ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ರೈತ ಮಹಿಳೆ ಮೇಲೆ ದೌರ್ಜನ್ಯ ಆರೋಪ: ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

Published 29 ಜನವರಿ 2024, 14:36 IST
Last Updated 29 ಜನವರಿ 2024, 14:36 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಕಡಪಲಕೆರೆ ರೈತ ಮಹಿಳೆಯ ಮೇಲೆ ಸೋಲಾರ್ ಕಂಪನಿಯವರು, ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈತರು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಕಡಪಲಕೆರೆ ಗ್ರಾಮದ ಬಳಿಯ ಸೋಲಾರ್ ಕಂಪನಿಯವರು ಅನಗತ್ಯವಾಗಿ ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ತಾವು ಹೇಳಿದಂತೆ ಕೇಳದ ರೈತರ ಮೇಲೆ ಪೊಲೀಸರಿಗೆ ದೂರು ನೀಡಿ ಠಾಣೆಗೆ ಕರೆಸಿ ಬೆದರಿಕೆ ಹಾಕಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಲಕ್ಷ್ಮಿದೇವಮ್ಮ ಎಂಬ ಮಹಿಳೆ ಜಮೀನಿನಲ್ಲಿ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೂಲಕ ಕಂಪನಿಯವರು ಕಂಪನಿಯ ವಾಹನದಲ್ಲಿ ಜೈಲಿಗೆ ಕಳುಹಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ವಿಳಂಬ ಧೋರಣೆ ಅನುಸರಿಸುವ ಪೊಲೀಸರು ಸೋಲಾರ್ ಕಂಪನಿಯವರು ಕರೆದ ಕೂಡಲೇ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸುವುದೇಕೆ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.

ಸಿವಿಲ್ ವ್ಯಾಜ್ಯಗಳಲ್ಲಿ ಅನಗತ್ಯವಾಗಿ ತಲೆ ಹಾಕಬಾರದು ಎಂದು ನ್ಯಾಯಾಲಯ, ಉನ್ನತ ಅಧಿಕಾರಿಗಳ ಅದೇಶವಿದ್ದರೂ ಸೋಲಾರ್ ಪಾರ್ಕ್ ವಿಚಾರವಾಗಿ ಪೊಲೀಸರು ಮಧ್ಯಪ್ರವೇಶಿಸುತ್ತಿದ್ದಾರೆ. ಇಂತಹವರ ವಿರುದ್ಧ ಮುಖ್ಯಮಂತ್ರಿ, ಗೃಹಮಂತ್ರಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗುವುದು. ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ರೈತ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಮಂಜುನಾಥ್, ಈರಣ್ಣ, ಕೃಷ್ಣರಾವ್, ನರಸಪ್ಪ, ಸಿದ್ದಪ್ಪ, ಲಕ್ಷ್ಮಾನಾಯ್ಕ, ರಾಮಾಂಜಿ, ಶಿವು, ಓಬಳಪ್ಪ, ದುರ್ಗಪ್ಪ, ಕದುರಪ್ಪ, ಹನುಮಂತರಾಯಪ್ಪ, ಲಕ್ಷ್ಮಿದೇವಿ, ಗುಡಪಲ್ಲಪ್ಪ, ಚಿತ್ತಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT