ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ ಶಂಕಿತ ರೋಗಿಗಳಿಗೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ

Last Updated 18 ಮಾರ್ಚ್ 2020, 11:00 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಗೆ ಮಂಗನ ಕಾಯಿಲೆ ಸೋಂಕು ತಗುಲಿದೆ ಎಂಬ ಶಂಕೆ ಉಂಟಾದಲ್ಲಿ ಅಂತಹ ವ್ಯಕ್ತಿಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್. ಹೇಳಿದರು.

ಮಂಗನ ಕಾಯಿಲೆ ಹಾಗೂ ಕೊರೊನಾ ಸೋಂಕು ತಡೆಯುವ ಕುರಿತು ಮಂಗಳವಾರ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಅವರು, ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಬಿಡುಗಡೆಯಾಗುವ ಒಂದು ದಿನದ ಮುಂಚಿತವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದರೆ ರೋಗಿಯ ಖಾತೆಗೆ ನೇರವಾಗಿ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ ಎಂದರು.

ಮಂಗನ ಕಾಯಿಲೆ ಪತ್ತೆಯಾಗಿರುವ ಪ್ರದೇಶಗಳಲ್ಲಿ ಕಾಯಿಲೆ ತಡೆಯುವ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತ ಮುಂದಾಗಿದೆ. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಹಕರಿಸಬೇಕು ಎಂದು ಮನವಿ ಮಾಡಿದರು.

‘ಯಾವುದೇ ವ್ಯಕ್ತಿಗೆ ಮಂಗನ ಕಾಯಿಲೆ ಲಕ್ಷಣ ಕಂಡುಬಂದರೆ ಖಾಸಗಿ ವೈದ್ಯರನ್ನು ಸಂಪರ್ಕಿಸುವ ಬದಲು ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಬರಬೇಕು. ಆಗ ತಕ್ಷಣ ಅಂತಹ ರೋಗಿಗೆ ಸರ್ಕಾರದ ವತಿಯಿಂದ ದೊರಕುವ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ವೈಷ್ಣೋದೇವಿ ದೇವಾಲಯಕ್ಕೆ ಹೋಗಿಬಂದ ಐವರು ಪ್ರವಾಸಿಗರು ಈಚೆಗೆ ಜೋಗಕ್ಕೆ ಬಂದಿರುವ ಬಗ್ಗೆ ಮಾಹಿತಿ ಇದೆ. ಈ ಪ್ರವಾಸಿಗರು ಎಲ್ಲೆಲ್ಲಿ ಓಡಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಪ್ರವಾಸಿಗರಿಂದಾಗಿ ಸೋಂಕು ಹರಡದಂತೆ ಎಚ್ಚರ ವಹಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ‘ಮಂಗನ ಕಾಯಿಲೆ ರೋಗಿಗಳಿಗೆ ಕಳೆದ ವರ್ಷ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಾಬ್ತು ₹ 8 ಲಕ್ಷ ಬಾಕಿ ಇತ್ತು. ಅದನ್ನು ರಾಜ್ಯ ಸರ್ಕಾರ ಪಾವತಿಸಿದೆ. ಈ ಕಾಯಿಲೆ ನಿಯಂತ್ರಣಕ್ಕೆ ಅಗತ್ಯವಿರುವ ಡಿಎಂಪಿ ತೈಲ ಹಾಗೂ ರೋಗ ನಿರೋಧಕ ಲಸಿಕೆ ಲಭ್ಯವಿದೆ. ಕೆಎಫ್‌ಡಿ ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯಾಗಿ ಡಾ.ರಾಜು ಅವರನ್ನು ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಈವರೆಗೆ ದಾಖಲಾಗಿಲ್ಲ. ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇಡಲು ವಿವಿಧ ಇಲಾಖೆ ಸಿಬ್ಬಂದಿಗೆ ಸೂಚನೆ ಇಡಲಾಗಿದೆ. ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣಾ ಕೇಂದ್ರ ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಸೊರಬ ತಹಶೀಲ್ದಾರ್ ಪುಟ್ಟರಾಜಗೌಡ, ಹೊಸನಗರ ತಹಶೀಲ್ದಾರ್ ರಾಜೀವ್, ಡಾ.ಕಿರಣ್, ಡಾ.ಹರೀಶ್, ಡಾ.ಮುನಿವೆಂಕಟರಾಜು, ಡಾ.ಪ್ರಕಾಶ್ ಬೋಸ್ಲೆ, ಡಾ.ರಾಮಚಂದ್ರ ಭಟ್, ಡಾ.ಶ್ರೀಪಾದ ರಾವ್, ನಗರಸಭೆ ಪರಿಸರ ಎಂಜಿನಿಯರ್‌ ಪ್ರಭಾಕರ್, ಆರೋಗ್ಯ ನಿರೀಕ್ಷಕ ಶೈಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT