ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಟಗೆರೆ: 21 ಜೋಡಿ ಸಾಮೂಹಿಕ ವಿವಾಹ

ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದಲ್ಲಿ ಜನಜಾಗೃತಿ, ಧರ್ಮ ಸಮಾರಂಭ
Published 10 ಜೂನ್ 2024, 4:20 IST
Last Updated 10 ಜೂನ್ 2024, 4:20 IST
ಅಕ್ಷರ ಗಾತ್ರ

ಕೊರಟಗೆರೆ: ಧರ್ಮ ಹಾಗೂ ಸಂಸ್ಕಾರದ ಕೊರತೆಯಿಂದ ಇಂದಿನ ಬಹಳಷ್ಟು ಯುವಕರು ಅಧರ್ಮದ ಹಾದಿ ಹಿಡಿದು ಅಪರಾಧಿಗಳಾಗುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ತಾಲ್ಲೂಕಿನ ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಭಾನುವಾರ ನಡೆದ 18ನೇ ವರ್ಷಿಕೋತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.

ಧರ್ಮ ಹಾಗೂ ಸಮಾಜ ಕಾರ್ಯ ಎರಡನ್ನು ಮಾಡುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಸಿದ್ಧಗಂಗಾ ಮಠ ಸಾಮಾಜಮುಖಿಯಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾದರಿಯಾಗಿದೆ. ಅದೇ ಮಾರ್ಗದಲ್ಲೆ ಸಿದ್ಧರಬೆಟ್ಟ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷ ಮಾಡುವ ಮೂಲಕ ಬಡವರ ಭವಿಷ್ಯಕ್ಕೆ ನಾಂದಿಯಾಗಿದೆ ಎಂದು ಹೇಳಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಮಠಗಳು ಜನಜಾಗೃತಿ ಜೊತೆಗೆ ಧರ್ಮ ಜಾಗೃತಿ ಮಾಡಬೇಕಿರುವುದು ಅತ್ಯಗತ್ಯ. ಸರಳ ವಿವಾಹಗಳಿಂದ ಎಷ್ಟೊ ಜನರ ಜೀವನ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ತಪ್ಪಲಿದೆ ಎಂದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಣ್ಣಪುಟ್ಟ ವಿಷಯಗಳಿಗೆ ವೈವಾಹಿಕ ಜೀವನದಲ್ಲಿ ಮನಸ್ತಾಪ ಬಂದು ಸಂಬಂಧಗಳು ಹಳಸುತ್ತಿವೆ. ವೈವಾಹಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ತಾಳ್ಮೆ ಅತ್ಯಗತ್ಯ. ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಂಡಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಮದುವೆ ಮಾಡಲಾಗಿದೆ. ಎಲ್ಲ ಜೋಡಿಗಳು ಅತ್ಯುತ್ತಮ ಬದುಕು ಸಾಗಿಸುತ್ತಿರುವುದು ತೃಪ್ತಿ ತಂದಿದೆ ಎಂದರು.

ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೋಟಿ, ಕೋಟಿ ಖರ್ಚು ಮಾಡಿ ಮಾಡಿದ ಮದುವೆಗಳು ಕೆಲವೇ ದಿನಗಳಲ್ಲಿ ವಿಚ್ಛೇಧನವಾಗುತ್ತಿರುವುದು ಆತಂಕಕಾರಿ. ಸಾಂಸಾರಿಕ ಜೀವನದಲ್ಲಿ ಸಂಬಂಧಗಳಿಗೆ ಬೆಲೆ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ 21 ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು. ನೂರಾರು ವಟುಗಳಿಗೆ ಶಿವ ಧೀಕ್ಷೆ ನಡೆಸಲಾಯಿತು. ಪುಸ್ತಕ ದಾಸೋಹ, ರೇಣುಕಾಚಾರ್ಯರ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನ ನೆರವೇರಿದವು.

ಅರಣ್ಯ ಇಲಾಖೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತರು ತಮಗೆ ಬೇಕಾದ ಸಸಿಗಳನ್ನು ಸಂತಸದಿಂದ ಮನಗೆ ಒಯ್ದರು.

ಕನಕಗಿರಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮೀಜಿ, ಶಾಸಕರಾದ ಜ್ಯೋತಿಗಣೇಶ್, ಪುಟ್ಟಸ್ವಾಮಿ ಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ದರ್ಶನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜೆ.ಎನ್.ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್, ತಹಶೀಲ್ದಾರ್ ಕೆ.ಮಂಜುನಾಥ, ಎಸ್‌ಪಿ ಕೆ.ವಿ.ಅಶೋಕ್, ಮುಖಂಡರಾದ ಸಿದ್ದಮಲ್ಲಪ್ಪ, ಮಂಜುನಾಥ್, ಸದಾಶಿವಯ್ಯ, ಎಂ.ಜಿ.ಶ್ರೀನಿವಾಸಮೂರ್ತಿ, ಚಂದ್ರಮೌಳಿ, ಚಂದ್ರಶೇಖರ್, ಮೋಹನ್ ಕುಮಾರ ಪಟೇಲ್, ಪುಟ್ಟನರಸಪ್ಪ, ರೇಣುಕಾ ಪ್ರಸಾದ್ ಹಾಜರಿದ್ದರು.

ಸಿದ್ದರಬೆಟ್ಟದಲ್ಲಿ ನಡೆದ ಜನಜಾಗೃತಿ ಹಾಗೂ ಸಾಮೂಹಿಕ ಕಾರ್ಯಕ್ರಮ ಉದ್ಘಾಟನೆಯಲ್ಲಿ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹನುಮಂತನಾಥಸ್ವಾಮೀಜಿ ವೀರಭದ್ರಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.  
ಸಿದ್ದರಬೆಟ್ಟದಲ್ಲಿ ನಡೆದ ಜನಜಾಗೃತಿ ಹಾಗೂ ಸಾಮೂಹಿಕ ಕಾರ್ಯಕ್ರಮ ಉದ್ಘಾಟನೆಯಲ್ಲಿ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹನುಮಂತನಾಥಸ್ವಾಮೀಜಿ ವೀರಭದ್ರಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.  
ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ
ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ

ಆಯುರ್ವೇದ ಆಸ್ಪತ್ರೆ ಸ್ಥಾಪನೆಗೆ ಕ್ರಮ

ರಂಭಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ ಸಿದ್ಧರಬೆಟ್ಟ ಆಯುರ್ವೇದ ಸಸ್ಯಗಳನ್ನು ಒಳಗೊಂಡ ಐತಿಹಾಸಿಕ ತಾಣವಾಗಿದೆ. ಈ ಜಾಗದಲ್ಲಿ ಆಯುರ್ವೇದ ಆಸ್ಪತ್ರೆ ಸ್ಥಾಪನೆ ಮಾಡಿದಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಂಬಾಪುರಿ ಮಠದಿಂದ ಆಯುರ್ವೇದ ಆಸ್ಪತ್ರೆ ಸ್ಥಾಪನೆಗೆ ಎಲ್ಲ ರೀತಿಯ ಕ್ರಮ ವಹಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT