ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌, ಪಂಚಾಯಿತಿ ವ್ಯಾಪ್ತಿಗೆ ಉಸ್ತುವಾರಿಗಳ ನೇಮಕ

ಚುನಾವಣಾ ಸಿದ್ಧತೆ ಚುರುಕುಗೊಳಿಸಿದ ಕಾಂಗ್ರೆಸ್‌ ನಾಯಕರು
Last Updated 11 ಅಕ್ಟೋಬರ್ 2020, 21:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಚುನಾವಣಾ ತಯಾರಿಯನ್ನು ಚುರುಕುಗೊಳಿಸಿರುವ ಕಾಂಗ್ರೆಸ್‌, ನಗರ ಪ್ರದೇಶಗಳಲ್ಲಿ ‍ಪ್ರತಿ ವಾರ್ಡ್‌ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವೀಕ್ಷಕರನ್ನು ನೇಮಿಸಿದೆ.

ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪರಾಜಿತರಾದ ಅಭ್ಯರ್ಥಿಗಳನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಅವರೊಂದಿಗೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಮುಖಂಡರನ್ನು ಒಳಗೊಂಡ ತಲಾ 15 ಮಂದಿಯ ತಂಡವನ್ನು ಚುನಾವಣಾ ಪ್ರಚಾರಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಸರಣಿ ಸಭೆಗಳ ಮೂಲಕ ಚುನಾವಣಾ ಸಿದ್ಧತೆ ನಡೆಸಿದರು. ಎರಡೂ ಕ್ಷೇತ್ರಗಳ ಚುನಾವಣಾ ಸಂಯೋಜಕರು, ಸಮನ್ವಯಕಾರರ ಸಭೆ ನಡೆಸಿದ ಉಭಯ ನಾಯಕರು, ಚುನಾವಣಾ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಶಾಸಕರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್‌ ಸಿಂಗ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಚುನಾವಣಾ ವೀಕ್ಷಕರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿವಕುಮಾರ್‌, ‘ಎರಡೂ ಕ್ಷೇತ್ರಗಳಲ್ಲಿ ವಾರ್ಡ್‌ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಪಕ್ಷದ ನಾಯಕರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಅವರೊಂದಿಗೆ ಕಾರ್ಯಕರ್ತರ ತಂಡಗಳನ್ನೂ ನಿಯೋಜಿಸಲಾಗುವುದು. ಮತಗಟ್ಟೆ ಹಂತಕ್ಕೂ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು’ ಎಂದರು.

ಸಹಕಾರ ಕೋರಿದ ಕುಸುಮಾ: ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣಾ ಸಮನ್ವಯಕಾರರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಎಚ್‌. ಕೂಡ ಭಾಗಿಯಾಗಿದ್ದರು. ಚುನಾವಣೆಯಲ್ಲಿ ಪೂರ್ಣ ಬೆಂಬಲ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದರು.

‘ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ನೀವೆಲ್ಲರೂ ಹಿರಿಯರು. ಹಲವು ಚುನಾವಣೆಗಳನ್ನು ಎದುರಿಸಿದ ಅನುಭವ ನಿಮ್ಮೆಲ್ಲರಿಗೆ ಇದೆ. ನನ್ನನ್ನು ನಿಮ್ಮ ಮಗಳಂತೆ ಪರಿಗಣಿಸಿ, ಚುನಾವಣೆಯಲ್ಲಿ ಬೆಂಬಲ ನೀಡಿ’ ಎಂದು ಕುಸುಮಾ ಮನವಿ ಮಾಡಿಕೊಂಡರು.

ಬಿ ಫಾರ್ಮ್‌ ವಿತರಣೆ

ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಎಚ್‌. ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾನುವಾರ ಕಾಂಗ್ರೆಸ್‌ ಪಕ್ಷದ ಬಿ ಫಾರ್ಮ್‌ ವಿತರಿಸಿದರು.

ಅಕ್ಟೋಬರ್‌ 14ರಂದು ಕುಸುಮಾಮತ್ತು ಅ.15ರಂದು ಜಯಚಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT