ಶುಕ್ರವಾರ, ಆಗಸ್ಟ್ 6, 2021
25 °C

ಕುಣಿಗಲ್‌ಗೆ ಕಾಲಿಟ್ಟ ಕೊರೊನಾ; 3 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕುಣಿಗಲ್: ತಾಲ್ಲೂಕಿನ ಅಮೃತೂರು ಹೋಬಳಿಯಲ್ಲಿ ಮೂರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಮನೆ ಮತ್ತು ಕಾರ್ಯ ನಿರ್ವಹಿಸುತ್ತಿರುವ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಪ್ರಾಥಮಿಕ ಸಂಪರ್ಕದವರನ್ನು ಪತ್ತೆಹಚ್ಚಿ ಮಲ್ಲನಾಯಕಹಳ್ಳಿಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಜಿನ್ನಾಗರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್‌ಗೆ ಸೋಂಕು ದೃಢವಾಗಿದೆ.  ಇಬ್ಬರೂ ಅಮೃತೂರು ಹೋಬಳಿಯ ಸೆಭನ ಮತ್ತು ಶೆಟ್ಟಿಪುರದ ನಿವಾಸಿಗಳಾಗಿದ್ದಾರೆ.

ದೊಡ್ಡಕಲ್ಲಹಳ್ಳಿಯ 10ನೇ ತರಗತಿ ವಿದ್ಯಾರ್ಥಿಗೆ ಸೋಂಕು ಧೃಢವಾಗಿದೆ. ಬಾಲಕನ ಸಂಬಂಧಿ ಬೆಂಗಳೂರಿನಿಂದ ಈಚೆಗೆ ದೊಡ್ಡಕಲ್ಲಹಳ್ಳಿ ಗ್ರಾಮಕ್ಕೆ ಬಂದು ಹೋಗಿದ್ದರು. ಬೆಂಗಳೂರಿನಲ್ಲಿ ಅವರಿಗೆ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದಾಗ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆ ಮಹಿಳೆಯ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಬಾಲಕನಿಗೂ ಕ್ವಾರಂಟೈನ್ ಮಾಡಲಾಗಿತ್ತು. ಗಂಟಲು ಸ್ರಾವ ಪಡೆದು ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ಅಮೃತೂರು ಕೇಂದ್ರದಲ್ಲಿ ಪರೀಕ್ಷೆ ಸಹ ಬರೆದಿದ್ದಾನೆ.

ಬಾಲಕನ ಜತೆ ಇತರೆ ಮೂರು ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, ಗ್ರಾಮದಿಂದ ಪರೀಕ್ಷಾ ಕೇಂದ್ರಕ್ಕೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಬಂದಿದ್ದಾರೆ. ಇದರಿಂದಾಗಿ ಈ ಭಾಗದವರಲ್ಲಿ ಆತಂಕ ಮೂಡಿದೆ.

‘ವಿದ್ಯಾರ್ಥಿಯ ಗಂಟಲು ಸ್ರಾವ ಪರೀಕ್ಷೆಗೆ ಒಳಪಡಿಸಿದ್ದರ ಬಗ್ಗೆ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ನೀಡರಲಿಲ್ಲ. ಆದರೂ
ಬಾಲಕನಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು