ಶುಕ್ರವಾರ, ಜನವರಿ 28, 2022
25 °C
ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ

ಕಾರ್ತೀಕ ಕೊನೆ ಸೋಮವಾರ: ಹೆಲಿಕಾಪ್ಟರ್‌ನಿಂದ ಲಕ್ಷ ಬಿಲ್ವಾರ್ಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾರ್ತೀಕ ಮಾಸದ ಕೊನೆ ಸೋಮವಾರದಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ, ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ಲಕ್ಷ ಪುಷ್ಪ ಬಿಲ್ವಾರ್ಚನೆ ನೆರವೇರಿಸಲಾಯಿತು. ಹವಾಮಾನ ವೈಪರೀತ್ಯ, ಮಠದ ಸಮೀಪವೇ ಬೆಟ್ಟ ಪ್ರದೇಶಗಳು ಇರುವುದು, ಎತ್ತರಕ್ಕೆ ಬೆಳೆದು ನಿಂತಿರುವ ಮರಗಳು ಸೇರಿದಂತೆ ಇತರೆ ಅಡಚಣೆಗಳಿಂದಾಗಿ ಹೆಲಿಕಾಪ್ಟರ್ ತೀರ ಕೆಳಗೆ ಬಂದು ಪುಷ್ಪಾರ್ಚನೆ ನೆರವೇರಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಎತ್ತರದಿಂದಲೇ ಪುಷ್ಟವೃಷ್ಟಿ ನೆರವೇರಿತು.

ವೀರಶೈವ, ಲಿಂಗಾಯತ ಮಹಾ ವೇದಿಕೆ ಹಾಗೂ ಯುವ ವೇದಿಕೆಯು ಹೆಲಿಕಾಪ್ಟರ್‌ನಲ್ಲಿ ಲಕ್ಷ ಪುಷ್ಪ ಬಿಲ್ವಾರ್ಚನೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸ್ವಾಮೀಜಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುವ ಸಲುವಾಗಿ ಇಂತಹ ವ್ಯವಸ್ಥೆಗೆ ಮುಂದಾಗಿತ್ತು. ಮುಂಜಾನೆಯಿಂದಲೇ ಮಠದತ್ತ ಹೆಜ್ಜೆ ಹಾಕಿದ ಭಕ್ತರು ಸ್ವಾಮೀಜಿ ಗದ್ದುಗೆಗೆ ನಮಿಸಿ, ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗಿನ ಜಾವ 4 ಗಂಟೆಗೆ ರುದ್ರಾಭಿಷೇಕ, ಪೂಜೆ, ಪುಷ್ಪ ಬಿಲ್ವಾರ್ಚನೆ ಮೊದಲಾದ ಕಾರ್ಯಕ್ರಮಗಳು ಇದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಸಮೇತ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ನಮಿಸಿದರು. ಕೆಲ ಹೊತ್ತು ಮಠದ ಮಕ್ಕಳ ಜತೆಗೆ ಇದ್ದರು. ಸಿದ್ಧಲಿಂಗ ಸ್ವಾಮೀಜಿ ಜತೆಗೆ ಚರ್ಚಿಸಿ, ಅಲ್ಲಿಂದ ತೆರಳಿದರು.

ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಮಾಡಿ, ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಸಂಜೆವರೆಗೂ ಭಕ್ತರು ಬರುತ್ತಲೇ ಇದ್ದರು. ಬಂದ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ಜ್ಯೋತಿಗಣೇಶ್, ಮುಖಂಡ ಸೊಗಡು ಶಿವಣ್ಣ ಇದ್ದರು. ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರು, ಕಾರ್ಯದರ್ಶಿ ಪ್ರಪುಲ್ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಚಂಗಾವಿ ರವಿ, ಗೌರವಾಧ್ಯಕ್ಷ ರುದ್ರೇಶ್, ಪ್ರಧಾನ ಕಾರ್ಯದರ್ಶಿ ಬಸವರಾಜು, ಉಪಾಧ್ಯಕ್ಷ ಮುನಿ ಬಸವರಾಜು, ಪುಷ್ಪರಾಜ್ ಇತರರು ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು