ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ಮೈಕ್ರೊ ಫೈನಾನ್ಸ್‌ನಿಂದ ದಬ್ಬಾಳಿಕೆ ಆರೋಪ: ನಾಳೆ ದಸಂಸ ಪ್ರತಿಭಟನೆ

Published 30 ಜೂನ್ 2024, 13:53 IST
Last Updated 30 ಜೂನ್ 2024, 13:53 IST
ಅಕ್ಷರ ಗಾತ್ರ

ತಿಪಟೂರು: ಮೈಕ್ರೊ ಫೈನಾನ್ಸ್ ಕಂಪನಿಗಳು ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜುಲೈ 1ರಂದು ಬೆಳಿಗ್ಗೆ ಕೆಂಪಮ್ಮ ದೇವಿ ದೇಗುಲ ಆವರಣದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು.

ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯವರು ಫೈನಾನ್ಸ್ ಕಚೇರಿಗಳನ್ನು ನಡೆಸುತ್ತಾ ಜನರಿಗೆ, ಬಡವರಿಗೆ ಆರ್ಥಿಕ ನೆರವು ನೀಡುತ್ತೇವೆ ಎನ್ನುತ್ತ ಗ್ರಾಮೀಣ ಪ್ರದೇಶದಲ್ಲಿ ಜನರ ಗುಂಪುಗಳನ್ನು ರಚಿಸಿ ಮುಗ್ಧ ಜನರನ್ನು ನಂಬಿಸಿ ಮಹಿಳಾ ಗುಂಪುಗಳಿಗೆ ಮೈಕ್ರೋಫೈನಾನ್ಸ್‌ ಹಣವನ್ನು ಬಡ್ಡಿಗೆ ಕೊಟ್ಟು ಗ್ರಾಮೀಣ ಮಹಿಳೆಯನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.

ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದು, ಅಪಮಾನ ತಾಳಲಾರದೆ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಎಷ್ಟೂ ಕುಟುಂಬಗಳು ಅಪಮಾನ ತಾಳಲಾರದೆ ಗ್ರಾಮಗಳನ್ನು ಬಿಟ್ಟು ತಲೆಮರಿಸಿಕೊಳ್ಳುವ ಸ್ಥಿತಿ ಎದುರಾಗಿದೆ ಎಂದರು.

ದೌರ್ಜನ್ಯ ಹಾಗೂ ದಬ್ಬಾಳಕೆ ಮಾಡುತ್ತಿರುವ ಮೈಕ್ರೊ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದು ಮಾಡಬೇಕು. ದೌರ್ಜನ್ಯ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಜಕ್ಕನಹಳ್ಳಿ ಮೋಹನ್, ಮಹಿಳಾ ಘಟಕದ ಸಂಚಾಲಕಿ ಮಂಜುಳಾ, ನಂದಿನಿ, ಸಂಘಟನಾ ಸಂಚಾಲಕರಾದ ಸುರೇಶ್, ಅಣ್ಣಪ್ಪ, ರಮೇಶ್ ಎಸ್.ಸಿ ಶಿವಪುರ, ಕೀರ್ತಿ ಹತ್ಯಾಳು, ರಘು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT