ಶನಿವಾರ, ಮೇ 28, 2022
31 °C
ಅದಾಲತ್‌ನಿಂದ ಕಕ್ಷಿದಾರರ ಸಮಯ, ಹಣ ಉಳಿತಾಯ

ಗುಬ್ಬಿ: ಲೋಕ ಅದಾಲತ್‌ ಸದ್ಬಳಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ‘ಕಕ್ಷಿದಾರರ ಹಣ, ಸಮಯ ಉಳಿಸುವ ಜೊತೆಗೆ ತ್ವರಿತ ನ್ಯಾಯ ಒದಗಿಸುವ ಉದ್ದೇಶದಿಂದ ಡಿ. 18ರಂದು ಬೃಹತ್ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ತಿಳಿಸಿದರು.

ಮಂಗಳವಾರ ಪಟ್ಟಣದ ನ್ಯಾಯಾಲಯದಲ್ಲಿ ಲೋಕ ಅದಾಲತ್ ಬಗ್ಗೆ ಅವರು ಮಾಹಿತಿ ನೀಡಿದರು.

ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವುದೇ ಕಾನೂನು ಸೇವಾ ಪ್ರಾಧಿಕಾರದ ಗುರಿ. ಕಕ್ಷಿದಾರರು ನ್ಯಾಯಾಲಯದಲ್ಲಿ ವರ್ಷಗಟ್ಟಲೆ ಅಲೆದರೂ ಪರಿಹಾರ ವಿಳಂಬವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನತಾ ನ್ಯಾಯಾಲಯಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನತಾ ನ್ಯಾಯಾಲಯದಲ್ಲಿ ಎಲ್ಲಾ ರೀತಿಯ ಸಿವಿಲ್ ಸ್ವರೂಪದ ವ್ಯಾಜ್ಯಗಳ ಜೊತೆಗೆ ಸಂಧಾನ ಮಾಡಬಹುದಾದ ಕ್ರಿಮಿನಲ್ ದಾವೆಗಳನ್ನು ಇತ್ಯರ್ಥಗೊಳಿಸಲಾಗುವುದು. ಎಲ್ಲಾ ಇಲಾಖೆಯ ಮುಖ್ಯಸ್ಥರನ್ನು ಕರೆಸಿ ಇಲಾಖೆಗಳಿಗೆ ಸಂಬಂಧಿಸಿದ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿ ಸಾಲ ತೀರುವಳಿ ವ್ಯಾಜ್ಯಗಳನ್ನು ಬಗೆಹರಿಸಲಾಗುವುದು. ಹೇಮಾವತಿ ಭೂಸ್ವಾಧೀನಾಧಿಕಾರಿ ಜೊತೆ ಚರ್ಚಿಸಿ ₹ 5 ಲಕ್ಷಕ್ಕಿಂತ ಕಡಿಮೆ ಇರುವ ಪರಿಹಾರವನ್ನು ತಕ್ಷಣ ಭೂಮಿ ಕಳೆದುಕೊಂಡವರಿಗೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಜೊತೆಗೆ ವಿವಾಹ ವಿಚ್ಛೇದನ, ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.‌

ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಯು ಉತ್ತಮ ನಿರ್ಧಾರ ಕೈಗೊಂಡಿದೆ. ವಕೀಲರು ತಮ್ಮ ಕಕ್ಷಿದಾರರ ಮನವೊಲಿಸಿ ರಾಜೀ ಸಂಧಾನದ ಮೂಲಕ ಹೆಚ್ಚು ದಾವೆಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ನ್ಯಾಯಾಧೀಶರಾದ ಶಿವರಾಜ್ ವಿ. ಸಿದ್ದೇಶ್ವರ್, ಪ್ರೇಮ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ನಾರಾಯಣ್
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು