಿವರಣೆ ಕೇಳಲಾಗಿದೆ. ಅವರಿಂದ ಉತ್ತರ ಬಂದನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದಾಗ ಇದಕ್ಕೆ ಸಮ್ಮತಿಸಿದ ಅಧ್ಯಕ್ಷರು ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ದೃಢಪಟ್ಟಲ್ಲಿ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು, ವಾರ್ಡ್‌ನ್ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ಪ್ರಕಟಿಸಿದರು.

ಮಂಗನ ಹಾವಳಿಗೆ ಪರಿಹಾರ ನೀಡಿ: ಮಂಗಗಳ ಹಾವಳಿಯಿಂದ ಬೆಳೆ ನಷ್ಟಕ್ಕೀಡಾಗಿರುವ ರೈತರಿಗೆ ಪರಿಹಾರ ಕೊಡಬೇಕೆಂದು ಸದಸ್ಯ ಸುಂದರೇಶ್ ಸಭೆ ಗಮನ ಸೆಳೆದರಲ್ಲದೇ, ಈಗಾಗಲೇ ಈ ರೀತಿಯ ಪ್ರಕರಣಗಳಿಗೆ ಪರಿಹಾರ ನೀಡಿರುವುದರಿಂದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕಿನ ರೈತರಿಗೆ ನೀಡಬೇಕೆಂದು ಕೋರಿದಾಗ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಭೂಸ್ವಾಧೀನ ಮಾಹಿತಿ ಇಲ್ಲ
ಸಾಗರ ತಾಲ್ಲೂಕು ಕುಗ್ವೆ ಗ್ರಾಮದ  ಸುತ್ತಮುತ್ತ ಕೆಎಚ್‌ಬಿ ಭೂಸ್ವಾಧೀನಕ್ಕೆ ಮುಂದಾಗಿದೆ. ಈ ಬಗ್ಗೆ ರೈತರು ಹಾಗೂ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಪ್ರಕ್ರಿಯೆ ನಿಲ್ಲಿಸಬೇಕೆಂದು ಸದಸ್ಯೆ ಲಲಿತಾ ನಾರಾಯಣ್ ಸಭೆಯಲ್ಲಿ ತಿಳಿಸಿದಾಗ ಈ ಬಗ್ಗೆ ಮಾಹಿತಿಯಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು.         

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಕಂಡುಬರುತ್ತಿದೆಯಲ್ಲದೇ, ಮಾರಾಟಗಾರರು ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಸದಸ್ಯರು ಆರೋಪಿಸಿದಾಗ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಶಿವಮೂರ್ತಪ್ಪ, ಜಿಲ್ಲೆಯಲ್ಲಿ 3,652 ಟನ್ ಗೊಬ್ಬರ ದಾಸ್ತಾನಿದೆ. ಮಂಗಳವಾರ ಒಳಗೆ ಇನ್ನಷ್ಟು ಗೊಬ್ಬರ ಬರಲಿದೆ ಎಂದರಲ್ಲದೆ, ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುವುದು ನಿಜ. ಕಂಪೆನಿಗಳವಾರು ಬೆಲೆ ನಿಗದಿಯಾಗುತ್ತಿರುವುದರಿಂದ ವ್ಯತ್ಯಾಸ ಕಂಡುಬರುತ್ತಿದೆ. ಈ ಬಗ್ಗೆ ಇಲಾಖೆ ಗಮನಿಸುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್.ವಿ. ಗಂಗಾಧರಪ್ಪ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಉಪಕಾರ್ಯದರ್ಶಿ ಹನುಮನರಸಯ್ಯ  ಉಪಸ್ಥಿತರಿದ್ದರು.

ಶಾಸಕ ಬೇಳೂರು ಗೋಪಾಲಕಷ್ಣ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT