ತುರುವೇಕೆರೆ: ಮೂರ್ನಾಲ್ಕು ದಿನಗಳಿಂದ ಮಳೆ ಬಿಡುವ ನೀಡಿದ್ದು, ತಾಲ್ಲೂಕಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಂಡಿವೆ.
ರಾಗಿ ತಾಲ್ಲೂಕಿನ ಪ್ರಧಾನ ಆಹಾರ ಬೆಳೆ. ಕಳೆದ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಬಿತ್ತನೆಯೂ ಕ್ಷೀಣವಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಮತ್ತು ಹಿಂಗಾರಿನಲ್ಲಿ ಒಳ್ಳೆಯ ಮಳೆಯಾಗಿತ್ತು. ಹೆಸರು, ಅಲಸಂದೆ ಬಿತ್ತನೆ ಕಡಿಮೆಯಾಗಿತ್ತು. ತಾಲ್ಲೂಕಿನಲ್ಲಿ 19,700 ಹೆಕ್ಟೇರ್ ಪ್ರದೇಶದಲ್ಲಿ ಶೇ 114ರಷ್ಟು ರಾಗಿ ಬೆಳೆಯನ್ನು ರೈತರು ಈಗಾಗಲೇ ಬಿತ್ತನೆ ಮಾಡಿದ್ದು, ಇದು ದಾಖಲೆಯ ಬಿತ್ತನೆಯಾಗಿದೆ.
ಎರಡು ದಿನಗಳಿಂದ ರೈತರು ಟ್ರ್ಯಾಕ್ಟರ್‌ನಲ್ಲಿ ಅಡ್ಡ ಸಾಲು ಹಾಕುತ್ತಿದ್ದಾರೆ. ಆದರೂ ಕಳೆ ಕೀಳಲು ಆಗುತ್ತಿಲ್ಲ. ಅಳಿದುಳಿದ ಕಳೆ ಕೀಳಲು ಕೂಲಿಯಾಳುಗಳು ಸಿಗದೆ ರೈತರು ಪರದಾಡುತ್ತಿದ್ದಾರೆ.
ಕೆಲ ಭಾಗಗಳ ರೈತರು ರಾಗಿ ಪೈರು ನಾಟಿ ಮಾಡಲು ರಾಗಿ ಹೊಟ್ಲು ಬಿಟ್ಟಿದ್ದು, ಟ್ರ್ಯಾಕ್ಟರ್‌ನಲ್ಲಿ ಗೆರೆ ಹೊಡೆಯಲು ಆಗದೆ ಕೈಯಲ್ಲೇ ಗೆರೆ ಎಳೆದುಕೊಂಡು ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಹದ ಮಾಡಿಕೊಂಡಿರುವ ಭೂಮಿ ಒಣಗಿರುವ ಕಾರಣ ಅಕ್ಕಪಕ್ಕದ ತೋಟದ ರೈತರ ಕೊಳವೆ ಬಾವಿಗಳಿಂದ ನೀರು ಬಿಡಿಸಿಕೊಂಡು ಹೊಲ ಕೆಸರು ಮಾಡಿಕೊಂಡು ರಾಗಿ ಪೈರು ನಾಟಿ ಮಾಡುತ್ತಿದ್ದಾರೆ. ಕೆಲವೆಡೆ ರಾಗಿ ಪೈರು ಗರಿ ಮೇಯಿಸುವ ಹಂತಕ್ಕೆ ಬಂದಿದ್ದು, ವಾರದೊಳಗೆ ಮಳೆ ಬಾರದಿದ್ದರೆ ಬಿಸಿಲಿಗೆ ಬಾಡಿ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗುತ್ತದೆ ಎನ್ನುತ್ತಾರೆ ರೈತ ಚಂದ್ರಣ್ಣ.
ತಾಲ್ಲೂಕಿನ ಕಸಬಾ, ಮಾಯಸಂದ್ರ, ದಬ್ಬೇಘಟ್ಟ ಮತ್ತು ದಂಡಿನಶಿವರ ಹೋಬಳಿಯ ಅಲ್ಲಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ರಾಗಿ ಪೈರಿನ ತುದಿ ಸುರುಟಿದ ರೀತಿ ಒಣಗುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಅವರೆ, ತೊಗರಿ ಮತ್ತು ಹರಳಿನ ಗಿಡದ ಎಲೆಗಳಲ್ಲೂ ಸಣ್ಣ ಸಣ್ಣ ರಂಧ್ರವಾಗಿ ರೋಗಪೀಡಿತವಾಗಿದೆ. ಹಾಗಾಗಿ ಗಿಡದ ಬೆಳವಣಿಗೆ ಕುಂಠಿತವಾಗಲಿದೆ ಎನ್ನುತ್ತಾರೆ ರೈತ ಬಸವರಾಜು.
ತಾಲ್ಲೂಕಿನಲ್ಲಿ 665.9 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿದ್ದು, ಆಗಸ್ಟ್ ಅಂತ್ಯದಲ್ಲಿ 203 ಮಿ.ಮೀಟರ್ ಮಳೆಯಾಗಿದೆ. ಅವರೆ 750, ಅಲಸಂದೆ 1,200, ತೊಗರಿ 261, ಹರಳು 67, ಹುರಳಿ 615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಾಸಿವೆ ಶೂನ್ಯ ಬಿತ್ತನೆಯಾದರೆ, ಎಳ್ಳು ಮತ್ತು ಹುಚ್ಚೆಳ್ಳು ಅತಿ ಕಡಿಮೆ ಪ್ರದೇಶದಲ್ಲಿ ಭಿತ್ತನೆಯಾಗಿದೆ.
ತುರುವೇಕೆರೆಯಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ವಿರಳ. ಅಂತಹ ಸ್ಥಳಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಬಿ.ಪೂಜಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.