ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವಿಶ್ವಾಸ’ ರಾಜಕಾರಣ ಶುರು

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
Last Updated 12 ಸೆಪ್ಟೆಂಬರ್ 2020, 1:22 IST
ಅಕ್ಷರ ಗಾತ್ರ

ಶಿರಾ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಲ್ಲೂಕಿನ ತಾವರೆಕೆರೆ ಜಿ.ಪಂ ಕ್ಷೇತ್ರದಿಂದ ಆಯ್ಕೆಯಾಗಿರುವ ಲತಾ ಅವರು 4 ವರ್ಷದಿಂದ ಜಿ.ಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಟ್ಟಾಗಿ ಅವಿಶ್ವಾಸ ಮಂಡಿಸಿರುವುದು ಚರ್ಚೆಗೆ ಕಾರಣವಾಗಿದೆ.

ತಾಲ್ಲೂಕಿನಿಂದ 4 ಮಂದಿ ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಈಗ ಅವರದೇ ಪಕ್ಷದ ಅಧ್ಯಕ್ಷೆಯನ್ನು ಇಳಿಸಲು ಮುಂದಾಗಿದ್ದಾರೆ. ಶಿರಾ ಉಪಚುನಾವಣೆ ಇರುವುದರಿಂದ ಜೆಡಿಎಸ್ ಪರವಾಗಿ ಕೆಲಸ ಮಾಡಬೇಕಿರುವ ಜಿ.ಪಂ ಸದಸ್ಯರು ಬಿಜೆಪಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅವಿಶ್ವಾಸಕ್ಕೆ ಸಹಿ ಹಾಕಿದ್ದಾರೆ ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿ ಹರಿದಾಡುತ್ತಿವೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಜೆಡಿಎಸ್, ಬಿಜೆಪಿ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ಆದರೆ ಈಗ ಅಧ್ಯಕ್ಷರ ವಿರುದ್ಧ ಮಾತ್ರ ಏಕೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಉಪಾಧ್ಯಕ್ಷರ ವಿರುದ್ಧ ಏಕಿಲ್ಲ ಎನ್ನುವ ಪ್ರಶ್ನೆಯೂ ಮೂಡಿದೆ.

ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಅಧ್ಯಕ್ಷರ ಪತಿ ಕಲ್ಕೆರೆ ರವಿಕುಮಾರ್ ಜೆಡಿಎಸ್ ಆಕಾಂಕ್ಷಿಯಾಗಿದ್ದು, ಅವರನ್ನು ಮಾನಸಿಕವಾಗಿ ಕುಗ್ಗಿಸಲು ಜೆಡಿಎಸ್ ಸದಸ್ಯರು ಬಿಜೆಪಿ ಜತೆ ಸೇರಿ ಸಂಚು ಮಾಡಿಸಿದ್ದಾರೆ. ಇಷ್ಟು ದಿನ ಸುಮ್ಮನೆ ಇದ್ದ ಬಿಜೆಪಿ ಈಗ ಏಕಾಏಕಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ಏಕೆ? ಎನ್ನುವ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ.

ಶಿರಾ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದ ಮತಗಳನ್ನು ಸೆಳೆಯಲು ಕುರುಬ ಸಮುದಾಯದ ಲತಾ ಅವರನ್ನು ಕೆಳಗೆ ಇಳಿಸಿ ಕಾಡುಗೊಲ್ಲ ಸಮುದಾಯದವರಿಗೆ ಬಿಜೆಪಿ ಅಧಿಕಾರ ನೀಡಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿಗೆ ಸೆಳೆಯಲು ಪ್ರಯತ್ನ

‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಕುತಂತ್ರದಿಂದ ಜಿ.ಪಂ ಅಧ್ಯಕ್ಷರನ್ನು ಕೆಳಗಿಳಿಸಲು ಮುಂದಾಗಿದ್ದಾರೆ. ನಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಉಪಾಧ್ಯಕ್ಷರ ಜತೆ ಸೇರಿ ರಾಜೀನಾಮೆ ನೀಡುವಂತೆ ಜೆಡಿಎಸ್, ಬಿಜೆಪಿ ಮುಖಂಡರು ಹೇಳಿದ್ದರೆ ಸಂತೋಷದಿಂದ ಕೊಡುತ್ತಿದೆವು. ನಾನು ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಬಿಜೆಪಿಗೆ ಸೆಳೆಯಲು ಪ್ರಯತ್ನ ನಡೆಸಿದ್ದರು. ಅದಕ್ಕೆ ಒಪ್ಪದಿದ್ದಾಗ ಮಾನಸಿಕವಾಗಿ ಕುಗ್ಗಿಸಲು ಈ ಅವಿಶ್ವಾಸದ ನಾಟಕ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಕಲ್ಕೆರೆ ರವಿಕುಮಾರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT