ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಲ ಜೀವನ್ ಮಿಷನ್ ಯೋಜನೆಯಲ್ಲಿ ಅಕ್ರಮ ಆರೋಪ: 116 ಟೆಂಡರ್ ಹಣ ಮುಟ್ಟುಗೋಲು

Published 1 ಸೆಪ್ಟೆಂಬರ್ 2024, 2:46 IST
Last Updated 1 ಸೆಪ್ಟೆಂಬರ್ 2024, 2:46 IST
ಅಕ್ಷರ ಗಾತ್ರ

ತುಮಕೂರು: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಗುಣಮಟ್ಟದ ಕೆಲಸ ನಿರ್ವಹಿಸದ 116 ಕಾಮಗಾರಿಗಳ ಟೆಂಡರ್ ಹಣವನ್ನು ಈವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಇಲ್ಲಿ ಶನಿವಾರ ತಿಳಿಸಿದರು.

ಜೆಜೆಎಂ ಯೋಜನೆಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜೆಜೆಎಂ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ನಂತರ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳ ನೇತೃತ್ವದ ತಂಡ ತುಮಕೂರು, ಕೊರಟಗೆರೆ ತಾಲ್ಲೂಕಿಗೆ ಭೇಟಿನೀಡಿ ಪರಿಶೀಲನೆ ನಡೆಸಿದೆ. ತನಿಖೆಯ ವರದಿ ಆಧಾರದ ಮೇಲೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಲೋಪದೋಷಗಳು ಕಂಡುಬಂದ ತಕ್ಷಣ ಕ್ರಮ ಜರುಗಿಸಲಾಗಿದೆ. ಜೆಜೆಎಂ ಪ್ರತಿ ಕಾಮಗಾರಿ ಮುಗಿದ ನಂತರ ಚಿತ್ರ ಸಹಿತ ದಾಖಲಿಸಲಾಗುತ್ತಿದೆ. ಸ್ಥಳೀಯ ಜನರ ಅಭಿಪ್ರಾಯಗಳನ್ನು ವಿಡಿಯೊ ಮಾಡಿ, ದಾಖಲೆ ಮಾಡಲಾಗುತ್ತಿದೆ. ಪ್ರತಿ ಕಾಮಗಾರಿಯನ್ನೂ ಮೂರನೇ ವ್ಯಕ್ತಿಯಿಂದ ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲವೂ ಸರಿಯಾಗಿದೆ ಎಂಬುದು ಖಚಿತವಾದ ನಂತರ ಬಿಲ್ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಗುಣಮಟ್ಟದ ಕಾಮಗಾರಿ ನಡೆಯದಿದ್ದರೆ, ಮತ್ತಿತರೆ ಲೋಪದೋಷಗಳು ಕಂಡು ಬಂದರೆ ತಕ್ಷಣ ಲಿಖಿತವಾಗಿ ದೂರು ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಕರ್ತವ್ಯಲೋಪದ ಮೇಲೆ ಕಳೆದ ಒಂದು ವರ್ಷದಲ್ಲಿ 20 ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಕಚೇರಿಗೆ ಸರಿಯಾಗಿ ಬಾರದ 7 ಪಿಡಿಒಗಳ ವೇತನ ಕಡಿತ ಮಾಡಲಾಗಿದೆ ಎಂದು ತಿಳಿಸಿದರು.

ಕೆಲಸ ಮಾಡದೆ ಬಿಲ್‌ಗೆ ಬೇಡಿಕೆ

‘ಜೆಜೆಎಂ ಯೋಜನೆಯಲ್ಲಿ ಕೆಲವು ಕಡೆಗಳಲ್ಲಿ ಕೆಲಸ ಮಾಡದೆ ಬಿಲ್ ಮಾಡಿಕೊಡುವಂತೆ ಅಧಿಕಾರಿಗಳ ಮೇಲೆ ಗುತ್ತಿಗೆದಾರರು ಒತ್ತಡ ಹಾಕುತ್ತಿದ್ದಾರೆ. ಕಳಪೆ ಗುಣಮಟ್ಟದ ಕೆಲಸ ಮಾಡಿದ್ದನ್ನು ಕೇಳಬಾರದು ಎಂಬ ಧೋರಣೆ ಹೊಂದಿದ್ದಾರೆ. ಇದೆಲ್ಲಕ್ಕೂ ಕಡಿವಾಣ ಹಾಕಿದ್ದರಿಂದ ಹಣ ಕೇಳುತ್ತಿದ್ದಾರೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಜಿ.ಪ್ರಭು ಹೇಳಿದರು. ಕೆಲವು ಗುತ್ತಿಗೆದಾರರು ಅಧಿಕಾರಿಗಳು ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT