ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಕುಡಿವ ನೀರಿಗಾಗಿ 1.5 ಕಿ.ಮೀ ನಡಿಗೆ

ವರ್ಷ ಕಳೆದರೂ ಬಾರದ ಬೆಳೆ ವಿಮೆ ಪರಿಹಾರ
Published 6 ಜುಲೈ 2024, 5:44 IST
Last Updated 6 ಜುಲೈ 2024, 5:44 IST
ಅಕ್ಷರ ಗಾತ್ರ

ತುಮಕೂರು: ‘ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಎತ್ತಿನಹೊಳೆ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದರೂ ಈವರೆಗೂ ಪರಿಹಾರ ಕೊಟ್ಟಿಲ್ಲ. ಶುದ್ಧ ಕುಡಿಯುವ ನೀರು ತರಲು 1.5 ಕಿ.ಮೀ ನಡೆಯಬೇಕು....’

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಶುಕ್ರವಾರ ಜಿಲ್ಲಾ ಸಂಚಾರ ಹೊರಟಾಗ ತಾಲ್ಲೂಕಿನ ಸೀತಕಲ್ಲು, ಕಾಳೇನಹಳ್ಳಿ, ಹಾಲುಗೊಂಡನಹಳ್ಳಿ, ಕೊರಟಗೆರೆ ತಾಲ್ಲೂಕಿನ ಭೂಚನಹಳ್ಳಿ, ವಜ್ಜನಕುರಿಕೆ ಗ್ರಾಮದ ಜನರು ಸಾಲು ಸಾಲು ಸಮಸ್ಯೆಗಳನ್ನು ಅವರ ಮುಂದೆ ಮಂಡಿಸಿದರು.

‘ಎತ್ತಿನಹೊಳೆಗೆ ಭೂಮಿ ಕೊಟ್ಟ ಮೇಲೆ ಪರಿಹಾರ ಸಿಕ್ಕಿಲ್ಲ. ಇತ್ತ ಉಳಿಮೆ ಮಾಡಲಾಗದೆ, ಪರಿಹಾರವೂ ಕೈ ಸೇರದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ’ ಎಂದು ಸೀತಕಲ್ಲು ಗ್ರಾಮದ ಅನಂತಮೂರ್ತಿ ಅಳಲು ತೋಡಿಕೊಂಡರು. ‘ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ, ಶವಸಂಸ್ಕಾರ ಮಾಡಲು ಅಕ್ಕಪಕ್ಕದ ಜಮೀನಿನವರು ಅವಕಾಶ ನೀಡುತ್ತಿಲ್ಲ. ಓವರ್‌ಹೆಡ್‌ ಟ್ಯಾಂಕ್‌ ನೀರು ವಾಸನೆಯಿಂದ ಕೂಡಿದ್ದು, ಕುಡಿಯಲು ಆಗುತ್ತಿಲ್ಲ’ ಎಂದು ಹಾಲಗೊಂಡನಹಳ್ಳಿ ಜನ ಅವಲತ್ತುಕೊಂಡರು.

‘8 ವರ್ಷ ಕಳೆದರೂ ಸಾಗುವಳಿ ಚೀಟಿ ನೀಡಿಲ್ಲ. ನಾಡ ಕಚೇರಿಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ಬದಲಾಗುತ್ತಿದ್ದಾರೆ ಹೊರತು ನನ್ನ ಅರ್ಜಿಗೆ ಪರಿಹಾರ ಸಿಗುತ್ತಿಲ್ಲ’ ಎಂದು ಭೂಚನಹಳ್ಳಿ ನರಸಪ್ಪ ಗೋಳಿಟ್ಟರು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ನೀರು ತರಲು 1.5 ಕಿ.ಮೀ ದೂರ ಹೋಗಬೇಕು. ಕಲುಷಿತ ನೀರನ್ನು ಜಿಲ್ಲಾಧಿಕಾರಿಗೆ ತೋರಿಸಿದರು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಡಿಕೆ ಸಲ್ಲಿಸಿದರು.

‘ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗದೆ ಮಹಿಳೆಯರು ಮಾಹಿತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯವಾಣಿ ಆರಂಭಿಸಬೇಕು. ಹೆಣ್ಣು ಮಕ್ಕಳ ಹೆಸರು ಬಿಟ್ಟು ಪೌತಿ ಖಾತೆ ಮಾಡಬಾರದು. ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಜಮೀನಿಗೆ ದಾರಿ ಬಿಡುವ, ಪೌತಿ ಖಾತೆಗೆ ಸಂಬಂಧಪಟ್ಟವು ಹೆಚ್ಚಿವೆ. ಶೀಘ್ರದಲ್ಲೇ ಎಲ್ಲ ಅರ್ಜಿ ವಿಲೇವಾರಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜತೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ, ತಹಶೀಲ್ದಾರರಾದ ಎಂ.ಸಿದ್ದೇಶ್‌, ಕೆ.ಮಂಜುನಾಥ್‌ ಜತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT