ತಿಪಟೂರು: ಅಂಗನವಾಡಿಯ ಪೌಷ್ಟಿಕ ಆಹಾರವನ್ನು ಬೇರೆಡೆಗೆ ಸಾಗಿಸುವ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯೊಬ್ಬರ ಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ತಾಲ್ಲೂಕಿನ ದಸರೀಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ಹುಚ್ಚನಹಳ್ಳಿಯ ಅಂಗನವಾಡಿ ಸಹಾಯಕಿ ಚೈತ್ರಾ ವೈ. ಅವರ ಪತಿ ಅಶೋಕ ಎಂಬುವರು ಸಾಗಿಸುತ್ತಿದ್ದಾಗ ಸಾರ್ವಜನಿಕರು ಹಿಡಿದುಕೊಂಡಿದ್ದಾರೆ.
ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸಬೇಕಾದ ಕಡಲೆಬೀಜ, ಹೆಸರುಕಾಳು, ಕಡಲೆಕಾಳು, ಹಾಲಿನ ಪ್ಯಾಕೆಟ್ ಮುಂತಾದ ಸಾಮಗ್ರಿಗಳನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಈ ವೇಳೆ ಗ್ರಾಮಸ್ಥರ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ. ಆಗಆಹಾರ ಪದಾರ್ಥವನ್ನು ಸಾಸಲಹಳ್ಳಿಗೆ ಕಳುಹಿಸುತಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವುದಾದರೆ ಸ್ವತಃ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿಯೇ ಮನೆಗೆ ತಲುಪಿಸಬೇಕು. ಅದನ್ನು ಬಿಟ್ಟು ಯಾವುದೋ ಬ್ಯಾಗಿಗೆ ತುಂಬಿ ಸಹಾಯಕಿಯ ಪತಿಯಿಂದ ತಲುಪಿಸುವ ಅಗತ್ಯವೇನಿದೆ ಎಂದು ನಾಗರಿಕರು ಪ್ರಶ್ನಿಸಿದರು. ಸ್ಥಳಕ್ಕೆ ಸಿಡಿಪಿಒ ಬರಲಿ ಎಂದು ಗ್ರಾಮಸ್ಥರು ಆಗ್ರಹಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಬಹಳ ದಿನಗಳಿಂದಲೂ ಪೌಷ್ಟಿಕ ಆಹಾರ ಕದ್ದು ಸಾಗಿಸುತ್ತಿದ್ದರು. ಮಕ್ಕಳ ಮನೆಯವರು ಕೇಳಿದರೆ ಇನ್ನು ಬಂದಿಲ್ಲ. ಬಂದಾಗ ಕೊಡುತ್ತೇವೆಂದು ಹೇಳುತ್ತಾರೆ. ಸಾಮಗ್ರಿಗಳನ್ನು ಕದ್ದು ಸಾಗಿಸುವುದನ್ನು ಹಿಡಿಯಲೆಂದು ಕಾಯ್ದಿದ್ದೆವು. ಈ ದಿನ ನಮ್ಮ ಮುಂದೆಯೇ ತೆಗೆದುಕೊಂಡು ಹೋಗುವುದನ್ನು ನೋಡಿ ಹಿಡಿದಿದ್ದೇವೆ’ ಎಂದು ಮೋಹನ್ ಕುಮಾರ್, ದೇವರಾಜು ತಿಳಿಸಿದರು.
‘ಅಕ್ರಮವಾಗಿ ಪೌಷ್ಟಿಕ ಆಹಾರ ಸಾಗಣೆ ಬಗ್ಗೆ ದೂರು ಬಂದಿದೆ. ಸ್ಥಳಕ್ಕೆ ಮೇಲ್ವಿಚಾರಕಿಯನ್ನು ಕಳುಹಿಸಿ ಪರಿಶೀಲಿಸಲಾಗಿದೆ. ಕಾರ್ಯಕರ್ತೆ, ಸಹಾಯಕಿಗೆ ನೋಟಿಸ್ ನೀಡಲಾಗಿದೆ’ ಎಂದುಸಿಡಿಪಿಒ ಓಂಕಾರಪ್ಪ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.