ಸೋಮವಾರ, ಡಿಸೆಂಬರ್ 6, 2021
23 °C
ಜೆಡಿಎಸ್ ಅಭ್ಯರ್ಥಿ ಅನಿಲ್ ಬಳಿ ಕಾರಿಲ್ಲ!

ವಿಧಾನ ಪರಿಷತ್ ಚುನಾವಣೆ: ತುಮಕೂರಲ್ಲಿ ಮೂವರೂ ಕೋಟಿ ವೀರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೋಟಿ ವೀರರು!

ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಇತರೆ ಅಭ್ಯರ್ಥಿಗಳಿಗಿಂತ ಆಸ್ತಿ ಹೊಂದಿರುವ ವಿಚಾರದಲ್ಲಿ ಮುಂದಿದ್ದಾರೆ. ಪ್ರಮುಖವಾಗಿ ರಿಯಲ್ ಎಸ್ಟೇಸ್‌ನಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಚರಾಸ್ತಿ, ಸ್ಥಿರಾಸ್ತಿ ಹೊಂದಿದ್ದಾರೆ. ಕೆಎಎಸ್ ಅಧಿಕಾರಿಯಾಗಿ ಮೊನ್ನೆಯಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿರುವ ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಸಹ ಕೋಟಿಗಟ್ಟಲೆ ಚರ, ಸ್ಥಿರಾಸ್ತಿ ಹೊಂದಿದ್ದಾರೆ.

ಆಸ್ತಿ ಹೊಂದುವ ವಿಚಾರದಲ್ಲಿ ಲೋಕೇಶ್ ನಂತರದ ಸ್ಥಾನದಲ್ಲಿ ಅನಿಲ್ ಇದ್ದಾರೆ. ಇಬ್ಬರು ಅಭ್ಯರ್ಥಿಗಳ ಪತ್ನಿಯರೂ ಕೋಟ್ಯಧಿಪತಿಗಳೇ ಆಗಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಸಹ ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿ ಒಡೆಯರು.

ಲೋಕೇಶ್ ಆಸ್ತಿ ವಿವರ: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸದಸ್ಯರಾಗಿ, ಬಿಜೆಪಿ ಬೆಂಗಳೂರು ದಾಸರಹಳ್ಳಿ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿರುವ ಎನ್.ಲೋಕೇಶ್, ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ, ಪತ್ನಿ ಇಬ್ಬರೂ ಕೋಟ್ಯಧಿಪತಿಗಳು. 42 ವರ್ಷದ ಲೋಕೇಶ್ ಬಳಿ ಒಟ್ಟು ₹23.72 ಕೋಟಿ ಮೊತ್ತದ ಸ್ಥಿರ, ಚರಾಸ್ತಿ ಇದೆ. ₹11.24 ಕೋಟಿ ಮೊತ್ತದ ಚರಾಸ್ತಿ, ₹11.24 ಕೋಟಿಯ ಸ್ಥಿರಾಸ್ತಿ ಹಾಗೂ ಫಾರ್ಚುನರ್ ಕಾರು ಹೊಂದಿದ್ದಾರೆ. ಪತ್ನಿ ₹6.98 ಕೋಟಿ ಆಸ್ತಿ ಒಡೆಯರು.

ಪ್ರಮುಖವಾಗಿ ರಿಯಲ್ ಎಸ್ಟೇಸ್‌ನಲ್ಲಿ ಹಣ ತೊಡಗಿಸಿದ್ದಾರೆ. ಜಮೀನು, ನಿವೇಶನ, ಕಟ್ಟಡ, ವಾಣಿಜ್ಯ ಕಟ್ಟಡ ಸೇರಿದಂತೆ ಇತರ ಚಟುವಟಿಕೆಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಜತೆಗೆ ₹11.39 ಕೋಟಿ ಸಾಲವನ್ನೂ
ಹೊತ್ತಿದ್ದಾರೆ.

ಕೋಟ್ಯಧಿಪತಿ ಬಳಿ ಕಾರಿಲ್ಲ: ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿಗೆ ಒಡೆಯರಾಗಿದ್ದರೂ, ಅವರ ಬಳಿ ಕಾರು, ಮತ್ತಿತರ ಯಾವುದೇ ವಾಹನ ಇಲ್ಲ. 2020–2021ನೇ ಸಾಲಿನಲ್ಲಿ ₹8.67 ಲಕ್ಷ ಆದಾಯ ಬಂದಿರುವುದಾಗಿ ತೋರಿಸಿದ್ದಾರೆ. ಪತ್ನಿಗೆ ₹6 ಲಕ್ಷ ಆದಾಯ ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.

43 ವರ್ಷದ ಅನಿಲ್ ಅವರು ಚರಾಸ್ತಿ, ಸ್ಥಿರಾಸ್ತಿ ಸೇರಿದಂತೆ ಒಟ್ಟು ₹18.19 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ. ಪತ್ನಿ ಬಳಿ ₹5.37 ಕೋಟಿ, ಮಕ್ಕಳ ಬಳಿ ₹87 ಲಕ್ಷ ಮೊತ್ತದ ಆಸ್ತಿ ಇದೆ. ಕೃಷಿ ಜಮೀನು, ನಿವೇಶನ ಇತರೆ ಆಸ್ತಿಗಳ ಮೇಲೆ ಹೆಚ್ಚು ಹೂಡಿಕೆ
ಮಾಡಿದ್ದಾರೆ.

ರಾಜೇಂದ್ರ ಆಸ್ತಿ ವಿವರ: ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ 39 ವರ್ಷದ ಆರ್.ರಾಜೇಂದ್ರ ಸಹ ಕೋಟ್ಯಧಿಪತಿ. ಆದರೆ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿಗಿಂತ ಅಲ್ಪ ಕಡಿಮೆ ಮೊತ್ತದ ಆಸ್ತಿ ಹೊಂದಿದ್ದಾರೆ. ₹4.87 ಕೋಟಿ ಮೊತ್ತದ ಚರಾಸ್ತಿ, ₹6.29 ಕೋಟಿ ಮೊತ್ತದ ಸ್ಥಿರಾಸ್ತಿ ಸೇರಿ ಒಟ್ಟು ₹11.16 ಕೋಟಿ ಆಸ್ತಿ ಒಡೆಯರು. ಜತೆಗೆ ₹5.56 ಕೋಟಿ ಸಾಲವನ್ನೂ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.