ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಗೆ ಮುಷ್ಕರದ ನೋಟಿಸ್‌ ರವಾನಿಸಿದ ರೈತರು

ರೈತ ಪರ ಮಸೂದೆಗಳ ಜಾರಿಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ತುಮಕೂರು ಜಿಲ್ಲಾ ಘಟಕ ಒತ್ತಾಯ
Last Updated 4 ಜನವರಿ 2020, 11:27 IST
ಅಕ್ಷರ ಗಾತ್ರ

ತುಮಕೂರು: ರೈತರ ಋಣಮುಕ್ತ ಮಸುದೆ–2018 ಮತ್ತು ಕೃಷಿ ಉತ್ಪನ್ನಗಳಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಸೂದೆ–2018 ಅನ್ನು ಜಾರಿಗೊಳಿಸಲು ಒತ್ತಾಯಿಸಿ ನಡೆದ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಖಂಡಿಸಿ, ಜ.8ರಂದು ಗ್ರಾಮೀಣ ಭಾರತದಲ್ಲಿ ಬಂದ್‌ ನಡೆಸಲಾಗುತ್ತದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್‍ಸಿಸಿ) ಹೇಳಿದೆ.

ಈ ಹೋರಾಟದ ಭಾಗವಾಗಿ ಸಮಿತಿಯ ತುಮಕೂರು ಜಿಲ್ಲಾ ಘಟಕವು ಸಹ ರಾಷ್ಟ್ರಪತಿಗೆ ಮುಷ್ಕರದ ನೋಟಿಸ್‌ ಅನ್ನು ಶುಕ್ರವಾರ ರವಾನಿಸಿತು.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ರೈತ ಮುಖಂಡರ ಸಭೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ರೈತರ ಆತ್ಮಹತ್ಯೆಗಳು ಕರ್ನಾಟಕದಲ್ಲಿ ಹೆಚ್ಚಾಗಿವೆ. ರೈತರು ಸಾಲ ನೀಡಿದವರ ಕೈಯಲ್ಲಿ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚ ಸಹ ದುಬಾರಿಯಾಗಿದೆ. ಕೃಷಿಗೆ ಖರ್ಚು ಮಾಡಿದ ಹಣಕ್ಕೆ ಒಂದೂವರೆ ಪಟ್ಟು ಬೆಂಬಲಬೆಲೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೂ, ಅದನ್ನು ಜಾರಿಗೆ ತರದೆ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದರು.

ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜ್, ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ಕಿಸಾನ್‌ ಸಮ್ಮಾನ್‌ ಯೋಜನೆಯಡಿ ದಿನಕ್ಕೆ ₹ 6 ಭಿಕ್ಷೆ ನೀಡಿ, ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಜಿಲ್ಲೆಗೆ ಭೇಟಿ ನೀಡಿದ ಪ್ರಧಾನಿ ರೈತರ ಸ್ಥಳೀಯ ಸಮಸ್ಯೆಗಳಿಗಾಗಲಿ, ನೆರೆ-ಬರದಿಂದ ತತ್ತರಿಸಿರುವ ಜನರ ಬದುಕನ್ನು ಉಳಿಸುವ ಮಾರ್ಗವನ್ನು ಘೋಷಿಸಿಲ್ಲ. ಕೇವಲ ಅಂಕಿ–ಅಂಶಗಳನ್ನಷ್ಟೇ ನೀಡಿ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಸಂಬಂಧಿತ ಪರಿಹಾರಗಳನ್ನು ಪ್ರಧಾನಿ ಮೋದಿ ಅವರು ಮೊದಲು ಕೈಗೆತ್ತಿಕೊಳ್ಳಬೇಕು. ಕೃಷಿಯನ್ನು ಕಾರ್ಪೋರೇಟ್ ಮತ್ತು ರಿಯಲ್ ಎಸ್ಟೇಟ್ ದಂಧೆಯಿಂದ ರಕ್ಷಿಸಬೇಕು ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ಬಗರ್ ಹುಕುಂ ಜಮೀನು ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಜಿಲ್ಲೆಯ ಸಮಗ್ರ ನೀರಾವರಿ, ಕೃಷಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯು ಅತ್ಯಂತ ಜರೂರಾಗಿ ಆಗಬೇಕಿದೆ ಎಂದು ಒತ್ತಾಯಿಸಿದರು.

ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್ ಮಾಡಬೇಕು. ಹಾಲು ಮತ್ತು ತರಕಾರಿಗಳನ್ನು ಪಟ್ಟಣಕ್ಕೆ ರವಾನೆ ಮಾಡದೆ ರೈತರು ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದರು.

ರಾಜ್ಯ ರೈತ ಸಂಘದ ರವೀಶ್, ಚಿಕ್ಕಬೈರೇಗೌಡ, ಮೂಡ್ಲಗಿರಿಯಪ್ಪ, ಬೋರೇಗೌಡ, ಉಮೇಶ್, ಪ್ರಾಂತ ರೈತ ಸಂಘದ ಲೋಕೇಶ್, ನರೇಂದ್ರ, ಲಕ್ಷ್ಮಣ್‍ಗೌಡ, ಶಂಕರಪ್ಪ ಸೇರಿದಂತೆ ತಾಲ್ಲೂಕು ಮುಖಂಡರು ಇದ್ದರು. ನೋಟಿಸ್‌ ಅನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಳಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT