ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು – ಯಶವಂತಪುರ ಮೆಮು ರೈಲು ಸಂಚಾರಕ್ಕೆ ಒಪ್ಪಿಗೆ

Published 3 ಸೆಪ್ಟೆಂಬರ್ 2024, 15:52 IST
Last Updated 3 ಸೆಪ್ಟೆಂಬರ್ 2024, 15:52 IST
ಅಕ್ಷರ ಗಾತ್ರ

ತುಮಕೂರು: ನಗರದ ಜನತೆಯ ಬಹುದಿನಗಳ ಬೇಡಿಕೆಯಾದ ತುಮಕೂರು– ಯಶವಂತಪುರ (ಬೆಂಗಳೂರು) ನಡುವೆ ಮೆಮು ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ತುಮಕೂರಿನಿಂದ ಬೆಳಿಗ್ಗೆ 8.55 ಗಂಟೆಗೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.40ಕ್ಕೆ ಹೊರಟು ರಾತ್ರಿ 7.05ಕ್ಕೆ ತುಮಕೂರು ತಲುಪಲಿದೆ. ಭಾನುವಾರ ಸಂಚಾರ ಇರುವುದಿಲ್ಲ. ಪ್ರತಿ ಸೋಮವಾರ ವಿಶೇಷ ಮೆಮು ರೈಲು ಬಾಣಸವಾಡಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ರೈಲು ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಟು, 10.05ಕ್ಕೆ ಬಾಣಸವಾಡಿ ತಲುಪಲಿದೆ.

ಕ್ಯಾತ್ಸಂದ್ರ, ಹೀರೇಹಳ್ಳಿ, ದಾಬಸ್‍ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ತುಮಕೂರು– ಬೆಂಗಳೂರು ನಡುವೆ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸುವಂತೆ ಜನರು ಒತ್ತಡ ಹಾಕಿದ್ದರು. ಇದಕ್ಕೆ ಸ್ಪಂದನೆ ಸಿಕ್ಕಿದೆ. ಸಚಿವ ವಿ.ಸೋಮಣ್ಣ ಅವರು ಮೆಮು ರೈಲು ಸಂಚಾರಕ್ಕೆ ಒಪ್ಪಿಗೆ ಕೊಡಿಸಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದ್ದಾರೆ.

ಸಬ್ ವೇ: ನಗರದ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ ಹಾಗೂ ನಗರದ ಹೊರ ವಲಯದ ಭೀಮಸಂದ್ರ ಬಳಿ ರೈಲ್ವೆ ಕೆಳ ಸೇತುವೆ (ಲಘು ವಾಹನ ಸಂಚಾರ) ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಶೆಟ್ಟಿಹಳ್ಳಿ ಗೇಟ್ ಪಾದಚಾರಿ ಸಬ್ ವೇ ಕಾಮಗಾರಿಗೆ ₹2.48 ಕೋಟಿ ಹಾಗೂ ಭೀಮಸಂದ್ರದ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ₹1.87 ಕೋಟಿ ಮಂಜೂರಾಗಿದೆ. ಕಳೆದ ಒಂದು ದಶಕದಿಂದ ಭೀಮಸಂದ್ರ ಹಳೇ ಗ್ರಾಮದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈಗ ಪರಿಹಾರ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT