ಮಂಗಳವಾರ, ಜೂನ್ 15, 2021
21 °C

ತುಮಕೂರು: ‘ಸುಗ್ಗಿ’ ಕಳೆದುಕೊಂಡ ಕಲಾವಿದರು

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್‌–19 ನಿಯಂತ್ರಿಸಲು ಲಾಕ್‌ಡೌನ್, ಜನತಾ ಕರ್ಫ್ಯೂ ಸೇರಿದಂತೆ ಹಲವು ಹೆಸರಿನಲ್ಲಿ ಜನರ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದ್ದು, ಎಲ್ಲರಂತೆ ಕಲಾವಿದರ ಬದುಕೂ ಅತಂತ್ರಕ್ಕೆ ಸಿಲುಕಿದೆ.

ಜನತಾ ಕರ್ಫ್ಯೂ, ಲಾಕ್‌ಡೌನ್ ಜಾರಿಯಾದ ನಂತರ ಹಲವು ವೃತ್ತಿಪರ ಕಲಾವಿದರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲೆಯನ್ನೇ ನಂಬಿ ಬದುಕುತ್ತಿದ್ದವರಿಗೆ ಈಗ ಆ ಕಲೆಯೇ ಕೈ ಹಿಡಿದು ನಡೆಸುತ್ತಿಲ್ಲ. ಕೈ ಚಾಚುವ ಪರಿಸ್ಥಿತಿಯನ್ನು ತಂದೊಡ್ಡಿದೆ. ಕಲಾವಿದರು ಸುಮ್ಮನೆ ಎಂದೂ ಕೈಚಾಚಿದವರಲ್ಲ. ತಮ್ಮ ಸಾಮರ್ಥ್ಯವನ್ನು ಕಲೆಯ ಮೂಲಕ ತೋರ್ಪಡಿಸಿ ಸಂಭಾವನೆ ಪಡೆದು ಜೀವನ ನಿರ್ವಹಣೆ ಮಾಡಿದವರು. ಈಗ ಅಂತಹ ಸ್ವಾಭಿಮಾನಕ್ಕೂ ಪೆಟ್ಟು ಬಿದ್ದಿದೆ. ಆತ್ಮಾಭಿಮಾನ ಬಿಟ್ಟು ಕೈಚಾಚಬೇಕಾಗಿದೆ.

ಫೆಬ್ರುವರಿ– ಜೂನ್ ತಿಂಗಳು ಕಲಾವಿದರಿಗೆ ಒಂದು ರೀತಿಯಲ್ಲಿ ‘ಸುಗ್ಗಿ’ ಹಬ್ಬವಿದ್ದಂತೆ. ಈ ಸುಗ್ಗಿ ಸಮಯದಲ್ಲಿ ಹಿಗ್ಗು ಕಾಣುತ್ತಿಲ್ಲ. ಈ ಸಮಯದಲ್ಲಿ ವರ್ಷದ ಮುಕ್ಕಾಲುಭಾಗ ಸಂಪಾದನೆ ಕಂಡುಕೊಳ್ಳುತ್ತಿದ್ದರು. ಸಂಕ್ರಾಂತಿ ಮುಗಿದು ಶಿವರಾತ್ರಿ ಕಾಲಿಡುವ ಹೊತ್ತಿಗೆ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರುತ್ತಿದ್ದವು. ಬೇಸಿಗೆಯಲ್ಲಿ ಹಳ್ಳಿ ಜನರಿಗೂ ಕೃಷಿ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಬಿಡುವು. ಹಬ್ಬ, ಜಾತ್ರೆ, ಉತ್ಸವ, ರಥೋತ್ಸವ, ಧಾರ್ಮಿಕ ಕಾರ್ಯಗಳು, ಮದುವೆ–ಮುಂಜಿ ಸೇರಿದಂತೆ ಒಂದಲ್ಲ ಒಂದು ರೀತಿಯಲ್ಲಿ ವಿಶೇಷಗಳು ಇರುತ್ತವೆ.

ಹಳ್ಳಿಯಿಂದ ನಗರ ಪ್ರದೇಶದ ವರೆಗೆ ವಿವಿಧ ರೂಪದಲ್ಲಿ, ಏನಾದರೊಂದು ಶುಭ ಕಾರ್ಯಗಳು ಜರುಗುತ್ತಿದ್ದವು. ಕಲಾವಿದರಿಗೂ ಬಿಡುವಿಲ್ಲದ ಕೆಲಸ. ಇದೇ ಸಮಯದಲ್ಲಿ ನಾಲ್ಕು ಕಾಸು ನೋಡುತ್ತಿದ್ದರು. ನಾಟಕ, ಜಾನಪದ, ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ವರ್ಗದ ಕಲಾವಿದರಿಗೆ ಒಂದಲ್ಲ ಒಂದು ಮಾರ್ಗದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಬೇಡಿಕೆ ಮೇಲೆ ಬೇಡಿಕೆ ಸೃಷ್ಟಿಯಾಗುತಿತ್ತು.

ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಒಂದು ತಿಂಗಳು ಮುಂಚೆ ಕಲಾಕ್ಷೇತ್ರ ಕಾಯ್ದಿರಿಸಬೇಕಿತ್ತು. ಅಷ್ಟರ ಮಟ್ಟಿಗೆ ಮುಂಗಡವಾಗಿ ಭರ್ತಿಯಾಗಿರುತಿತ್ತು. ಪೌರಾಣಿಕ ನಾಟಕ ಪ್ರದರ್ಶನಕ್ಕೆ ಜನಜಂಗುಳಿ. ನಿಂತುಕೊಂಡೇ ನಾಟಕ ನೋಡಿ ತೃಪ್ತಿ ಪಡುತ್ತಿದ್ದರು. ಅಷ್ಟರ ಮಟ್ಟಿಗೆ ಬೇಡಿಕೆ ಇತ್ತು. ಕೆಲವರು ಉತ್ಸವದ ಸಂದರ್ಭದಲ್ಲಿ ಇಂತಹುದೇ ಜಾನಪದ ಕಲಾವಿದರ ತಂಡ ಬರಬೇಕು. ಇಂತಹ ಕಲಾವಿದರನ್ನೇ ಕರೆಸಬೇಕು ಎಂದು ಪಟ್ಟುಹಿಡಿದು ಕರೆಸುತ್ತಿದ್ದರು. ಅವರ ಬಿಡುವಿನ ಸಮಯ ನೋಡಿಕೊಂಡು ಕೆಲವರು ಕಾರ್ಯಕ್ರಮದ ದಿನಾಂಕ ಗೊತ್ತುಪಡಿಸುತ್ತಿದ್ದರು.

ದಸರಾ ಸಮಯವೂ ಕಷ್ಟ: ಮೇ ತಿಂಗಳ ನಂತರ ಜೂನ್ ವೇಳೆಗೆ ಕೃಷಿ ಚಟುವಟಿಕೆಗಳು ಆರಂಭವಾಗುವ ಹೊತ್ತಿಗೆ ಮತ್ತೆ ಕಲಾವಿದರ ಚಟುವಟಿಕೆಗಳಿಗೆ ವಿರಾಮ ಸಿಗುತಿತ್ತು. ಗಣೇಶ ಚತುರ್ಥಿ ವೇಳೆಗೆ ಮತ್ತೆ ಅವಕಾಶಗಳು ತೆರೆದುಕೊಳ್ಳುತ್ತಿದ್ದವು. ದಸರಾ, ದೀ‍‍ಪಾವಳಿ, ಆಯುಧ ಪೂಜೆ ವೇಳೆಗೆ ಮತ್ತಷ್ಟು ಅವಕಾಶಗಳು ಸಿಗುತ್ತಿದ್ದವು. ಕೊರೊನಾ ಸೋಂಕು ಹರಡುತ್ತಿರುವುದನ್ನು ಗಮನಿಸಿದರೆ ದಸರಾ ವೇಳೆಗೂ ಅವಕಾಶಗಳು ಸಿಗುವುದು ಅನುಮಾನ. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದರೆ ಮಾತ್ರ ಅಲ್ಲಲ್ಲಿ ಅಲ್ಪಸ್ವಲ್ಪ ಚಟುವಟಿಕೆಗಳು ತೆರೆದುಕೊಳ್ಳಬಹುದು. ನಿಯಂತ್ರಣಕ್ಕೆ ಸಿಗದೆ ಹುಚ್ಚು ಕುದುರೆಯಂತೆ ನಾಗಾಲೋಟದಲ್ಲಿ ಓಡುತ್ತಿರುವುದನ್ನು ನೋಡಿದರೆ ದಸರಾ ವೇಳೆಗೂ ಅವಕಾಶಗಳು ಸಿಗುವುದಿಲ್ಲ. ಇದ್ದ ಮತ್ತೊಂದು ಅವಕಾಶವೂ ಕೈತಪ್ಪಲಿದೆ ಎಂದು ಕಲಾವಿದರು ಈಗಾಗಲೇ ಆತಂಕಗೊಂಡಿದ್ದಾರೆ.

ಬಡವರೇ ಹೆಚ್ಚು: ಜಾನಪದ, ಸಂಗೀತ, ವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕ ಕಲಾವಿದರು ಬಡತನದಲ್ಲೇ ಬದುಕು ಕಟ್ಟಿಕೊಂಡವರು. ಕೇವಲ ಶೇ 5ರಷ್ಟು ಮಂದಿ ಸ್ಥಿತಿವಂತರು ಇರಬಹುದು. ಹವ್ಯಾಸಕ್ಕೆ ನಾಟಕ ಮಾಡುವವರು, ಶ್ರೀಮಂತರು, ಉದ್ಯಮಿಗಳು, ಸರ್ಕಾರಿ ನೌಕರರು ಅಲ್ಪಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆ. ಶೇ 95ರಷ್ಟು ಮಂದಿ ಬಿಪಿಎಲ್ ವರ್ಗದವರೇ ಆಗಿದ್ದಾರೆ.

ಮುಂದೆ ಬಾರದ ದಾನಿಗಳು: ಕಳೆದ ಬಾರಿ ಹಲವರು ಹಲವು ರೀತಿಯಲ್ಲಿ ಸಹಾಯದ ಹಸ್ತ ಚಾಚಿದ್ದರು. ಕಾರ್ಮಿಕರು, ಕಲಾವಿದರು ಸೇರಿದಂತೆ ಸಂಕಷ್ಟದಲ್ಲಿ ಇರುವವರಿಗೆ ದಾನಿಗಳ ಹೃದಯ ಮಿಡಿದಿತ್ತು. ಕೆಲವರು ಆಹಾರ ಕಿಟ್‌ಗಳನ್ನು ವಿತರಿಸಿದ್ದರು. ಇನ್ನೂ ಕೆಲವರು ಬೇರೆ ಸ್ವರೂಪದಲ್ಲಿ ಸಹಾಯ ಮಾಡಿದ್ದರು. ಈ ಸಲ ಅಂತಹ ವಾತಾವರಣ ಕಂಡುಬರುತ್ತಿಲ್ಲ. ಅಸಹಾಯಕರಿಗೆ ನೆರವಾಗುವಂತಹ ವಾತಾವರಣ ಕಾಣುತ್ತಿಲ್ಲ.

ಅತ್ಯಲ್ಪ ಮಂದಿಗೆ ಪರಿಹಾರ: ಕಳೆದ ಲಾಕ್‌ಡೌನ್ ಸಮಯದಲ್ಲಿ ಪ್ರತಿ ಕಲಾವಿದರಿಗೆ ₹2 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿತ್ತು. ಹಾಕಿದ್ದ ಷರತ್ತು ನೋಡಿದವರಿಗೆ 2 ಸಾವಿರದ ಸಹವಾಸವೇ ಬೇಡ ಎಂದು ದೂರ ಉಳಿದರು. ಅನೇಕ ಕಲಾವಿದರು ಪರಿಹಾರ ಪಡೆದುಕೊಳ್ಳಲು ಮುಂದಾಗಲಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಸೇರಿದಂತೆ ವಿವಿಧ ವರ್ಗದ 172 ಕಲಾವಿದರು, ನಾಟಕ ಅಕಾಡೆಮಿ ಮೂಲಕ ಸುಮಾರು 100 ಕಲಾವಿದರಿಗಷ್ಟೇ ಪರಿಹಾರ ಸಿಕ್ಕಿದೆ.

₹10 ಸಾವಿರ ನೆರವು ಕೊಡಿ

ಕೋವಿಡ್–19 ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಕಲಾವಿದರನ್ನು ಗುರುತಿಸಿ ಪ್ರತಿ ಕಲಾವಿದನಿಗೆ ₹10 ಸಾವಿರ ಪರಿಹಾರ ನೀಡಬೇಕು ಎಂದು ಹಿರಿಯ ಕಲಾವಿದ ನಾಟಕಮನೆ ಮಹಾಲಿಂಗು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕನಿಷ್ಠ 2 ಸಾವಿರ ಕಲಾವಿದರಿಗಾದರೂ ನೆರವು ಸಿಕ್ಕರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ಅನುಕೂಲವಾಗುತ್ತದೆ. ಕಲೆ ಉಳಿದು ಮುಂದಿನ ಪೀಳಿಗೆಗೂ ದಾಟಿಸಬಹುದು. ಕಲಾವಿದರ ಬದುಕು ನಶಿಸಿದರೆ, ಕಲೆಯೂ ನಸಿಸುತ್ತದೆ. ಸರ್ಕಾರದ ನೆರವು, ಪ್ರೋತ್ಸಾಹ ಇದ್ದರೆ ಕಲೆಯೂ ಉಳಿಯುತ್ತದೆ. ಯಾವುದೇ ಆಶ್ರಯ ಇಲ್ಲದೆ ಕಲೆ ಉಳಿಯುವುದಿಲ್ಲ ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು