ಮಂಗಳವಾರ, ಜನವರಿ 21, 2020
27 °C

ಯಡಿಯೂರಪ್ಪ ಗಮನಕ್ಕೆ ಅಂಗನವಾಡಿ ವಿವಾದ: ಸಿಎಂ ನಿರ್ಧಾರ ಆಧರಿಸಿ ಮುಂದಿನ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಅಂಗನವಾಡಿ ಕಾರ್ಯಕರ್ತೆಯರ ಪಾದಯಾತ್ರೆಗೆ ಅನುಮತಿ ನೀಡುವ ವಿಚಾರ ರಾಜ್ಯ ಸರ್ಕಾರದ ಅಂಗಳ ತಲುಪಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅಂಗನವಾಡಿ ನೌಕರರ ಫೆಡರೇಷನ್ ಮುಖಂಡರ ಜೊತೆ ಮಂಗಳವಾರ ಮಾತುಕತೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತಲುಪಿದೆ. ಸರ್ಕಾರದಿಂದ ಯಾವ ಭರವಸೆ ದೊರೆಯುತ್ತದೆ ಎನ್ನುವ ವಿಚಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ಕುರಿತ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.

ಸರ್ಕಾರ ಮಾತುಕತೆಗೆ ಆಹ್ವಾನಿಸಿ ಸಮಯ ನೀಡಿದರೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರೆ ಪಾದಯಾತ್ರೆ ಕೈ ಬಿಡಲು ಮುಖಂಡರು ನಿರ್ಧರಿಸಿದ್ದಾರೆ. ಒಂದು ವೇಳೆ ಸಕಾರಾತ್ಮಕ ಭರವಸೆ ದೊರೆಯದಿದ್ದರೆ ಪಾದಯಾತ್ರೆ ನಡೆಸಿಯೇ ಸಿದ್ದ ಎನ್ನುವ ತೀರ್ಮಾನ ಕೈಗೊಂಡಿದ್ದಾರೆ. 

ನಗರದ ಟೌನ್‌ಹಾಲ್ ಹಾಗೂ ಗಾಜಿನ ಮನೆ ಬಳಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಸೇರಿದ್ದಾರೆ. ಟೌನ್‌ಹಾಲ್‌ನಿಂದ ಗಾಜಿನ ಮನೆಗೆ ಮೆರವಣೆಗೆ ನಡೆಸಲು ನಿರ್ಧರಿಸಲಾಗಿದೆ. ವಿವಿಧೆಡೆಗಳಿಂದ ಕಾರ್ಯಕರ್ತೆಯರು ಬರುತ್ತಲೇ ಇದ್ದಾರೆ. ತೀವ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದ್ದಕ್ಕಿದ್ದಂತೆ ಅನುಮತಿ ನಿರಾಕರಣೆ

ಡಿ.7ರವರೆಗೆ ಪಾದಯಾತ್ರೆಗೆ ಅನುಮತಿ ನೀಡುತ್ತೇವೆ ಎಂದು ಪೊಲೀಸರ ಹೇಳಿದ್ದರು. ಆದರೆ ಸೋಮವಾರ ರಾತ್ರಿ ಸರ್ಕಾರದಿಂದ ನಿರ್ದೇಶನ ಬಂದಿದೆ ಎಂದು ಇದ್ದಕ್ಕಿದ್ದಂತೆ ಅನುಮತಿ ನಿರಾಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ್ದಾರೆ. ಅವರು ಏನು ನಿರ್ಧಾರ ಮಾಡುವರೋ ನೋಡುತ್ತೇವೆ ಎಂದು ಸಿಐಟಿಯು ಮುಖಂಡರಾದ  ವರಲಕ್ಷ್ಮಿ ತಿಳಿಸಿದರು.

ಇದು ಸರ್ಕಾರದ ದೌರ್ಜನ್ಯ

ಪ್ರತಿಭಟನೆ ನಿಷೇಧಿಸುವ ಮೂಲಕ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮಹಿಳೆಯರನ್ಬು ಕೆಟ್ಟದಾಗಿ ನಡೆಸಿ ಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಕಾರ್ಯಕರ್ತೆಯರನ್ನು ತಡೆಯಲಾಗುತ್ತಿದೆ ಎಂದು ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯ ದರ್ಶಿ ಸಿಂಧು ದೂರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು