ಶನಿವಾರ, ಸೆಪ್ಟೆಂಬರ್ 25, 2021
24 °C
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲರೂ ತೇರ್ಗಡೆ l ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಹೆಚ್ಚಿದ ಬೇಡಿಕೆ

ತುಮಕೂರು: ಪಿಯು ಕಾಲೇಜಿಗೂ ಪ್ರವೇಶ ಸವಾಲು

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪರಿತಪಿಸುತ್ತಿರುವುದರ ನಡುವೆ, ಈಗ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಆರಂಭವಾಗಿದೆ.

ಒಮ್ಮೆಲೆ ಹೆಚ್ಚಿನ ಮಕ್ಕಳು ಅವಕಾಶ ಕೇಳುತ್ತಿರುವುದು ಕಾಲೇಜು ಆಡಳಿತ ಮಂಡಳಿಗೆ ತಲೆ ಬಿಸಿಯಾಗಿದೆ. ಪ್ರತಿಷ್ಠಿತ ಕಾಲೇಜುಗಳು ಅಂಕಗಳ ಮಿತಿ ಮುಂದೆ ಮಾಡಿಕೊಂಡು ಪ್ರವೇಶ ನಿಯಂತ್ರಿಸುವ ಕೆಲಸ ಮಾಡುತ್ತಿದ್ದರೆ, ಕನಿಷ್ಠ ಸಂಖ್ಯೆಯ ದಾಖಲಾತಿಯೂ ಇಲ್ಲದೆ ಮುಚ್ಚುವ ಸ್ಥಿತಿಗೆ ಬಂದಿದ್ದ ಕಾಲೇಜುಗಳು ಬಂದವರಿಗೆಲ್ಲ ಬಾಗಿಲು ತೆರೆದು ಆಹ್ವಾನ ನೀಡುತ್ತಿವೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲರೂ ತೇರ್ಗಡೆಯಾಗಿದ್ದು, ಅಷ್ಟೂ ಮಕ್ಕಳಿಗೆ ಕಾಲೇಜುಗಳಲ್ಲಿ ಪ್ರವೇಶ ನೀಡುವುದು ದೊಡ್ಡ ಸವಾಲಾಗಿದೆ. ಈಗ ಇರುವ ಪ್ರವೇಶ ಸಾಮರ್ಥ್ಯ, ಮೂಲ ಸೌಕರ್ಯ, ಉಪನ್ಯಾಸಕರ ಸಂಖ್ಯೆ, ಮತ್ತಿತರ ವಿಚಾರಗಳನ್ನು ಗಮನಿಸಿದರೆ ಪಾಸಾಗಿರುವ ಎಲ್ಲರಿಗೂ ಪ್ರವೇಶ ನೀಡುವುದು ಕಷ್ಟಕರವಾಗಲಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸಿಕೊಂಡರೆ ಮಾತ್ರ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ.

ಹೆಚ್ಚಿನ ಮಕ್ಕಳು ವಿಜ್ಞಾನವೇ ಬೇಕು, ಇಲ್ಲವೆ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಸಲ್ಲಿಸಿದರೆ ಪ್ರವೇಶ ಸಿಗುವುದಿಲ್ಲ. ಕಲಾ, ವಿಜ್ಞಾನ, ವಾಣಿಜ್ಯ, ಐಟಿಐ ಸೇರಿದಂತೆ ಇತರ ಕೋರ್ಸ್‌ಗಳಿಗೆ ಹಂಚಿಕೆ ಮಾಡಿದರೆ ಮಾತ್ರ ಅಲ್ಪ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಯಾವುದಾದರೂ ಒಂದು ಕೋರ್ಸ್‌ಗೆ ಬೇಡಿಕೆ ಹೆಚ್ಚಾದರೆ ಸಮಸ್ಯೆ ತಲೆದೋರುತ್ತದೆ. ಇಂತಹುದೇ ಕಾಲೇಜಿನಲ್ಲಿ, ಇಂತಹುದೇ ಕೋರ್ಸ್‌ಗೆ ಪ್ರವೇಶ ಬಯಸಿದರೆ ಬೇಡಿಕೆಗೆ ತಕ್ಕಷ್ಟು ಸೀಟುಗಳು ಲಭ್ಯವಾಗುವುದಿಲ್ಲ. ಸಾಮರ್ಥ್ಯವನ್ನು ಮೀರಿ ಪ್ರವೇಶ ನೀಡುವುದು ಎಂತಹ ಕಾಲೇಜಿಗೂ ಕಷ್ಟಕರವಾಗುತ್ತದೆ. ಈಗ ಅಂತಹುದೇ ಪರಿಸ್ಥಿತಿ ಎದುರಾಗಿದೆ.

ಹಿಂದಿನ ವರ್ಷ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ 50 ಸಾವಿರ ಮಕ್ಕಳು (ಪ್ರಥಮ– ದ್ವಿತೀಯ ವರ್ಷ) ಕಲಿಯುತ್ತಿದ್ದರು. ಅಂದರೆ ಪ್ರಥಮ ಪಿಯುಸಿಗೆ ಸುಮಾರು 25 ಸಾವಿರ ಮಕ್ಕಳಿಗೆ ಪ್ರವೇಶ ನೀಡುವ ಸಾಮರ್ಥ್ಯವನ್ನು ಕಾಲೇಜುಗಳು ಹೊಂದಿವೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಗಮನಿಸಿದರೆ ಈ ಬಾರಿ ಹೆಚ್ಚುವರಿಯಾಗಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ.

ವಿದ್ಯಾರ್ಥಿಗಳ ಕೊರತೆ: ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪೋಷಕರು, ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳತ್ತ ಮುಖಮಾಡಿದ್ದು, ಮಧ್ಯಮ ದರ್ಜೆ, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿತ್ತು. ಕೆಲವು ಕಡೆಗಳಲ್ಲಿ ಕಾಲೇಜುಗಳನ್ನು ಮುಚ್ಚುವಂತ ಸ್ಥಿತಿ ನಿರ್ಮಾಣವಾಗಿತ್ತು. 100 ಮಕ್ಕಳಿಗೆ ಪ್ರವೇಶ ನೀಡುವ ಸಾಮರ್ಥ್ಯ ಇದ್ದರೂ ಕೇವಲ 25–30 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಸೀಟುಗಳು ಖಾಲಿ ಉಳಿದುಕೊಳ್ಳುತ್ತಿದ್ದವು. ಹಾಗಾಗಿ ಈ ಬಾರಿ ಅಂತಹ ಕಾಲೇಜುಗಳು ಭರ್ತಿಯಾಗಲಿವೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿವರಣೆ.

ಖಾಸಗಿ ಶಾಲೆಗಳಲ್ಲಿ ಒಂದು ವಿಭಾಗಕ್ಕೆ 80 ಮಕ್ಕಳಿಗೆ ಪ್ರವೇಶ ನೀಡಲು ಅವಕಾಶವಿದೆ. ಕೋವಿಡ್ ಸಮಯದಲ್ಲಿ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅನುಮತಿ ನೀಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ವಿಭಾಗ ತೆರೆಯಬಹುದು. ಹೊಸ ಕಾಂಬಿನೇಷನ್‌ಗೂ ಮಾನ್ಯತೆ ಕೊಡಲಾಗುವುದು. ಹೊಸದಾಗಿ ಕಾಲೇಜು ಆರಂಭಿಸುವವರಿಗೂ ಅವಕಾಶವಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ತಿಳಿಸಿದರು.

ಎಲ್ಲರಿಗೂ ಪ್ರವೇಶ ಸಿಗುತ್ತದೆ
ಇಂತಹುದೇ ಕಾಲೇಜಿನಲ್ಲಿ ಪ್ರವೇಶ ಬೇಕು ಎಂದರೆ ಕಷ್ಟಕರವಾಗುತ್ತದೆ. ಆದರೆ ಯಾವುದಾದರೂ ಕಾಲೇಜಿನಲ್ಲಿ ಅವಕಾಶ ಮಾಡಿಕೊಡಬಹುದು. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ಯಾವುದೇ ಮಿತಿ ಇಲ್ಲ. ಎಷ್ಟು ಮಕ್ಕಳು ಬಂದರೂ ಪ್ರವೇಶ ನೀಡಲಾಗುತ್ತದೆ. ಯಾವ ವಿದ್ಯಾರ್ಥಿಯೂ ಪ್ರವೇಶದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು.
-ಎಚ್.ಕೆ.ನರಸಿಂಹಮೂರ್ತಿ, ಪಿಯು ಡಿಡಿ

ದಾಖಲಾತಿ ಆರಂಭ
ಈಗಾಗಲೇ ದಾಖಲಾತಿ ಪ್ರಾರಂಭಿಸಿದ್ದು, ಎಷ್ಟೇ ವಿದ್ಯಾರ್ಥಿಗಳು ಬಂದರೂ ಪ್ರವೇಶ ನೀಡಲಾಗುವುದು. ಉಪನ್ಯಾಸಕರ ಕೊರತೆಯಿದ್ದು, ಅತಿಥಿ ಉಪನ್ಯಾಸಕರ ಮೂಲಕ ತರಗತಿ ನಡೆಸಲಾಗುವುದು.
-ಶೇಖರಯ್ಯ, ಪ್ರಾಂಶುಪಾಲ, ಸರ್ಕಾರಿ ಪದವಿಪೂರ್ವ ಕಾಲೇಜು, ತಿಪಟೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.