ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅನ್ನಭಾಗ್ಯ'ದ 175 ಕ್ವಿಂಟಲ್ ಅಕ್ಕಿ ವಶ

ಗೆರೆಹಳ್ಳಿ ಶೆಡ್‌ನಲ್ಲಿ ಶೇಖರಿಸಿ–ಸಾಗಣೆ : ಎಸ್ಪಿ ತಂಡದಿಂದ ಪರಿಶೀಲನೆ
Last Updated 16 ಸೆಪ್ಟೆಂಬರ್ 2019, 13:57 IST
ಅಕ್ಷರ ಗಾತ್ರ

ತುಮಕೂರು: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಎಂಬ ಸಂಶಯದ ಮೇರೆಗೆ ತುಮಕೂರು ತಾಲ್ಲೂಕಿನ ಗೆರೆಹಳ್ಳಿಯ ಹೊರವಲಯದ ಶೆಡ್‌ನಲ್ಲಿ ಶೇಖರಿಸಿ, ಸಾಗಣೆ ಮಾಡುತ್ತಿದ್ದ 175 ಕ್ವಿಂಟಲ್‌ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜತೆಗೆ ಒಂದು ಸರಕು ಸಾಗಣೆ ವಾಹನ(ಇಚರ್), ಎರಡು ಬೈಕ್‌ಗಳು, ವಿದ್ಯುತ್‌ ಚಾಲಿತ ತೂಕದ ಯಂತ್ರ ಹಾಗೂ ಹೊಲಿಗೆ ಯಂತ್ರ ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ನೇತೃತ್ವದ ತಂಡವು ಮಾಹಿತಿ ಮೇರೆಗೆ ಶೆಡ್‌ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿತು. ಆ ವೇಳೆ ಶೆಡ್‌ ಒಳಗಿದ್ದ ಕಾರ್ಮಿಕರು ಗೇಟ್‌ ತೆಗೆಯಲಿಲ್ಲ. ಕಾನ್ಸ್‌ಟೆಬಲ್‌ ತಡೆಗೋಡೆ ಹಾರಿ, ಗೇಟ್‌ ತೆಗೆದರು.

ಒಳಗಿದ್ದ ಕಾರ್ಮಿಕರು ರಾಶಿ ಹಾಕಿದ್ದ ಅಕ್ಕಿಯನ್ನು ತಲಾ 50 ಕೆ.ಜಿ. ಪ್ರಮಾಣ ಹಿಡಿಸುವ ಚೀಲಗಳಲ್ಲಿ ತುಂಬಿ, ಪ್ಯಾಕ್‌ ಮಾಡುತ್ತಿದ್ದರು.

ಗೆರೆಹಳ್ಳಿಯ ಜಬಿವುಲ್ಲಾ ಅವರಿಗೆ 30X25 ಅಡಿ ವಿಸ್ತೀರ್ಣದ ಈ ಶೆಡ್‌ ಸೇರಿದೆ.

ತುಮಕೂರಿನ ಮೂರ್ತಿ ಎಂಬುವವರಿಗೆ ಎರಡು ತಿಂಗಳ ಹಿಂದೆ ಶೆಡ್‌ ಅನ್ನು ಬಾಡಿಗೆ ನೀಡಿದ್ದೆ. ₹ 50,000 ಮುಂಗಡ ಹಣ ಪಡೆದಿದ್ದೆ. ತಿಂಗಳಿಗೆ ₹12,000 ಬಾಡಿಗೆ ಪಡೆಯುತ್ತಿದ್ದೆ. ರೈಸ್ ಮಿಲ್ ಅಕ್ಕಿ ಸಂಗ್ರಹ ಮಾಡುವುದಾಗಿ ಮಾತುಕತೆ ವೇಳೆ ಮೂರ್ತಿ ತಿಳಿಸಿದ್ದ ಎಂದು ಶೆಡ್‌ ಮಾಲೀಕ ಜಬಿವುಲ್ಲಾ ತಿಳಿಸಿದರು.

ಅಕ್ಕಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಅನ್ನಭಾಗ್ಯದ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಆ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ಅಕ್ರಮ ಸಾಬೀತಾದರೆ ಸಂಬಂಧಿಸಿದ ಪ್ರಾಧಿಕಾರ ಕ್ರಮ ಜರುಗಿಸಲಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಕುರಿತು ಮಾಹಿತಿಗಾಗಿ ಮೂರ್ತಿ ಅವರನ್ನು ಸಂಪರ್ಕಿಸಿದಾಗ ಕರೆಯನ್ನು ಕಡಿತಗೊಳಿಸಿದರು.

ಶೆಡ್‌ ಮೇಲೆ ದಾಳಿ ಮಾಡಿದ ತಂಡದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಜಿ.ಕೆ.ಮಧುಸೂದನ್‌, ಹೆಡ್‌ ಕಾನ್ಸ್‌ಟೆಬಲ್‌ಗಳಾದ ಶಾಂತಕುಮಾರ್‌, ಉಮೇಶ್‌ ಇದ್ದರು.

‘ಪಡಿತರ ಅಕ್ಕಿಎಂದು ಖಚಿತತೆ ಇಲ್ಲ’

ಶೆಡ್‌ನಲ್ಲಿ ಸಂಗ್ರಹಿಸಿರುವುದು ಪಡಿತರದ ಅಕ್ಕಿಯೇ ಎಂದು ಖಚಿತವಾಗಿ ಹೇಳಲು ಆಗದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಜಹೀರುದ್ದೀನ್ ಹೇಳಿದರು.

ಪಡಿತರ ಅಕ್ಕಿ ತುಂಬಿ ಸಾಗಿಸುವ ಇಲಾಖೆಯ ಗುರುತು ಇರುವ ಚೀಲಗಳು ಶೆಡ್‌ನಲ್ಲಿ ಸಿಕ್ಕಿದ್ದರೆ, ಅದನ್ನು ಅನ್ನಭಾಗ್ಯದ ಅಕ್ಕಿಯಂದು ಸುಲಭವಾಗಿ ಗುರುತಿಸಬಹುದಿತ್ತು. ಅಲ್ಲಿ ಇಲಾಖೆ ಚೀಲಗಳು ಸಿಕ್ಕಿಲ್ಲ. ಹಾಗಾಗಿ ಅದು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಸಾಗಿಸಲಾಗುತ್ತಿದೆ ಎಂದು ದೂರು ದಾಖಲು ಮಾಡಲು ಆಗುವುದಿಲ್ಲ. ಈ ಕುರಿತು ಪೊಲೀಸರೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಅವರೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* ಮೇಲ್ನೋಟಕ್ಕೆ ಪಡಿತರದ ಅಕ್ಕಿಯಂತೆ ಕಾಣುತ್ತಿದೆ. ಸಮಗ್ರ ತನಿಖೆ ಆದ ಬಳಿಕ, ತಪ್ಪಿತಸ್ತರ ವಿರುದ್ದ ಸೆಕ್ಷನ್‌ 3 ಮತ್ತು 7ರಡಿ ಕ್ರಮ ಜರುಗಿಸುತ್ತೇವೆ.

–ಕೆ.ವಂಶಿಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT