ಗುರುವಾರ , ಫೆಬ್ರವರಿ 20, 2020
21 °C

ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ ಎಸಿಬಿ ಡಿವೈಎಸ್ಪಿ ರಘುಕುಮಾರ್ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಡಿವೈಎಸ್ಪಿ ವಿ.ರಘುಕುಮಾರ್ ಅವರು ಹೊಸಪೇಟೆ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

2018 ರ ಅಕ್ಟೋಬರ್‌ನಲ್ಲಿ ತುಮಕೂರು ಎಸಿಬಿ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ರಘುಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟ ಹಲವರನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಎಸಿಬಿ ಬಲೆಗೆ ಕೆಡವಿದ್ದರು.

ಅಲ್ಲದೇ ತಾಲ್ಲೂಕು ಹಂತದಲ್ಲಿ ಜನಸಂಪರ್ಕ ಸಭೆಗಳನ್ನು ಪದೇ ಪದೇ ನಡೆಸುವ ಮೂಲಕ ಜನರಲ್ಲಿ ಎಸಿಬಿ‌ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಿದ್ದರು.‌

ಸಾರ್ವಜನಿಕ ದೂರುಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಿದ್ದರು. ಇದರಿಂದ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ದಕ್ಷ ಎನ್ನುವ ಅಭಿಪ್ರಾಯ ಇದೆ. ಈ ಅಭಿಪ್ರಾಯ ಮತ್ತು ದಾಳಿಗಳು ಎಸಿಬಿಗೆ ಜನರು ಹೆಚ್ಚು ದೂರುಗಳನ್ನು ಕೊಡಲು ಕಾರಣವಾಯಿತು.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಪಟೂರಿನ ಸರ್ಕಾರಿ ಸಹಾಯಕ ಅಭಿಯೋಜಕಿಯನ್ನು ಎಸಿಬಿ ಬಲೆಗೆ ಕೆಡವಿದ್ದು,ರಾಜ್ಯ ಮಟ್ಟದಲ್ಲಿ ಸುದ್ದಿ ಆಗಿತ್ತು. ಅವರ ಕಚೇರಿಗೆ ದೂರುಗಳನ್ನು ಹೊತ್ತು ಸಾರ್ವಜನಿಕರು ನಿತ್ಯವೂ ಬರುತ್ತಿದ್ದರು.

ಅಧಿಕಾರ ವಹಿಸಿಕೊಂಡ ಒಂದೆರಡು ದಿನಗಳಲ್ಲಿಯೇ ಸರ್ಕಾರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿವಿಧ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಎಸಿಬಿ ನಾಮಫಲಕ ಅಳವಡಿಸುವಂತೆ ಸೂಚಿಸಿದ್ದರು‌.‌ ಅಲ್ಲದೇ ಆಗಾಗ ಈ ಬಗ್ಗೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗಾವಹಿಸಿದ್ದರು.

ಕೆಲ ಉದಾಹರಣೆಗಳು: ಬೆಳೆ ಸಾಲ ಮೊತ್ತ ₹50 ಸಾವಿರದ ಚೆಕ್ ನೀಡಲು ₹5 ಸಾವಿರ ಲಂಚ ಪಡೆಯುತ್ತಿದ್ದ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಓಂಕಾರಮೂರ್ತಿ ಅವರನ್ನು ಬಲೆಗೆ ಕೆಡವಿದ್ದರು.

ತುಮಕೂರಿನಲ್ಲಿ ಎಲೆಕ್ಟ್ರಿಕ್ ಗುತ್ತಿಗೆದಾರರ ಲೈಸೆನ್ಸ್ ನವೀಕರಣಕ್ಕೆ ₹10 ಸಾವಿರ ಲಂಚ ಪಡೆಯುತ್ತಿದ್ದ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಕಚೇರಿಯ ಸಿಬ್ಬಂದಿ ಶಿವಮೂರ್ತಿ ಅವರು ಇವರ ಬಲೆಗೆ ಸಿಕ್ಕಿಬಿದ್ದಿದ್ದರು.

ಅದೇ ರೀತಿ ಮಧುಗಿರಿಯಲ್ಲಿ ದಾನಪತ್ರವನ್ನು ನೋಂದಣಿ ಮಾಡಿಕೊಡಲು ₹4 ಸಾವಿರ ಲಂಚ ಪಡೆಯುತ್ತಿದ್ದ ಉಪನೋಂದಣಿ ಅಧಿಕಾರಿ ರಾಮಚಂದ್ರಯ್ಯ ಹಾಗೂ ಪತ್ರ ಬರಹಗಾರ ರಂಗನಾಥ್ ಅವರನ್ನು ಎಸಿಬಿ ಬಲೆಗೆ ಕೆಡಿವಿದ್ದರು.

ಹೀಗೆ, ಹಲವಾರು ಪ್ರಕರಣಗಳು ಸಾರ್ವಜನಿಕರ ಗಮನ ಸೆಳೆದಿದ್ದವು. ಎಸಿಬಿ ಅಧಿಕಾರಿಗಳು ಜನಸ್ನೇಹಿಯಾಗಿ ಸಕ್ರಿಯವಾಗಿ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಈ ಅಧಿಕಾರಿ ಉದಾರಣೆ ಎಂದು ದೂರು ಕೊಟ್ಟು ಪರಿಹಾರ ಕಂಡುಕೊಂಡ ಅನೇಕರು ಶ್ಲಾಘಿಸಿದ ಉದಾಹರಣೆಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು