ಶಿವಮೊಗ್ಗ ಸಿಟಿಯ ‘ಸ್ಮಾರ್ಟ್’ ರಾಜಕೀಯ

7

ಶಿವಮೊಗ್ಗ ಸಿಟಿಯ ‘ಸ್ಮಾರ್ಟ್’ ರಾಜಕೀಯ

Published:
Updated:
ಶಿವಮೊಗ್ಗ ಸ್ಮಾರ್ಟ್‌ಸಿಟಿಗೆ ಗರಿ ಸಿಕ್ಕಿದ್ದರೂ, ಜನರು ತುಂಗಾ ನಾಲೆಗೆ ಕಸ ಎಸೆದಿರುವುದು.

ಶಿವಮೊಗ್ಗ: ಚಿಕ್ಕಚಿಕ್ಕ ಮೀನುಗಳನ್ನು ದೊಡ್ಡ ಮೀನುಗಳು ತಿಂದು ಬದುಕುವುದಕ್ಕೆ ‘ಮತ್ಸನ್ಯಾಯ’ ಎನ್ನುತ್ತಾರೆ. ಇಂದು ಬಹುತೇಕ ನಗರಗಳು ಸುತ್ತಲ ಹಳ್ಳಿಗಳನ್ನು ತನ್ನೊಡಲೊಳಗೆ ತಂಬಿಕೊಳ್ಳುತ್ತಾ ಬೃಹತ್ ನಗರಗಳಾಗಿ ರೂಪುಗೊಂಡು ‘ಮತ್ಸನ್ಯಾಯ’ ನೆನಪಿಸುತ್ತಿವೆ.

ಹೀಗೆ ರೂಪುಗೊಳ್ಳುವ ನಗರಗಳು ವಿವಿಧ ರಾಜಕೀಯ ಪಕ್ಷಗಳು, ರಾಜಕಾರಣಿಗಳ ರಾಜಕೀಯ ಫಸಲಿನ ಫಲವತ್ತಾದ ತಾಣಗಳಾಗಿವೆ. ಅಲ್ಲಿ ನಡೆಯುವ ಪ್ರತಿ ವಿಷಯಗಳೂ ರಾಜಕೀಯ ಕಾವಲಿಯಲ್ಲಿ ಹಬೆಯಾಡಿಯೇ ಜನರನ್ನು ಸೋಕುತ್ತವೆ. ಇಂತಹ ಸಾಲಿನಲ್ಲಿ ಈಗ ಶಿವಮೊಗ್ಗ ನಗರವೂ ನಿಂತಿದೆ.

ಕೇವಲ ಎರಡು ದಶಕಗಳ ಹಿಂದೆ ದೊಡ್ಡ ಹಳ್ಳಿಯಂತೆ ಭಾಸವಾಗುತ್ತಿದ್ದ ಶಿವಮೊಗ್ಗ ನಗರ ಇಂದು ದಶದಿಕ್ಕುಗಳಿಗೂ ತನ್ನ ಕಬಂದ ಬಾಹುಚಾಚುತ್ತಾ ಸಾಗುತ್ತಿದೆ. ನಾಲ್ಕುವರೆ ವರ್ಷಗಳ ಹಿಂದೆ ನಗರಸಭೆಯಿಂದ ಮಹಾನಗರ ಪಾಲಿಕೆಗೆ ಬಡ್ತಿ ಪಡೆದಿದೆ. 22 ತಿಂಗಳ ಹಿಂದೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಸ್ಮಾರ್ಟ್‌ಸಿಟಿ’ ಯೋಜನೆಗೆ ಆಯ್ಕೆಯಾಗುವ ಮೂಲಕ ಮತ್ತೊಂದು ಸುತ್ತು ಅಭಿವೃದ್ಧಿಯ ಗರಿ ಬಿಚ್ಚುತ್ತಿದೆ.

ಕೇಂದ್ರ ರೂಪಿಸಿದ ‘ಸ್ಮಾರ್ಟ್‌ಸಿಟಿ’

2014ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ದೇಶದ 100 ನಗರಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ‘ಸ್ಮಾರ್ಟ್‌ಸಿಟಿ’ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಗೆ ಆಯ್ಕೆಯಾಗುವ ನಗರಗಳಿಗೆ ಪ್ರತಿ ವರ್ಷ ಕೇಂದ್ರ ₨ ಕೋಟಿ, ರಾಜ್ಯ ₨ 100 ಕೋಟಿಯಂತೆ 5 ವರ್ಷಗಳು ನೆರವು ನೀಡಲಿವೆ.

ಸರ್ಕಾರ ನಮ್ಮದೇ ಆಯ್ಕೆ ಖಚಿತ:

ಸ್ಮಾರ್ಟ್‌ಸಿಟಿ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ ಸ್ಥಾನದೊರಕಿಸಲು ಮೂರು ವರ್ಷಗಳ ಹಿಂದೆ ನಗರ ಪಾಲಿಕೆ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸುತ್ತಿದ್ದಾಗಲೇ ರಾಜಕೀಯ ಕೆಸರೆರಚಾಟ ಶುರುವಾಗಿತ್ತು.

ಯೋಜನೆಯ ರೂಪುರೇಷೆ ಸಿದ್ಧಪಡಿಸುವಾಗ ಜನಪ್ರತಿನಿಧಿಗಳು, ನಾಗರಿಕರ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿತ್ತು. ಆಗ ನಡೆದ ಸರಣಿ ಸಭೆಗಳಲ್ಲಿ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ನಾಯಕರು, ಕೇಂದ್ರದಲ್ಲಿ ನಮ್ಮದೇ ಸರ್ಕಾವಿದೆ. ವೆಂಕಯ್ಯನಾಯ್ಡು ಅವರು ಶಿವಮೊಗ್ಗ ನಗರ ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು.

ಇತ್ತ ಕಾಂಗ್ರೆಸ್ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಪಾಲಿಕೆ ಸದಸ್ಯರು ಹೇಳಿಕೆ ನೀಡುತ್ತಾ ಅಧಿಕಾರಿಗಳಿಗೆ ಸಂಪೂರ್ಣ ಸಾಥ್ ನೀಡುತ್ತಿದ್ದೇವೆ. ಕೇಂದ್ರ ನೀಡಿದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನೂ ಅನುಸರಿಸಲಾಗಿದೆ. ಒಂದು ವ್ಯವಸ್ಥಿತ ನಗರಕ್ಕೆ ಬೇಕಾದ ಎಲ್ಲ ಸವಲತ್ತು, ಅವಕಾಶ, ಭವಿಷ್ಯದ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲ ಎಲ್ಲವೂ ಇದೆ. ಹಾಗಾಗಿ, ಯಾವುದೇ ಶಿಫಾರಸು ಬೇಡ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದರು.

ಎರಡೂ ಪಕ್ಷಗಳ ಜಟಾಪಟಿಯ ಮಧ್ಯೆ ನಗರ ಪಾಲಿಕೆ ಆಯುಕ್ತ ಎ.ಆರ್. ರವಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೇಂದ್ರ ನಡೆಸುವ ‘ಫಾಸ್ಟ್ ಟ್ರ್ಯಾಕ್’ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಆದರೆ, ಮೊದಲ ಸುತ್ತಿನಲ್ಲಿ ಶಿವಮೊಗ್ಗ ಆಯ್ಕೆಯಾಗಲಿಲ್ಲ.

ಆಗ ಕಾಂಗ್ರೆಸ್ ನಾಯಕರು, ಬಿಜೆಪಿ ನಾಯಕರು ಶಿಫಾರಸು ಮಾಡಿದ್ದರೆ ಏಕೆ ಆಯ್ಕೆ ಆಗಲಿಲ್ಲ. ನಮ್ಮ ಸರ್ಕಾರವಿದೆ. ಆಯ್ಕೆ ಖಚಿತ ಎಂದೆಲ್ಲ ಹೇಳಿದ್ದವರು ಈಗ ಏನು ಹೇಳುತ್ತಾರೆ? ಮುಂದಿನ ಸುತ್ತಿನಲ್ಲಿ ಶ್ರಮದ ಫಲವಾಗಿಯೇ ಪಡೆಯುತ್ತೇವೆ ಎಂದು ಕುಟುಕಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ (2013ರ ಚುನಾವಣೆಯ ನಂತರ) ಅವರು ಶಿವಮೊಗ್ಗ ನಗರಸಭೆಗೆ ಪಾಲಿಕೆಯಾಗಿ ಬಡ್ತಿ ನೀಡಿದ್ದರು. ಅಂದೇ ₨ 100 ಕೋಟಿ ಅನುದಾನ ನೀಡಿದ್ದ ಕಾರಣ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಇದು ಸ್ಮಾರ್ಟ್‌ ಸಿಟಿ ಆಯ್ಕೆಗೆ ಮೂಲ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿಕೆ ನೀಡಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ (2008–11) ಅವಧಿಯಲ್ಲಿ ನೂರಾರು ಕೋಟಿ ಅನುದಾನ ಮಂಜೂರು ಮಾಡಿದ್ದ ಪರಿಣಾಮ ಶಿವಮೊಗ್ಗ ನಗರ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಅದರ ಫಲವೇ ಇಂದು ಎಂದು ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ,  ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಎಂ.ಬಿ. ಭಾನುಪ್ರಕಾಶ್,  ಎಸ್‌. ದತ್ತಾತ್ರಿ ಕುಟುಕಿದ್ದರು.

ಅಂತೂ, ಇಂತು ಕೊನೆಗೂ ಎರಡನೇ ಹಂತದಲ್ಲಿ (20, ಸೆಪ್ಟೆಂಬರ್ 2016) ಆಯ್ಕೆಯಾದ ರಾಜ್ಯದ ನಾಲ್ಕು ನಗರಗಳಲ್ಲಿ ಶಿವಮೊಗ್ಗಕ್ಕೂ ಸ್ಥಾನ ದೊರಕಿತ್ತು. 

ಅನುಷ್ಠಾನದ ಸವಾಲುಗಳಲ್ಲೂ ರಾಜಕೀಯ:

‘ಸ್ಮಾರ್ಟ್‌ಸಿಟಿ’ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗದ ಹೆಸರು ಸೇರಿದ ನಂತರ ಅನುಷ್ಠಾನ ಪ್ರಕ್ರಿಯೆಗಳು ಆರಂಭವಾದವು. ಆರು ತಿಂಗಳ ನಂತರ ಕೇಂದ್ರದ ನಿರ್ದೇಶನದಂತೆ ರಾಜ್ಯ ಸರ್ಕಾರ ‘ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್’ ಕಂಪೆನಿ ನೋಂದಾಯಿಸಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ ಈ ಕಂಪೆನಿ ಕಾರ್ಯನಿರ್ವಹಿಸಲಿದೆ. ಎಂಜಿನಿಯರ್‌ಗಳ ತಂಡ, ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಪ್ರಕ್ರಿಯೆಗಳು ಆರಂಭವಾಗಿವೆ. ಆದರೆ, ಇದರಲ್ಲೂ ರಾಜಕೀಯ ವಾಗ್ವಾದಗಳು ನಿರಂತರವಾಗಿವೆ.

‘ಒಂದೂವರೆ ವರ್ಷವಾದರೂ ಯೋಜನೆ ಆರಂಭಿಸಿಲ್ಲ. ಸುಮ್ಮನೆ ಕಾಲಹರಣ ಮಾಡಲಾಗಿದೆ. ಐದು ವರ್ಷದ ಹಣ ಸೇರಿಸಿದರೆ ₨ 1 ಸಾವಿರ ಕೋಟಿಯಾಗುತ್ತದೆ. ಇಷ್ಟು ಹಣ ಬಳಸಿಕೊಂಡರೆ ನಗರದ ಸಮಗ್ರ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್‌ನಂತೆ ಮತ್ತಷ್ಟು ವಿಳಂಬ ಮಾಡುವುದಿಲ್ಲ. ತಕ್ಷಣವೇ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡುತ್ತೇನೆ’ ಎಂದು ನೂತನ ಶಾಸಕ ಕೆ.ಎಸ್. ಈಶ್ವರಪ್ಪ ಈಚೆಗೆ ಹೇಳಿಕೆ ನೀಡಿದ್ದರು.

ವಾಸ್ತವದಲ್ಲಿ ಸ್ಮಾರ್ಟ್‌ಸಿಟಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದುವರೆಗೂ ಬಂದಿರುವ ಹಣ ಕೇವಲ ₨ 216 ಕೋಟಿ. ನೂತನ ಶಾಸಕರು ಹೇಳಿದಂತೆ ₨ 600 ಕೋಟಿ ಬಂದಿಲ್ಲ. ಮೊದಲು ಮಾಹಿತಿ ತಿಳಿದುಕೊಂಡು ಹೇಳಿಕೆ ನೀಡಬೇಕು ಎಂದು ಮಾಜಿ ಶಾಸಕ ಪ್ರಸನ್ನಕುಮಾರ್ ಛಾಟಿ ಬೀಸಿದ್ದಾರೆ.

ಯೋಜನೆಯ ಒಟ್ಟಾರೆ ರೂಪುರೇಷೆ:

ಯೋಜನೆಯ ಸಮಗ್ರ ರೂಪುರೇಷೆಯಲ್ಲಿ ಹೆಚ್ಚಿನ ಹಣ ತುಂಗಾ ನದಿಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಗುಜರಾತಿನ ಸಬರಮತಿ ನದಿ ಮಾದರಿಯಲ್ಲಿ ನದಿ ಅಭಿವೃದ್ಧಿಪಡಿಸಲು ₨ 421.12 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿದೆ. ಅಶೋಕ ವೃತ್ತದಿಂದ ಆಲ್ಕೊಳ ವೃತ್ತದವರೆಗಿನ 1.7 ಕಿ.ಮೀ ರಸ್ತೆಯನ್ನು 24 ಮೀಟರ್‌ ಚತುಷ್ಪದ ರಸ್ತೆಯಾಗಿ ಅಭಿವೃದ್ಧಿ, ರಸ್ತೆ ಮಧ್ಯೆ ಹೂದೋಟ, ಹೈಟೆಕ್‌ ಬಸ್‌, ರೈಲು ನಿಲ್ದಾಣಗಳು, ಇ–ಶೌಚಾಲಯಗಳು ನಿರ್ಮಾಣವಾಗಲಿವೆ. 

2017ರ ಜುಲೈನಲ್ಲಿ ಶಾಸಕ, ಅಧಿಕಾರಿ ಹೇಳಿಕೆ

ಸ್ಮಾರ್ಟ್‌ಸಿಟಿಗೆ ಹಣ ಬಂದಿಲ್ಲ. ಆದರೆ, ಅದಕ್ಕಾಗಿ ನೇಮಕಗೊಂಡ ಕಂಪೆನಿ ಕಾಮಗಾರಿಗಳ ಪ್ರಸ್ತಾವನೆ ಸಿದ್ಧಪಡಿಸಿದೆ. ಯಾವುದೇ ಕ್ಷಣದಲ್ಲಿ ಕಾಮಗಾರಿ ಆರಂಭಿಸಲಿವೆ.

–ಕೆ.ಬಿ. ಪ್ರಸನ್ನಕುಮಾರ್‌, ಶಾಸಕರು, ಶಿವಮೊಗ್ಗ.

ಸಿದ್ಧತೆ ಮುಂದುವರಿದಿದೆ

ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲು ಕನ್ಸ್‌ಲ್ಟೆಂಟ್‌ ಏಜೆನ್ಸಿಗಳು ನೇಮಕಗೊಂಡಿದ್ದು, ಇವುಗಳು ನೀಡಿದ ಪ್ರಸ್ತಾ ವನೆ ಆಧಾರದ ಮೇಲೆ ಹಲವು ಯೋಜನೆ ಆರಂಭಿಸಲಿದ್ದೇವೆ. ಇದುವರೆಗೆ ಹಣ ಬಂದಿಲ್ಲ. ಅಷ್ಟರಲ್ಲಿ ಉಳಿದ ಪ್ರಾಥಮಿಕ ಸಿದ್ಧತೆ ಪೂರೈಸುತ್ತೇವೆ.

–ಮುಲೈ ಮುಹಿಲಿನ್‌, ವ್ಯವಸ್ಥಾಪಕ ನಿರ್ದೇಶಕ ‘ಸ್ಮಾರ್ಟ್‌ಸಿಟಿ’ ಕಂಪೆನಿ.

ಜೂನ್ 2018ರಂದು ಹಾಲಿ, ಮಾಜಿ ಶಾಸಕರ ಹೇಳಿಕೆ

ಸಮನ್ವಯದ ಕೊರತೆ ಹಿನ್ನಡೆಗೆ ಕಾರಣ

‘ಸ್ಮಾರ್ಟ್‌ಸಿಟಿ’ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ₹ 600 ಕೋಟಿ ನೀಡಿವೆ. ಆದರೆ, ಹಿಂದಿನ ಶಾಸಕರು, ಅಧಿಕಾರಿಗಳು, ಪಾಲಿಕೆ ಆಡಳಿತದ ನಡುವೆ ಸಮನ್ವಯ ಇಲ್ಲದ ಕಾರಣ ಇದುವರೆಗೂ ಅನುಷ್ಠಾನಗೊಂಡಿಲ್ಲ.

–ಕೆ.ಎಸ್. ಈಶ್ವರಪ್ಪ, ನೂತನ ಶಾಸಕರು.

ಕೇವಲ 11 ವಾರ್ಡ್‌ಗಳ ವ್ಯಾಪ್ತಿ!

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕಾಮಗಾರಿ ಕೈಗೊಳ್ಳುವ ಪ್ರದೇಶ ಸಮೀತ ವ್ಯಾಪ್ತಿ ಒಳಗೊಂಡಿದೆ. ದಕ್ಷಿಣದಲ್ಲಿ ಬಿ.ಎಚ್. ರಸ್ತೆ, ಉತ್ತರದಲ್ಲಿ ರೈಲು ಮಾರ್ಗ, ಪೂರ್ವದಲ್ಲಿ ತುಂಗಾ ನದಿ, ಪಶ್ಚಿಮದಲ್ಲಿ ಶರಾವತಿ ನಗರ ಬಳಿ ಇರುವ ತುಂಗಾ ನಾಲೆ ಬರುತ್ತದೆ. ಈ ಪ್ರದೇಶದ ಒಳಗೆ ಕೇವಲ 11 ವಾರ್ಡ್‌ಗಳು ಬರುತ್ತವೆ. ಅವುಗಳಲ್ಲಿ ಕೆಲವು ವಾರ್ಡ್‌ ಭಾಗಶಃ ಒಳಗೊಂಡಿವೆ.

ಖರ್ಚಾಗಿರುವುದು ₨ 20 ಲಕ್ಷ!

ಯೋಜನೆಗೆ ಮಂಜೂರಾದ ₨ 216 ಕೋಟಿ ಅನುದಾನದಲ್ಲಿ ಅಭಿವೃದ್ಧಿಯೇತರ ವೆಚ್ಚಗಳಿಗಾಗಿ ₨ 20 ಲಕ್ಷ ಖರ್ಚಾಗಿದೆ. ನೆಹರೂ ಕ್ರೀಡಾಂಗಣ ಆಧುನೀಕರಣ ಕಾಮಗಾರಿ, ಟ್ಯಾಂಕ್ ಮೊಹಲ್ಲಾ ಕಾಮಗಾರಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ, ತುಂಗಾ ನದಿ ಪರಿಸರ ಅಭಿವೃದ್ಧಿ ಆರಂಭಕ್ಕೆ ಸಿದ್ಧತೆ ನಡೆದಿದೆ ಎಂದು ಯೋಜನೆಯ ಕಾರ್ಯನಿರ್ಹಾಕ ಎಂಜಿನಿಯರ್ ಗಣೇಶ್ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !