ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ರಾಜೀನಾಮೆಗೆ ‘ಅಹಿಂದ’ ಆಗ್ರಹ

28ರಂದು ‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಪ್ರತಿಭಟನೆ
Published 18 ಆಗಸ್ಟ್ 2024, 6:05 IST
Last Updated 18 ಆಗಸ್ಟ್ 2024, 6:05 IST
ಅಕ್ಷರ ಗಾತ್ರ

ತುಮಕೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಯವಂಚಕರು, ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ ದಲಿತರ ಬೆನ್ನಿಗೆ ಚೂರಿ ಹಾಕಿದ್ದಾರೆ. ದಲಿತ ಸಮುದಾಯದ ಶಾಪ ತಟ್ಟಿದ್ದು, ಮುಡಾ ಹಗರಣದ ಹೊಣೆಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ‘ಅಹಿಂದ’ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಭಾಸ್ಕರ್‌ ಪ್ರಸಾದ್‌ ಇಲ್ಲಿ ಶನಿವಾರ ಒತ್ತಾಯಿಸಿದರು.

‘ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ಕಳೆದ ಎರಡು ವರ್ಷದಲ್ಲಿ ₹26 ಸಾವಿರ ಕೋಟಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. ಸರ್ಕಾರ ದಲಿತರ ಹೋರಾಟ, ವಿರೋಧ ಹತ್ತಿಕ್ಕಲು ದಲಿತ ಸಮುದಾಯದ ಹಿರಿಯ ಮುಖಂಡರನ್ನು ರಕ್ಷಣೆಗೆ ನಿಲ್ಲಿಸಿಕೊಂಡಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಬುದ್ಧ ಯೋಜನೆ ನಿಲ್ಲಿಸಿ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ’ ಎಂದು ಪರಿಶಿಷ್ಟ ಸಮುದಾಯದ ಯುವತಿ ಹಾಕಿದ ಕಣ್ಣೀರಿನ ಶಾಪ ಸಿದ್ದರಾಮಯ್ಯ ಅವರಿಗೆ ತಟ್ಟಿದೆ. ಈಗಿನ ಸರ್ಕಾರದಲ್ಲಿ ದಲಿತರ ಅಭಿವೃದ್ಧಿಗೆ ಎಷ್ಟು ಹಣ ಮೀಸಲಿಟ್ಟಿದ್ದರು. ಅದರಲ್ಲಿ ಖರ್ಚು ಮಾಡಿದ್ದೆಷ್ಟು? ಎಂಬುವುದರ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಒಕ್ಕೂಟದ ಸಂಚಾಲಕ ಪ್ರೊ.ಎ.ಹರಿರಾಂ, ‘ಬಿಜೆಪಿಯರನ್ನು ದಲಿತ ವಿರೋಧಿಗಳು, ಕೋಮುವಾದಿಗಳು ಎಂದು ಟೀಕಿಸಿದ್ದೆವು. ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಯಿತು. ಎಲ್ಲವನ್ನು ಸರಿಪಡಿಸಲು ಸೂಕ್ತವಾದ ನಾಯಕತ್ವ ಬೇಕು ಎಂದು ಒಂದು ವರ್ಷದ ಕಾಲ ದಲಿತ, ಹಿಂದುಳಿದ ಸಂಘಟನೆಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಶ್ರಮಿಸಿವೆ. ಕಾಂಗ್ರೆಸ್‌ ಅಧಿಕಾರ ಹಿಡಿದ ನಂತರ ಪರಿಶಿಷ್ಟರ ಯೋಜನೆಗಳಿಗೆ ಕತ್ತರಿ ಹಾಕುತ್ತಿದೆ’ ಎಂದು ಆರೋಪಿಸಿದರು.

ದಲಿತ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದರು. ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಪಿಕ್‌ ಪಾಕೆಟ್‌ ಮಾಡಿದರು. ಹೆಂಡ ಹಂಚಲು, ಮತ ಖರೀದಿಗೆ ಬಳಸಿದರು. ದಲಿತ ರಾಮಯ್ಯ ಎಂದು ಕರೆಸಿಕೊಂಡು, ದಲಿತರ ದುಡ್ಡು ಲೂಟಿ ಹೊಡೆದರು. ಪರಿಶಿಷ್ಟರ ಹಣ ಪೀಕುವುದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದರು.

ಕಾಂಗ್ರೆಸ್‌ ನಾಯಕರು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದರು. ಈಗ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೂ ಇನ್ನೂ ಒಂದು ನಿರ್ಧಾರಕ್ಕೆ ಬರುತ್ತಿಲ್ಲ. ತೀರ್ಪಿನ ನಂತರ ಸಿದ್ದರಾಮಯ್ಯ ‘ಚರ್ಚೆ ಮಾಡುತ್ತೇನೆ. ಕರೆದು ಸಂಧಾನ ಮಾಡುತ್ತೇನೆ’ ಎನ್ನುತ್ತಿದ್ದಾರೆ. ಇದನ್ನು ಬಿಟ್ಟು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಹಿಂದ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಶಂಕರ್‌ ಲಿಂಗಯ್ಯ, ಶ್ರೀನಿವಾಸ್ ಮೂರ್ತಿ, ಸಿದ್ದಾಪುರ ಮಂಜುನಾಥ್ ಹಾಜರಿದ್ದರು.

28ರಂದು ಪ್ರತಿಭಟನೆ

‘ಅಹಿಂದ’ ಸಂಘಟನೆಗಳ ಒಕ್ಕೂಟದಿಂದ ಆ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪರಿಶಿಷ್ಟರ ರಕ್ಷಣೆ, ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಯಲಿದೆ. ನಮ್ಮ ಪಾಲಿನ ಹಣದಿಂದ ಬೇರೆಯವರ ಹೊಟ್ಟೆ ತುಂಬುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೀಸಲಿಟ್ಟರೂ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

28ರಂದು ಪ್ರತಿಭಟನೆ

‘ಅಹಿಂದ’ ಸಂಘಟನೆಗಳ ಒಕ್ಕೂಟದಿಂದ ಆ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟರ ರಕ್ಷಣೆ ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಯಲಿದೆ. ನಮ್ಮ ಪಾಲಿನ ಹಣದಿಂದ ಬೇರೆಯವರ ಹೊಟ್ಟೆ ತುಂಬುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೀಸಲಿಟ್ಟರೂ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT