ಇಂದಿನ ಸಂಶೋಧನೆಗಳಲ್ಲಿ ಹೊಸ ಹೊಳಹುಗಳ ಕೊರತೆ: ಸುಂದರ್ ಸಾರುಕ್ಕೈ

7
ನೀನಾಸಂ ಸಂಸ್ಕೃತಿ ಶಿಬಿರ

ಇಂದಿನ ಸಂಶೋಧನೆಗಳಲ್ಲಿ ಹೊಸ ಹೊಳಹುಗಳ ಕೊರತೆ: ಸುಂದರ್ ಸಾರುಕ್ಕೈ

Published:
Updated:
Deccan Herald

ಸಾಗರ: ಇಂದಿನ ಬಹುತೇಕ ಸಂಶೋಧನೆಗಳಲ್ಲಿ ಹೊಸ ಹೊಳಹುಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಲೇಖಕ ಸುಂದರ್ ಸಾರುಕ್ಕೈ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಶನಿವಾರ ನಡೆದ ಗೋಷ್ಠಿಯಲ್ಲಿ ‘ಸಂಶೋಧನಾ ಕ್ಷೇತ್ರದ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು ಕೇವಲ ಶೈಕ್ಷಣಿಕ ಪದೋನ್ನತಿಗಾಗಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಹೊಸ ವಿಚಾರಗಳೇ ಇಲ್ಲದ ಸಂಶೋಧನೆಗಳಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಯಾವುದೇ ಒಂದು ವಿಷಯದ ಕುರಿತು ಆಳವಾದ ಅಧ್ಯಯನ ಮಾಡುವಾಗ ಆ ವಿಷಯದ ಕುರಿತು ನಮ್ಮ ಅಂತರಂಗದಲ್ಲಿ ಅರಿವಿನ ಸ್ಫೋಟ ಆಗಬೇಕು. ಕೇವಲ ವಾಗ್ವಾದ ಮನೋಭಾವದಿಂದ ಓದು ಸಾರ್ಥಕತೆ ಪಡೆಯುವುದಿಲ್ಲ. ಹಾಗೆಯೇ ಇಂತಹ ಧೋರಣೆಯಿಂದ ಅಂತರ್ ಪಠ್ಯ ದಕ್ಕುವುದಿಲ್ಲ ಎಂದು ಪ್ರತಿಪಾದಿಸಿದರು.

ಲೇಖಕ ಪೃಥ್ವಿದತ್ತ ಚಂದ್ರಶೋಭಿ ಮಾತನಾಡಿ, ‘ಸಂಶೋಧನೆ ಎನ್ನುವುದು ಜ್ಞಾನ ಪ್ರಸರಣದ ಸಾಮರ್ಥ್ಯ ಇಲ್ಲದವರ ಕ್ರಿಯೆ ಆದರೆ ಅದೊಂದು ಒಳನೋಟಗಳಿಲ್ಲದ, ಅರ್ಥರಹಿತ ತಾಂತ್ರಿಕ ಆಚರಣೆಯಾಗುತ್ತದೆ. ಅಧ್ಯಾಪಕರಾದವರು ಜಾತಿ, ಧರ್ಮ, ಪ್ರದೇಶಗಳೆಂಬ ವಾಂಛೆಗಳಿಂದ ಮುಕ್ತವಾಗಿಲ್ಲ. ಹೀಗಾಗಿ ಉನ್ನತಶಿಕ್ಷಣ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ’ ಎಂದು ವ್ಯಾಖ್ಯಾನಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕವಾಗಿರುವ ನೈತಿಕ ಅಧಃಪತನ, ಶೈಕ್ಷಣಿಕ ಗುರಿಗಳೇ ಇಲ್ಲದ ಅಸ್ಪಷ್ಟ ಕಾರ್ಯಕ್ರಮಗಳ ಯೋಜನೆಗಳಿಂದಾಗಿ ನಮ್ಮ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರುಗಳ ‘ಅಧ್ಯಾಪಕತನ’ವೇ ಕಾಣೆಯಾಗುವಂತಾಗಿದೆ. ನಮ್ಮ ಸಮಾಜ ಹೀಗಿರಬೇಕು ಎಂಬ ಮಾದರಿಯನ್ನು ಬಿಂಬಿಸುವಲ್ಲಿ, ಸಂಸ್ಕೃತಿಯನ್ನು ಸೃಷ್ಟಿಸುವಲ್ಲಿ ಈ ಕಾರಣಕ್ಕೆ ಶಿಕ್ಷಣ ಸೋಲುತ್ತಿದೆ ಎಂದು ವಿಶ್ಲೇಷಿಸಿದರು.

ಅಕಾಡೆಮಿಕ್ ಆದ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಮುಕ್ತ ವಾತಾವರಣ ಅಧ್ಯಾಪಕರಿಗೆ ಇಲ್ಲವಾಗಿರುವ ಜೊತೆಗೆ ಕಲಿಕೆಯ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಮುಕ್ತತೆ ಲಭ್ಯವಿಲ್ಲ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !