ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ನುರಿಯುವ ಮುನ್ನ ಒಪ್ಪಂದವಾಗಲಿ

ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ: ಕಬ್ಬು ಬೆಳೆಗಾರರ ಸಂಘ ಆಗ್ರಹ
Last Updated 29 ಆಗಸ್ಟ್ 2021, 4:46 IST
ಅಕ್ಷರ ಗಾತ್ರ

ಹಳಿಯಾಳ: ಇಲ್ಲಿನ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರ ಕಬ್ಬು ನುರಿಸುವ ಮುನ್ನ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಜೊತೆಗೆ ದ್ವಿಪಕ್ಷೀಯ ಒಪ್ಪಂದ ಆಗಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಬೋಬಾಟೆ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘದ ಪದಾಧಿಕಾರಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆ ರೈತರ ಕಬ್ಬು ನುರಿಸಲು ಪ್ರಾರಂಭ ಮಾಡುವ ಮುನ್ನ ಸರ್ಕಾರದ ನಿಯಮಾವಳಿಯಂತೆ ಬೆಳೆಗಾರರ ಹಾಗೂ ಕಾರ್ಖಾನೆಯ ಒಪ್ಪಂದವಾಗಬೇಕು. ರೈತರಿಗೆ ನೀಡಬೇಕಾದ ಕಳೆದ ವರ್ಷದ ಬಾಕಿ ಹಣ ಪಾವತಿಸಬೇಕು. ಕಬ್ಬಿನ ಬೆಲೆ ದರ\ ನಿಗದಿ. ಸಾಗಾಣಿಕೆ ವೆಚ್ಚ ಈ ಎಲ್ಲ ಬಗ್ಗೆ ನಿಖರವಾಗಿ ತಿಳಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದೆ ಕಬ್ಬು ನುರಿಸಲು ಪ್ರಾರಂಭಿಸಿದರೆ ಕಾರ್ಖಾನೆಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಎಫ್‌ಆರ್‌ಪಿ ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ, ಆದರೆ ಇದರಿಂದ ರೈತರಿಗೆ ಲಾಭವಾಗದು. ಈಗ ಘೋಷಣೆ ಮಾಡಿರುವುದು ಕ್ವಿಂಟಲ್ಗೆ ಕೇವಲ ₹5 ಮಾತ್ರ. ಕನಿಷ್ಠ ಶೇ25 ರಷ್ಟು ಹೆಚ್ಚಿಗೆ ಮಾಡಬೇಕು.
ಎಫ್.‌ ಆರ್.ಪಿ ದರವನ್ನು ಯಾವುದೇ ಲಂಗು ಲಗಾಮು ಇಲ್ಲದೇ ಮಾಡಿದ್ದಾರೆ ಇದರಲ್ಲಿ ಕಬ್ಬು ಸಾಗಾಣಿಕೆ ಬಗ್ಗೆ ಪ್ರಸ್ತಾವ ಇಲ್ಲ.

ದೂರದ ಊರಿನಿಂದ ಕಬ್ಬು ಸಾಗಾಣಿಕೆ ಮಾಡಿದರೇ ಅದೇ ದರ ಹಾಗೂ ಸಮೀಪದ ಭಾಗದಿಂದ ಕಬ್ಬು ಸಾಗಾಟ ಮಾಡಿದರೂ ಕೂಡಾ ಅದೇ ದರವನ್ನು ನೀಡುತ್ತಿದ್ದು. ಈ ಬಗ್ಗೆ ಸಾಕಷ್ಟು ಬಾರಿ ಸಕ್ಕರೆ ಸಚಿವ ಹಾಗೂ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸಿದರೂ ಕೂಡಾ ಯಾವ ಪ್ರಯೋಜ ನವಾಗಿಲ್ಲ ಎಂದರು.

ರೈತ ಮುಖಂಡರು ಕಾರ್ಖಾನೆ ಸಮೀಪ ಬರಬಾರದೆಂದು ಎರಡು ಬಾರಿ ಪ್ರಕರಣ ದಾಖಲಿಸಿದ್ದಾರೆ. ರೈತ ಮುಖಂಡರನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ರೈತರ ಕಬ್ಬುಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ನೇತೃತ್ವ ವಹಿಸಿ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಸಭೆಯನ್ನು ಕೂಡಲೇ ಕರೆಯಬೇಕು. ರಾಜ್ಯ ಸರ್ಕಾರದ ಎಂ.ಎಸ್‌.ಪಿ ದರ ಕೂಡಲೇ ಘೋಷಿಸಬೇಕು. ಡಾ.ಸ್ವಾಮಿನಾಥನ ವರದಿ ಜಾರಿಗೆ ಯಾಗಬೇಕು ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ಘಾಡಿ, ತಾಲ್ಲೂಕಾ ಅಧ್ಯಕ್ಷ ಶಂಕರ ಕಾಜಗಾರ, ಮುಖಂಡರಾದ ಅಶೋಕ ಮೇಟಿ, ಅಪ್ಪಾಜಿ ಶಹಾಪುರಕರ, ಸುರೇಶ ಶಿವಣ್ಣವರ, ಪುಂಡ್ಲಿಕ್‌ ಗೋಡಿಮನಿ, ರಾಮದಾಸ ಬೆಳಗಾಂವಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT