ಶುಕ್ರವಾರ, ಜನವರಿ 22, 2021
29 °C
ಪೊಲೀಸರ ಅತಿಥಿಯಾದ ಲಾರಿ ಚಾಲಕ ತಿಪ್ಪೇಸ್ವಾಮಿ

ಶಿರಾ: ಅಪಘಾತ ಎಂದು ಬಿಂಬಿಸಿ ಮದ್ಯ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಅಬಕಾರಿ ಇಲಾಖೆಗೆ ಸೇರಿದ ಮದ್ಯದ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದೆ ಎಂದು ನಂಬಿಸಿ ಲಾರಿಯಲ್ಲಿದ್ದ ಮದ್ಯವನ್ನು ಕಳವು ಮಾಡಿದ್ದ ಲಾರಿ ಚಾಲಕ ತಿಪ್ಪೇಸ್ವಾಮಿ ಎಂಬಾತನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಊರುಕೆರೆ ಬಳಿಯ ಬೋವಿಪಾಳ್ಯದ ತಿಪ್ಪೇಸ್ವಾಮಿಗೆ ಆತನ ಸಹೋದರ ಬಸವರಾಜು ಹಾಗೂ ಸ್ನೇಹಿತ ಜಯಣ್ಣ ಸಹಕರಿಸಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನೆಲಮಂಗಲ ತಾಲ್ಲೂಕಿನ ಮಾರೋಹಳ್ಳಿಯಿಂದ ಪೆನಾರ್ಡ್ ರಿಕಾರ್ಡ್ ಇಂಡಿಯಾ (ಲೆಸ್ಸಿ ಆಫ್ ಯೂನಿವರ್ಸಲ್‌ ಬಾಟ್ಲರ್ ಕಂಪನಿ) ಕಂಪನಿಗೆ ಸೇರಿದ ವಿವಿಧ ರೀತಿಯ 550 ಮದ್ಯದ ಬಾಕ್ಸ್‌ಗಳನ್ನು ತುಂಬಿಕೊಂಡು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದು ಹುಬ್ಬಳ್ಳಿಗೆ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದೆ ಎಂದು ಬಿಂಬಿಸಿ, ತಿಪ್ಪೇಸ್ವಾಮಿ ಲಾರಿಯಲ್ಲಿದ್ದ ₹ 20 ಲಕ್ಷ ಮೌಲ್ಯದ 250 ಮದ್ಯದ ಬಾಕ್ಸ್‌ಗಳನ್ನು ಲಪಟಾಯಿಸಿದ್ದನು.

ವಿವರ: ಮದ್ಯದ ಬಾಕ್ಸ್‌ಗಳನ್ನು ತುಂಬಿಕೊಂಡು ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ- 48ರ ದೊಡ್ಡ ಆಲದಮರದ ಬಳಿ ಲಾರಿ ಅಪಘಾತವಾಗಿದೆ ಎಂದು ಚಾಲಕ ತಿಪ್ಪೆಸ್ವಾಮಿ ಪೊಲೀಸರಿಗೆ ದೂರು ನೀಡಿದ್ದನು. ನಂತರ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು.

ಅಪಘಾತದ ವಿಚಾರ ತಿಳಿದ ಲಾರಿ ಟ್ರಾನ್ಸ್‌ಪೋರ್ಟ್ ಸಂಸ್ಥೆಯವರು ಸ್ಥಳಕ್ಕೆ ಬಂದು ಅಬಕಾರಿ ಇಲಾಖೆ ಜೊತೆ ಮದ್ಯದ ಬಾಕ್ಸ್‌ಗಳನ್ನು ಹುಬ್ಬಳ್ಳಿಗೆ ಕಳುಹಿಸಿಕೊಡಲು ಮುಂದಾದರು. ಆಗ 550 ಬಾಕ್ಸ್‌ಗಳು ಇರಬೇಕಾದ ಜಾಗದಲ್ಲಿ ಕೇವಲ 276 ಬಾಕ್ಸ್‌ಗಳು ಇದ್ದು, ಅದರಲ್ಲಿ ಕೆಲವು ಬಾಟಲ್‍ಗಳು ಒಡೆದಿದ್ದವು. ಇದರಿಂದ ಅನುಮಾನಗೊಂಡ ಲಾರಿ ಟ್ರಾನ್ಸ್‌ಪೋರ್ಟ್ ಸಂಸ್ಥೆಯವರು ಕಳ್ಳಂಬೆಳ್ಳ ಪೊಲೀಸರಿಗೆ ದೂರು ನೀಡಿದರು.

ಡಿವೈಎಸ್‍ಪಿ ಕುಮಾರಪ್ ಶಿರಾ ಗ್ರಾಮಾಂತರ ಠಾಣೆ ಸಿಪಿಐ ಶಿವಕುಮಾರ್, ಸಬ್‍ಇನ್‌ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿ ತನಿಖೆ ಚುರುಕುಗೊಳಿಸಿದರು.

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ತಿಪ್ಪೆಸ್ವಾಮಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಂದಿದೆ. ಚಾಲಕ ತಿಪ್ಪೆಸ್ವಾಮಿ, ಆತನ ಸಹೋದರ ಬಸವರಾಜು, ಸ್ನೇಹಿತ ಜಯಣ್ಣ ಸೇರಿ ಊರುಕೆರೆಯ ಹೊರಭಾಗದಲ್ಲಿರುವ ರಾಯರಪಾಳ್ಯದ ಬಳಿ ಲಾರಿಯಲ್ಲಿದ್ದ 271 ಬಾಕ್ಸ್‌ಗಳನ್ನು ಇಳಿಸಿ, ನಂತರ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯ ದೊಡ್ಡಮರದ ಬಳಿ ಲಾರಿ ಅಪಘಾತವಾಗಿದೆ ಎಂಬಂತೆ ಬಿಂಬಿಸಿದರು. ಸ್ಥಳೀಯರು ಲಾರಿಯಲ್ಲಿದ್ದ ಮದ್ಯದ ಬಾಕ್ಸ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ನಂಬಿಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಲಾರಿಯಲ್ಲಿ ಉಳಿದಿದ್ದ 271 ಮದ್ಯದ ಬಾಕ್ಸ್‌ಗಳನ್ನು ಸುರೇಶ್ ಎಂಬುವವರ ಮನೆಯಲ್ಲಿ ಅಡಗಿಸಡಲಾಗಿತ್ತು. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಿಪ್ಪೆಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು