ತುಮಕೂರು: ಉದಾರೀಕರಣ ನೀತಿ ನಮ್ಮ ಕೃಷಿಯ ಮೂಲ ಉದ್ದೇಶವನ್ನೇ ಮರೆಮಾಚಿದೆ. ನಾವು ದೇಶಿ ಅಸ್ಮಿತೆ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದೇವೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಸಂಯೋಜಕ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.
ತಾಲ್ಲೂಕಿನ ದೊಡ್ಡಹೊಸೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಕುಲಾಂತರಿ ತಳಿಯ ಆಹಾರದ ವಿರುದ್ಧ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ಕೈಗಾರಿಕಾ ಕ್ರಾಂತಿಯ ದುಷ್ಪರಿಣಾಮದಿಂದ ಕೃಷಿ ಹಣ ಮಾಡುವ ಕ್ಷೇತ್ರವಾಗಿ ಮಾರ್ಪಟ್ಟಿದೆ. ರೈತರು ಬಂಡವಾಳಗಾರರಾಗಿ ರೂಪುಗೊಳ್ಳುತ್ತಿದ್ದಾರೆ. ಸರ್ಕಾರಗಳು ರೈತರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕೃಷಿಯಲ್ಲಿ ಜೀವ ವಿರೋಧಿ ತಂತ್ರಜ್ಞಾನ ಪ್ರಯೋಗಿಸಿ ದ್ರೋಹ ಎಸಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರಗಳು ಸಂವೇದನಾ ಶೀಲತೆ ಕಳೆದುಕೊಂಡಿವೆ. ಜನರಿಂದ ಜನರಿಗಾಗಿ ಪ್ರಜಾಪ್ರಭುತ್ವ ಎನ್ನುವ ತತ್ವ ಬದಲಾಗಿ ಕಾರ್ಪೋರೇಟ್‌ಗಳಿಂದ, ಕಾರ್ಪೋರೇಟ್‍ಗಳಿಗಾಗಿ ಎಂದಾಗಿದೆ. ವಿದೇಶಿ ಕಂಪನಿಗಳ ಒತ್ತಡಕ್ಕೆ ಸರ್ಕಾರಗಳು ಮಣಿಯುತ್ತಿದ್ದು, ರಾಷ್ಟ್ರೀಯವಾದ ಅನುಸರಿಸುತ್ತಿರುವ ನಾಯಕರೂ ಕಂಪನಿಗಳ ಪರವಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ‘ತಲೆ ತಲಾಂತರದಿಂದ ಬಂದಿರುವ ಕೃಷಿ ಹಾಗೂ ಅದರ ಪ್ರಾಮುಖ್ಯತೆ ನಾಶ ಮಾಡಲಾಗುತ್ತಿದೆ. ಕುಲಾಂತರಿ ಮುಕ್ತ ಭಾರತ ಸತ್ಯಾಗ್ರಹಕ್ಕೆ ಮಠ–ಮಾನ್ಯ, ಕನ್ನಡಪರ ಸಂಘಟನೆಗಳು, ಕೃಷಿ ಉತ್ಪನ್ನ ಬಳಕೆದಾರರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಪಶ್ಚಿಮಘಟ್ಟ ಉಳಿಸಿ ಆಂದೋಲದ ಸಿ.ಪಿ.ಮಾಧವನ್, ಪರಿಸರ ಹೋರಾಟಗಾರ ಬಾಲಕೃಷ್ಣ, ಗಾಂಧಿವಾದಿ ದೊರೆಸ್ವಾಮಿ, ಪರಿಸರವಾದಿ ಸಿ.ಯತಿರಾಜು, ವಿಜ್ಞಾನಿ ಮಂಜುನಾಥ್ ಇತರರು ಹಾಜರಿದ್ದರು.