ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತುಂಡಾಗಲು ಬಿಡುವುದಿಲ್ಲ: ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆಯ ಕಾಳಗಿ ತಾಲ್ಲೂಕು ಘಟಕ ಉದ್ಘಾಟನೆ
Last Updated 28 ಫೆಬ್ರುವರಿ 2020, 9:55 IST
ಅಕ್ಷರ ಗಾತ್ರ

ಕಾಳಗಿ: ‘ಭವ್ಯ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಹೊಂದಿರುವ ಭಾರತ ದೇಶವನ್ನು ಯಾವುದೇ ಕಾರಣಕ್ಕೂ ತುಂಡಾಗಲು ಬಿಡದೆ ಸಂರಕ್ಷಿಸುವುದೇ ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುರುವಾರ ಇಲ್ಲಿ ಹೇಳಿದರು.

ಶ್ರೀರಾಮ ಸೇನೆಯ ಕಾಳಗಿ ತಾಲ್ಲೂಕು ಘಟಕ ಹಾಗೂ ಹಿಂದೂ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ದೇಶದ ಹಿಂದೂಗಳು ಒಂದಾದರೆ ಭಾರತ ಇಡೀ ಜಗತ್ತಿನಲ್ಲಿ ಶ್ರೇಷ್ಠ ದೇಶವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಇದನ್ನು ಸಹಿಸದ ಕಾಂಗ್ರೆಸ್, ಕಮ್ಯೂನಿಸ್ಟ್, ಜೆಡಿಎಸ್ ನವರು ಮುಸ್ಲಿಮರನ್ನು ಪಕ್ಕಕ್ಕಿಟ್ಟುಕೊಂಡು ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ಅದನ್ನು ತೀವ್ರವಾಗಿ ಖಂಡಿಸುವ ನಾವು ಎಂದಿಗೂ ಒಂದೂ, ಹಿಂದೂ, ಬಂಧು ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ. ನಮ್ಮ ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಸದಾ ಬೆಂಬಲಿಸುತ್ತೇವೆ’ ಎಂದು ಹೇಳಿದರು.

ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ, ಆಂದೋಲ ಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ‘ಕಾಂಗ್ರೆಸ್ ಎಂಬ ವೈರಸ್ ನಮ್ಮ ದೇಶವನ್ನು 65 ವರ್ಷ ಕೊಳ್ಳೆ ಹೊಡೆದು ಪಠ್ಯಪುಸ್ತಕಗಳಲ್ಲಿ ದುಷ್ಟರನ್ನು ವೈಭವೀಕರಿಸಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಹಾಳು ಮಾಡಲು ಯತ್ನಿಸಿದೆ’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರರು ನಮ್ಮ ನಿಜವಾದ ಅಮೂಲ್ಯ. ಇವರ ಪಟ್ಟಿಗೆ ಆ ದೇಶದ್ರೋಹಿ ಅಮೂಲ್ಯ ಹೆಸರು ಸೇರಿಸುವುದಾದರೆ ಸೇರಿಸುವವರ ತಲೆಯಲ್ಲಿ ಹುಳು ಬಿದ್ದಂತೆ. ದೇಶದ್ರೋಹಿಗಳನ್ನು ಬೆಂಬಲಿಸುತ್ತಿರುವ ಈಶ್ವರ ಖಂಡ್ರೆ, ಡಿ.ಕೆ.ಶಿವಕುಮಾರ್‌, ಪ್ರಿಯಾಂಕ್ ಖರ್ಗೆ ಅವರನ್ನು ಜನ ಮಾಜಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದರು.

ಸ್ಥಳೀಯ ಹಿರೇಮಠದ ಶಿವಬಸವ ಶಿವಾಚಾರ್ಯರು, ರಟಕಲ್ ವಿರಕ್ತ ಮಠದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ರಟಕಲ್ ನಡುವಿನ ಮಠದ ರೇವಣಸಿದ್ಧ ಶಿವಾಚಾರ್ಯರು, ಚಂದ್ರಮೌಳಿ ಸ್ವಾಮೀಜಿ, ಗೌರಿಗಣೇಶ ಗುಡ್ಡದ ಸಿದ್ಧಶಿವಯೋಗಿ ಶರಣರು, ಡೊಣ್ಣೂರಿನ ಪ್ರಶಾಂತ ದೇವರು, ಕೋಡ್ಲಿಯ ಬಸವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ಘಟಕದ ಅಧ್ಯಕ್ಷ ವಿಜಯ ಪಾಟೀಲ,ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮ, ದುರ್ಗಾ ಸೇನೆಯ ಅಧ್ಯಕ್ಷೆ ಶೀಲಾ ಮಂಗಳಮುಖಿ, ಮುಖಂಡ ಈಶ್ವರ ಜೇವರ್ಗಿ, ಶಿವಣ್ಣ ಶಹಾಪುರ, ಎಪಿಎಂಸಿ ನಿರ್ದೇಶಕ ರಾಮಶೆಟ್ಟಿ ಪಾಟೀಲ, ಕಾಂಗ್ರೆಸ್ ಮುಖಂಡ ನಿಂಬೆಣ್ಣಪ್ಪ ಕೋರವಾರ, ಪರಮೇಶ್ವರ ಮಡಿವಾಳ, ಬಿಜೆಪಿ ಮುಖಂಡ ಶಿವಶರಣಪ್ಪ ಗುತ್ತೇದಾರ, ಸಂತೋಷ ಪಾಟೀಲ ಮಂಗಲಗಿ, ವಿಶ್ವನಾಥ ವನಮಾಲಿ, ಸಂತೋಷ ಚವಾಣ, ಶೇಖರ ಪಾಟೀಲ, ಪ್ರಶಾಂತ ಕದಂ, ರಮೇಶ ಕಿಟ್ಟದ, ಹೇಮಂತ್ ರಾಠೋಡ, ಸಂಗಮೇಶ ವನಮಾಲಿ, ಶಾಂತು ಗುತ್ತೇದಾರ, ಚಂದ್ರಕಾಂತ ವನಮಾಲಿ, ಶರಣು ಚಂದಾ, ಹಣಮಂತ ಒಡೆಯರಾಜ, ಮಲ್ಲಿಕಾರ್ಜುನ ಪೂಜಾರಿ ಇದ್ದರು. ಸುಭಾಷ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳಪ್ಪ ಕರೆಮನೋರ ಸ್ವಾಗತಿಸಿದರು. ಹಣಮಂತ ಕಣ್ಣಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT