ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣ...ನಡಿಯಣ್ಣ ಎನ್ನುತ್ತ ಒತ್ತುವರಿ ತೆರವು: ಸಚಿವ ಮಾಧುಸ್ವಾಮಿ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ‘ಅಟಲ್‌ ಭೂಜಲ’ ಯೋಜನೆ ಕುರಿತು ಜನಜಾಗೃತಿ ಅಭಿಯಾನ
Last Updated 2 ಮಾರ್ಚ್ 2020, 12:47 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿನ ಕೆರೆ, ಹಳ್ಳ–ಕೊಳ್ಳದಂತಹ ಜಲಮೂಲಗಳ ಒತ್ತುವರಿ ತೆರವನ್ನು ಬೇಗ ಆರಂಭಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಅಂತರ್ಜಲ ನಿರ್ದೇಶನಾಲಯ ಹಮ್ಮಿಕೊಂಡಿದ್ದ ‘ಅಟಲ್‌ ಭೂಜಲ ಯೋಜನೆ: ಅಂತರ್ಜಲ ಜನಜಾಗೃತಿ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒತ್ತುವರಿ ಮಾಡಿಕೊಂಡಿರುವ ಜನರಿಗೆ ‘ಅಣ್ಣ ನಡಿಯಣ್ಣ ನೀನು, ಇಷ್ಟು ವರ್ಷಗಳ ಕಾಲ ಮಾಡಿಕೊಂಡು ತಿಂದಿದಿಯಾ, ಸಾಕು’ ಎಂದು ಬುದ್ಧಿವಾದ ಹೇಳಿ, ಜಲಮೂಲಗಳನ್ನು ಮರಳಿ ಪಡೆಯುತ್ತೇವೆ. ಅದರಲ್ಲಿ ಹೂಳು ತುಂಬಿಕೊಂಡಿದ್ದರೆ, ತೆಗೆಸುತ್ತೇವೆ ಎಂದು ಅವರು ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು, ಜನರಿಗೆ ನೀರಾವರಿಯ ಕುರಿತು ಪ್ರಾಥಮಿಕ ಅರಿವು ಮೂಡಿಸಬೇಕಿದೆ. ಆ ಕೆಲಸವನ್ನು ಅಟಲ್ ಭೂಜಲ್‌ ಯೋಜನೆಯಡಿ ಮಾಡಲಾಗುತ್ತದೆ. ಇದನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ರೈತರ ಆದಾಯ ಹೆಚ್ಚಳ ಆಗುತ್ತದೆ ಎಂದರು.

ಪೂರ್ವಜರು 10–12 ಅಡಿ ಆಳದವರೆಗೆ ನೆಲ ತೋಡಿ ನೀರು ಪಡೆಯುತ್ತಿದ್ದರು. ಇಂದಿನ ಶ್ರಮ ವಿಲ್ಲದ, ‘ಬಟನ್‌ ತಾಂತ್ರಿಕತೆ’ಯಲ್ಲಿ ಸಾವಿರಾರು ಅಡಿ ಆಳದ ನೀರನ್ನು ಹೆಚ್ಚು ಹೀರುತ್ತಿದ್ದೇವೆ. ಇದರಿಂದ ಪ್ರಕೃತಿಯಲ್ಲಿಯೂ ಅಸಮತೋಲನ ಉಂಟಾಗುತ್ತಿದೆ. ಇದು ಅಪಾಯಕಾರಿ ನಡೆ ಎಂದು ಎಚ್ಚರಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯದಲ್ಲಿ ಈಗಾಗಲೇ 3 ಲಕ್ಷ ಕೊಳವೆಬಾವಿಗಳು ವಿಫಲವಾಗಿವೆ. ಅವುಗಳನ್ನು ಕೊರೆಸಿ, ಕೊಳವೆ, ಎಲೆಕ್ಟ್ರಾನಿಕ್‌ ಪರಿಕರಗಳನ್ನು ಜೋಡಿಸಲು ಸುಮಾರು ₹4,000 ಕೋಟಿ ವ್ಯಯಿಸಲಾಗಿತ್ತು. ಇದು ರಾಷ್ಟ್ರೀಯ ನಷ್ಟವಲ್ಲವೇ ಎಂದು ಪ್ರಶ್ನಿಸಿದರು.

ಅಂತರ್ಜಲ ನಿರ್ದೇಶನಾಲಯದ ಬಿ.ಟಿ.ಕಾಂತರಾಜು, ರಾಜ್ಯದ 45 ತಾಲ್ಲೂಕುಗಳನ್ನು ಅಂತರ್ಜಲ ಮರುಪೂರಣಕ್ಕಿಂತ ಹೆಚ್ಚಿನ ನೀರನ್ನು ಕೊಳವೆಬಾವಿಗಳ ಮೂಲಕ ಪಂಪ್‌ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಂತರ್ಜಲ ನಿತ್ಯ ಕುಸಿಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆನೀರು ಬೇರೆ ಕಡೆ ಹರಿದು ಹೋಗುತ್ತದೆ. ಹಾಗಾಗಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚಿದೆ. ಬೇರೆ ಜಿಲ್ಲೆಯಿಂದ ನೀರನ್ನು ಇಲ್ಲಿಗೆ ತರಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 2.5 ಲಕ್ಷ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅದರಲ್ಲಿ ಎಷ್ಟು ವಿಫಲವಾಗಿವೆ ಎಂಬ ಮಾಹಿತಿಯಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದ ಎನ್‌.ನರಸಿಂಹಮೂರ್ತಿ, ಶಾಸಕ ಎಂ.ವಿ.ವೀರಭದ್ರಯ್ಯ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಜಿಲ್ಲಾಧಿಕಾರಿ ಕೆ.ರಾಕೇಶ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ನಿರ್ದೇಶನಾಲಯದ ಉಪನಿರ್ದೇಶಕ ಜಿ.ಜಯಣ್ಣ ಇದ್ದರು.

‘ಕೆರೆಯಲ್ಲಿ ಮರಳು ತೆಗೆಯುವಂತಿಲ್ಲ’

ಕೆರೆ ಅಂಗಳದಿಂದ ಮರಳನ್ನು ತೆಗೆಯಲು ಬಿಡಲೇಬಾರದು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮರಳುನೀತಿ ರಚನೆ ಆದ ಬಳಿಕ, ಮರಳು ತೆಗೆಯಲು ಅನುಮತಿ ನೀಡುವ ಕುರಿತು ಯೋಚಿಸುತ್ತೇವೆ. ಈಗ ನಡೆದಿರುವ ಮರಳು ದಂಧೆಗೆ ಇತಿಶ್ರೀ ಹಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ರೈತರು ಸಹ ಸ್ಥಳೀಯ ಪ್ರಕೃತಿಗೆ ಹೊಂದಿಕೆ ಆಗುವಂತ ಬೆಳೆಗಳನ್ನು ಬೆಳೆಯಬೇಕು. ಸ್ಥಳೀಯ ಮಣ್ಣಿನ ಗುಣಮಟ್ಟ, ಹವಾಮಾನ, ನೀರಿನ ಬಳಕೆಯ ಕುರಿತು ಕೈಪಿಡಿ ತಯಾರಿಸಿ ಹಂಚುತ್ತೇವೆ. ಮನೆಯಲ್ಲೇ ಕುಳಿತು ಆ್ಯಪ್‌ ಮೂಲಕ ಬೆಳೆಗಳಿಗೆ ನೀರು ಹರಿಸುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿ, ಅದನ್ನು ರೈತರ ಬಳಕೆಗೆ ನೀಡಲು ಯೋಜಿಸುತ್ತಿದ್ದೇವೆ ಎಂದು ಮಾಧುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT